ಮುಂದಿನ ಎಲೆಕ್ಷನ್‌ ಒಳಗೆ ಚೌಟರಿಗೆ ಮದುವೆ!

Published : Jun 01, 2026, 12:34 PM IST
brijesh chauta

ಸಾರಾಂಶ

ನಾನೂ ದಾಂಪತ್ಯದಲ್ಲಿ 20 ವರ್ಷದ ಸಮೀಪಕ್ಕೆ ಮುಟ್ಟಿದ್ದೇನೆ. ಗಾಡಿ ಸಾಗುತ್ತಾ ಇದೆ. ಮದುವೆ ಆಗಬಾರದು ಅಂತ ಇಲ್ಲ. ಗಾಡಿ ಒಮ್ಮೆ ಸ್ಟಾರ್ಟ್ ಆದ ಮೇಲೆ ರನ್ ಆಗುತ್ತಾ ಇರುತ್ತದೆ. ಅದಕ್ಕಾಗಿ ಸಂಸದರು ಮದುವೆ ಆಗದೆ ಇರಬೇಡಿ

 ನಾನೂ ದಾಂಪತ್ಯದಲ್ಲಿ 20 ವರ್ಷದ ಸಮೀಪಕ್ಕೆ ಮುಟ್ಟಿದ್ದೇನೆ. ಗಾಡಿ ಸಾಗುತ್ತಾ ಇದೆ. ಮದುವೆ ಆಗಬಾರದು ಅಂತ ಇಲ್ಲ. ಗಾಡಿ ಒಮ್ಮೆ ಸ್ಟಾರ್ಟ್ ಆದ ಮೇಲೆ ರನ್ ಆಗುತ್ತಾ ಇರುತ್ತದೆ. ಅದಕ್ಕಾಗಿ ಸಂಸದರು ಮದುವೆ ಆಗದೆ ಇರಬೇಡಿ. ನಾವೆಲ್ಲ ಶುಭ ಹಾರೈಸುತ್ತೇವೆ. ನೀವು ಇನ್ನು ಮದುವೆ ಆಗಬಹುದು.

ಮದುವೆಯಾದ ಬಹುತೇಕರಿಗೆ ಅವಿವಾಹಿತರನ್ನು ಕಂಡರೆ ಸಾಕು... ಮದುವೆ ಆಗು, ಯಾವಾಗ ಮದುವೆ ಆಗ್ತಿಯಾ ಎಂದೆಲ್ಲಾ ಕೇಳುವುದು ಸಾಮಾನ್ಯ. ಆದರೆ ಇಲ್ಲಿ ಮೋಸ್ಟ್‌ ಎಲಿಜಬಲ್‌ ಅವಿವಾಹಿತ ಸಂಸದರೊಬ್ಬರಿಗೆ ಸಂಸಾರಿ ಶಾಸಕರೇ ಮದುವೆ ಆಗುವಂತೆ ಬಹಿರಂಗವಾಗಿ ಧೈರ್ಯ ತುಂಬಿದ್ದಾರೆ!

ಇತ್ತೀಚೆಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹಿರಿಯ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್.ರೈ ದಂಪತಿಯ ವೈವಾಹಿಕ ಬದುಕಿನ 50ರ ಸಂಭ್ರಮದ ‘ಸೀತಾ-ಕಸ್ತೂರಿ ಕಲ್ಯಾಣ’ ಸಮಾರಂಭದಲ್ಲಿ ದಕ್ಷಿಣ ಕನ್ನಡ ಸಂಸದ ಅವಿವಾಹಿತ ಕ್ಯಾಪ್ಟನ್‌ ಬ್ರಿಜೇಶ್ ಚೌಟರಿಗೆ ಮದುವೆ ಮಾಡಿಸುವ ವಿಚಾರ ಮಂಡನೆಯಾಯಿತು.

ಮೊದಲಿಗೆ ಮಾತನಾಡಿದ ಕ್ಯಾ.ಬ್ರಿಜೇಶ್ ಚೌಟ, ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಏನು ಮಾತನಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಒಂದು ಸಂಸ್ಥೆಯನ್ನು ೫೦ ವರ್ಷ ನಡೆಸಲು ತುಂಬಾ ಕಷ್ಟವಿದೆ. ಅದೇ ರೀತಿ, ದಾಂಪತ್ಯ ಜೀವನವನ್ನು ೫೦ ವರ್ಷ ನಡೆಸಲು ಖಂಡಿತವಾಗಿಯೂ ಕಷ್ಟ. ದಾಂಪತ್ಯ ಜೀವನಕ್ಕೆ ಕಾಲಿಡಲು ಧೈರ್ಯವಿಲ್ಲದ ನನ್ನಂಥವನಿಗೆ ಇದೊಂದು ಸಾಧನೆಯ ಮೈಲಿಗಲ್ಲು’ ಎಂದರು.

