ನವದೆಹಲಿ: ‘ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸೀಟು ದಾಟುತ್ತದೆ (ಅಬ್ ಕಿ ಬಾರ್ ಚಾರ್ ಸೌ ಪಾರ್) ಎಂಬ ನನ್ನ ಹೇಳಿಕೆ ಒಂದು ಚುನಾವಣಾ ತಂತ್ರಗಾರಿಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ವಿಪಕ್ಷಗಳಿಗೆ ತಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿ ತಲುಪಿಸಿದರು ಎಂಬುದೇ ಗೊತ್ತಾಗುತ್ತಿಲ್ಲ. ನಾನು ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳಿದ ಮೇಲೆ ಅವು ‘ಮೋದಿ ಈ ಬಾರಿ 400 ಸೀಟು ದಾಟುತ್ತಾರೋ ಇಲ್ಲವೋ’ ಎಂದು ಚರ್ಚೆ ಶುರುಮಾಡಿದವು’ ಎಂದು ಪ್ರಧಾನಿ ಚಟಾಕಿ ಹಾರಿಸಿದ್ದಾರೆ.‘ಇಂಡಿಯಾ ಟೀವಿ’ ಸಂವಾದದಲ್ಲಿ ಮಾತನಾಡಿದ ಅವರು, ‘ಪ್ರತಿಪಕ್ಷಗಳು ಕೇವಲ ನನ್ನನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಅವುಗಳಿಗೆ ನಾನು ಏನು ಮಾಡುತ್ತೇನೆ ಎಂಬುದೇ ಗೊತ್ತಾಗುವುದಿಲ್ಲ. ಅದೇ ಪ್ರಕಾರ ಈಗ ತಾವು ಗೆಲ್ಲುತ್ತೇವೋ ಇಲ್ಲವೋ ಅಥವಾ ಬಿಜೆಪಿಗೆ ಬಹುಮತ ಬರುತ್ತೋ ಇಲ್ಲವೋ ಎಂಬುದನ್ನು ಬಿಟ್ಟು ಮೋದಿಗೆ 400 ಸ್ಥಾನ ಬರುತ್ತೋ ಇಲ್ಲವೋ ಎಂಬ ಚರ್ಚೆಯಲ್ಲಿ ನಿರತವಾಗಿವೆ’ ಎಂದು ಲೇವಡಿ ಮಾಡಿದರು.
ಇನ್ನು ಬಿಜೆಪಿ ಹಾಗೂ ಎನ್‌ಡಿಎನ ‘ಅಬ್ಕಿ ಬಾರ್ 400 ಪಾರ್’ ಎಂಬ ಘೋಷಣೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಅವರು, ‘ಈ ಘೋಷಣೆಯನ್ನುನಾವು ಮಾಡಿದ್ದಲ್ಲ. ಇದು ಜನರ ಹೃದಯದಿಂದ ಬಂದಿದೆ. 2019ರಿಂದ 2024ರವರೆಗೆ ನಮ್ಮ ಎನ್‌ಡಿಎ ಸುಮಾರು 360 ಸ್ಥಾನದವರೆಗೆ ಬಂದು ನಿಂತಿತ್ತು. ಹೆಚ್ಚೂ ಕಡಿಮೆ ನಾವು 400ರ ಸನಿಹದಲ್ಲೇ ಇದ್ದೆವು. ಏಕೆಂದರೆ ನಮ್ಮ ಜತೆ ನಮ್ಮ 2-3 ಮಿತ್ರರು ಉತ್ತಮ ಸ್ಥಾನ ಗೆದ್ದಿದ್ದರು’ ಎಂದರು.
ಇದೇ ವೇಳೆ 400 ಸ್ಥಾನದ ಗುರಿ ಏಕೆ ಎಂಬುದಕ್ಕೆ ಉದಾಹರಣೆ ನೀಡಿದ ಅವರು, ‘ನಿಮ್ಮ ಕುಟುಂಬದಲ್ಲಿ ಒಂದು ಮಗು 90 ಅಂಕಗಳನ್ನು ಗಳಿಸುತ್ತದೆ ಎಂದಿಟ್ಟುಕೊಳ್ಳಿ. ಅವನ ಸ್ಪರ್ಧಿಗಳು 30-40 ಅಂಕಗಳನ್ನು ಪಡೆಯಬಹುದು. ಆಗ ನಿಮ್ಮ ಮಗುವಿಗೆ ನೀವು, ‘ನಿನ್ನ ಸ್ಪರ್ಧಿ 40 ಅಂಕ ಪಡೆದಿದ್ದಾನೆ ಬಿಡು.. ನೀನು 50 ತಗೊಂಡರೆ ಸಾಕು’ ಎನ್ನುವುದಿಲ್ಲ. ಅದರ ಬದಲು ‘ನೀನು ಮುಂದಿನ ಸಲ 95 ಅಂಕ ತೆಗೆದುಕೋ’ ಎನ್ನುತ್ತೇವೆ. ಅದೇ ಸಾಲಿನಲ್ಲಿ ನಾವು ನಮ್ಮ ಮೈತ್ರಿಗೆ, ಕಳೆದ ಸಲದ 360ಕ್ಕಿಂತ ಹೆಚ್ಚಿನದಾದ 400 ಲೋಕಸಭಾ ಸ್ಥಾನಗಳ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಮೋದಿ ಹೇಳಿದರು.ಇನ್ನು ಎನ್‌ಡಿಎಗೆ 400 ಗುರಿ ಆದರೆ ಬಿಜೆಪಿಗೆ ಏಕೆ 370ರ ಗುರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯ ಗುರಿ 370 ಸ್ಥಾನ ಎಂಬುದು ಸೃಜನಶೀಲ ವ್ಯಕ್ತಿಗಳಿಂದ ಬಂದಿದೆ. ನಮ್ಮ ಕಾಶ್ಮೀರದ ಹಿತೈಷಿಯೊಬ್ಬರು 370 ಎಂಬುದು (ಆರ್ಟಿಕಲ್ 370 ಅನ್ನು ಉಲ್ಲೇಖಿಸಿ) ದೇಶದ ಏಕತೆಯನ್ನು ಬಿಂಬಿಸುತ್ತದೆ. ಹೀಗಾಗಿ 370 ಸೀಟುಗಳ ಗುರಿ ಇಟ್ಟುಕೊಳ್ಳಿ ಎಂಬ ಕಲ್ಪನೆ ಮುಂದಿಟ್ಟರು. ಹೀಗಾಗಿ ಇದು ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಆಗಿ ಉಳಿದು ಏಕತೆಯ ಮಹತ್ವವನ್ನು ಜನರು ಅರ್ಥೈಸಿಕೊಳ್ಳಬೇಕು ಎಂಬ ಉದ್ದೇಶದಿಂದ 370ರ ಗುರಿಯನ್ನು ಬಿಜೆಪಿ ಹೊಂದಿದೆ’ ಎಂದು ಸ್ಪಷ್ಟಪಡಿಸಿದರು.