ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅಂತ ಯಾರು ಬೇಕಾದರು ಹೇಳಿಕೊಳ್ಳಬಹುದು. ರಾಜಕೀಯ ವಾಸ್ತವಾಂಶಗಳ ಬಗ್ಗೆ ಲೆಕ್ಕಾಚಾರ ಮಾಡಿಯೇ ಉಭಯ ಪಕ್ಷಗಳ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಅಂತ ಯಾರು ಬೇಕಾದರು ಹೇಳಿಕೊಳ್ಳಬಹುದು. ರಾಜಕೀಯ ವಾಸ್ತವಾಂಶಗಳ ಬಗ್ಗೆ ಲೆಕ್ಕಾಚಾರ ಮಾಡಿಯೇ ಉಭಯ ಪಕ್ಷಗಳ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ತೀರ್ಮಾನವನ್ನು ನನಗೆ ಬಿಟ್ಟಿದ್ದಾರೆ. ನಾನು ಬಿಜೆಪಿಯ ರಾಜ್ಯ ನಾಯಕರೊಂದಿಗೆ ಚರ್ಚೆ ಮಾಡುತ್ತೇನೆ. ನಮಗೆ ಎನ್‌ಡಿಎ ಸ್ಥಾನ ಗೆಲ್ಲಬೇಕು ಅನ್ನೋದು ಅಷ್ಟೇ ಉದ್ದೇಶ. ಇದರಲ್ಲಿ ದುಡುಕುವುದಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಜೊತೆ ಈಗಾಗಲೇ ಮಾತನಾಡಿದ್ದೇನೆ. ಪ್ರಮುಖರು ಕೂತು ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಚರ್ಚೆ ಮಾಡೋಣ ಎಂದಿದ್ದೇನೆ. ನಾಳೆ ಮಂಡ್ಯದಲ್ಲಿ ಉದ್ಯೋಗ ಮೇಳ ಇದೆ.
ಹಾಗಾಗಿ ನಾಳಿದ್ದು ಎರಡೂ ಪಕ್ಷದ ನಾಯಕರು ಕೂತು ಚರ್ಚೆ ಮಾಡುತ್ತೇವೆ. ಈಗಿಲ್ಲಿ ಮೂರು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತ್ರ ಸಭೆ ಮಾಡುತ್ತಿದ್ದೇನೆ. ಚುನಾವಣಾ ಕೆಲಸ ಯಾವರೀತಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ಮೂರು ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ರಾಜಕೀಯ ಪ್ರಕ್ರಿಯೆ ಆರಂಭ:
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಶಿಗ್ಗಾಂವಿ, ಸಂಡೂರಲ್ಲಿ ನಮ್ಮ ಪಾತ್ರ ಕಡಿಮೆ ಇರಬಹುದು. ಆದರೆ, ಒಂದೊಂದು ಮತ ಕೂಡ ಮುಖ್ಯ ಆಗುತ್ತದೆ. ಎಲ್ಲವನ್ನೂ ಒಳಗೊಂಡಂತೆ ಚರ್ಚೆ ಮಾಡಲು ಕೆಲ ಸೆಲೆಕ್ಟೆಡ್ ನಾಯಕರ ಸಭೆ ಕರೆದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣಾ ಚಟುವಟಿಕೆಗಳಿಂದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ದೂರ ಉಳಿಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಆ ರೀತಿ ಏನು ಇಲ್ಲ. ನಾವಿನ್ನೂ ಕೋರ್ ಕಮಿಟಿ ಸಭೆಯನ್ನೇ ಕರೆದಿಲ್ಲ. ಅವರಿಗೆ ಒಂದೊಂದು ಸಲ ಹೀಗೆ ಆಗುತ್ತದೆ. ಬಳಿಕ ಅವರೇ ತೀರ್ಮಾನ ಮಾಡಿಕೊಂಡು ಯಾವ ಟೈಂಗೆ ಬರಬೇಕೋ ಬರುತ್ತಾರೆ ಎಂದು ಜಿ.ಟಿ..ದೇವೇಗೌಡರ ನಡೆ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಿಖಿಲ್ ಸ್ಪರ್ಧೆ ಬಗ್ಗೆ ಎಚ್ಡಿಕೆ ಮತ್ತು ದೊಡ್ಡವರ ತೀರ್ಮಾನ: ನಾಡಗೌಡ
ರಾಮನಗರ: ಚನ್ನಪಟ್ಟಣ ಕ್ಷೇತ್ರದ ಪರಿಸ್ಥಿತಿ ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಅವರು ಮತ್ತು ದೊಡ್ಡವರು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇ ಮೈತ್ರಿ ಟಿಕೆಟ್ ಅಂತ ಯೋಗೇಶ್ವರ್ ಹೇಳುತ್ತಿದ್ದಾರೆ. ಆದರೆ, ಯಾರು ಮೈತ್ರಿ ಅಭ್ಯರ್ಥಿ ಆಗಬೇಕು ಅಂತ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರು ತೀರ್ಮಾನಿಸುತ್ತಾರೆ. ನಾವು ಕುಮಾರಸ್ವಾಮಿ ಅವರಿಗೆ ಸಲಹೆ ಕೊಡುವುದು ಏನು ಇಲ್ಲ. ಕುಮಾರಸ್ವಾಮಿ ಹಾಗೂ ದೊಡ್ಡವರು ಏನು ತೀರ್ಮಾನ ಮಾಡುತ್ತಾರೊ ಅದು ಆಗುತ್ತದೆ ಎಂದು ನಾಡಗೌಡ ತಿಳಿಸಿದರು.