ನಂತರ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ೫೦ ವರ್ಷ ದಾಂಪತ್ಯ ಜೀವನ ಪೂರೈಸಿದ ತುಂಬಾ ದಂಪತಿ ಇದ್ದಾರೆ. ನಾನೂ ದಾಂಪತ್ಯದಲ್ಲಿ 20 ವರ್ಷದ ಸಮೀಪಕ್ಕೆ ಮುಟ್ಟಿದ್ದೇನೆ. ಗಾಡಿ ಸಾಗುತ್ತಾ ಇದೆ. ಮದುವೆ ಆಗಬಾರದು ಅಂತ ಇಲ್ಲ. ಗಾಡಿ ಒಮ್ಮೆ ಸ್ಟಾರ್ಟ್ ಆದ ಮೇಲೆ ರನ್ ಆಗುತ್ತಾ ಇರುತ್ತದೆ. ಅದಕ್ಕಾಗಿ ಸಂಸದರು ಮದುವೆ ಆಗದೆ ಇರಬೇಡಿ. ನಾವೆಲ್ಲ ಶುಭ ಹಾರೈಸುತ್ತೇವೆ. ನೀವು ಇನ್ನು ಮದುವೆ ಆಗಬಹುದು. ಮದುವೆ ಆಗುವುದಾದರೆ ಎಷ್ಟೋ ಹುಡುಗಿಯರು ಕಾಯುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲ’ ಎಂದರು.

ಈ ವೇಳೆ ವೇದಿಕೆಯಲ್ಲಿ ಕೂತಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಮೋಹನ್ ಆಳ್ವರು ‘ಹುಡುಗಿಯಲ್ಲ, ಹೆಂಗಸು’ ಎಂದು ತಿದ್ದಿದರು. ಅದಕ್ಕೆ ಅಶೋಕ್ ರೈ ಅವರು, ‘ಇಲ್ಲ ಅವರಿಗೆ ಅಷ್ಟು ಪ್ರಾಯ ಆಗಿಲ್ಲ. ಹುಡುಗಿಯರೇ ಅವರಿಗಾಗಿ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯೊಳಗೆ ನಾವು ಮದುವೆ ಮಾಡಿಸುತ್ತೇವೆ. ಒಂಟಿ ಜೀವನ ಸ್ವಲ್ಪ ಸಮಯ ಒಳ್ಳೆಯದಾಗಿ ಕಾಣುತ್ತದೆ. ದಾಂಪತ್ಯ ಜೀವನದಲ್ಲಿ ಸ್ವಲ್ಪ ಆ ಕಡೆ, ಈ ಕಡೆ ಇರುತ್ತದೆ. ಹೊಂದಾಣಿಕೆ ಇದ್ದಲ್ಲಿ ದಾಂಪತ್ಯ ಜೀವನ ಜೊತೆಯಲ್ಲಿ ಸಾಗುತ್ತದೆ. ನಾವೆಲ್ಲರೂ ಸೇರಿ ಮುಂದಿನ ಚುನಾವಣೆ ಒಳಗೆ ಚೌಟರಿಗೆ ಮದುವೆ ಮಾಡಿಸೋಣ’ ಎಂದರು. ಈ ಮಾತಿಗೆ ನೆರೆದಿದ್ದ ಜನ ನಗೆಯೊಂದಿಗೆ ಶಾಸಕರ ಪ್ರಸ್ತಾಪಕ್ಕೆ ಅನುಮೋದನೆ ನೀಡಿದರು.

‘ಮೋಹದ ಹೆಂಡತಿ ತೀರಿದ ಬಳಿಕ....’ ಆಕ್ರೋಶ

ಕೆಲವು ಸಾರಿ ಎಲ್ಲಿ, ಯಾವಾಗ, ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲದಿದ್ದರೆ ಆಭಾಸ ಆಗಿ ಇರಿಸು-ಮುರಿಸು ಆಗುವ ಪ್ರಸಂಗಗಳನ್ನು ಆಯೋಜಕರು ಎದುರಿಸಬೇಕಾಗುತ್ತದೆ. ಅದರಲ್ಲೂ ಸಂಭ್ರಮದ ಸಮಾರಂಭದಲ್ಲಿ ತರಲೆ ಹಾಡು, ಶೋಕ ಗೀತೆ ಹಾಡಿದರೆ ಕೇಳುಗರು ರೊಚ್ಚಿಗೆಳುವ ಪ್ರಸಂಗಗಳು ಸಾಕಷ್ಟು ನಡೆದಿವೆ. ಕೆಲ ಸಾರಿ ದೊಡ್ಡ ಗಲಾಟೆಗಳು ಸಹ ಸಂಭವಿಸಿವೆ.

ಸರ್ಕಾರದ ಸಮಾರಂಭಗಳು ಆರಂಭವಾಗುವ ಮುನ್ನ, ವಿಳಂಬವಾದಾಗ ಸಭಿಕರನ್ನು ಹಿಡಿದಿಟ್ಟುಕೊಳ್ಳಲು, ಗಾಯಕರು, ಕಲಾವಿದರಿಂದ ವಿವಿಧ ಗೀತೆ ಹಾಡಿಸುವುದು ಮಾಮೂಲಿ. ಇತ್ತೀಚೆಗೆ ಆನೇಕಲ್‌ನಲ್ಲಿ ನಡೆದ ಸಂಭ್ರಮ ಕಾರ್ಯಕ್ರಮದಲ್ಲಿ ಶೋಕಗೀತೆ ಹಾಡಿದಾಗ ಸಾರ್ವಜನಿಕರು ಆಕ್ಷೇಪಿಸಿದ ಪ್ರಸಂಗ ನಡೆಯಿತು.

ನಡೆದಿದ್ದು ಇಷ್ಟೇ.. ಆನೇಕಲ್‌ನಲ್ಲಿ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಶಂಕು ಸ್ಥಾಪನೆ ಸಮಾರಂಭದಲ್ಲಿ ಗಾಯಕರೊಬ್ಬರು ವಿವಿಧ ಪ್ರಕಾರದ ಹಾಡಿದ ನಂತರ ಶಿಶುನಾಳ ಶರೀಫರ ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ’ ಹಾಡು ಹಾಡಿದರು.

ಆದರೆ, ಈ ಹಾಡು ಕೇಳುತ್ತಿದ್ದಂತೆ ರೊಚ್ಚಿಗೆದ್ದ ಸಭಿಕರೊಬ್ಬರು ಎದ್ದುನಿಂತು ‘ಈ ಹಾಡು ನಿಲ್ಲಿಸಿರಿ. ನಾವು ಶುಭ ಕಾರ್ಯಕ್ಕೆ ಬಂದಿದ್ದು, ಶೋಕ ಕಾರ್ಯಕ್ರಮಕ್ಕೆ ಅಲ್ಲ. ಶುಭ ಕಾರ್ಯದಲ್ಲಿ ಯಾವ ಹಾಡು ಹಾಡಬೇಕು ಎಂದು ಗೊತ್ತಿಲ್ಲವೇ?’ ಎಂದು ಕೂಗಾಡಿದರು. ಆಗ ಅವರ ಜೊತೆಗಿದ್ದವರೂ ಕೂಡ ಆಕ್ಷೇಪ ಎತ್ತಿದರು. ಆದರೆ, ಅಬ್ಬರದ ಸ್ಪೀಕರ್ ಸೌಂಡ್ ನಡುವೆ ಆಕ್ಷೇಪದ ಧ್ವನಿ ವೇದಿಕೆವರೆಗೆ ಕೇಳಿಸಲೇ ಇಲ್ಲ. ಗಾಯಕರು ಆ ಹಾಡು ಪೂರ್ಣಗೊಳಿಸಿಯೇ ಬಿಟ್ಟರು.

-ಸಂಶುದ್ದೀನ್ ಸಂಪ್ಯ

-ಮಂಜುನಾಥ ನಾಗಲೀಕರ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಚಿವ ಸ್ಥಾನಕ್ಕಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ, ಹರಕೆ
ಡಿಕೆಶಿ, ಸಿದ್ದು ಇಂದು ದೆಹಲಿಗೆ ಪ್ರಯಾಣ