ವಿದ್ಯುತ್, ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork | Published : Nov 4, 2023 12:32 AM

ಸಾರಾಂಶ

ವಿದ್ಯುತ್ ಮತ್ತು ರೈಲ್ವೆಯನ್ನು ಕೆಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿ ನಗರದಲ್ಲಿ ಸಿಐಟಿಯು ವತಿಯಿಂದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಚಾಮರಾಜೇಶ್ವರ ದೇಗುಲದಿಂದ ರೈಲ್ವೇ ನಿಲ್ದಾಣದವರೆಗೆ ಪ್ರತಿಭಟನಾ ರ್‍ಯಾಲಿ। ರೈಲ್ವೆ ಅಧಿಕಾರಿಯ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಕನ್ನಡಪ್ರಭ ವಾರ್ತೆ ಚಾಮರಾಜನಗರ ವಿದ್ಯುತ್ ಮತ್ತು ರೈಲ್ವೆಯನ್ನು ಕೆಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿ ನಗರದಲ್ಲಿ ಸಿಐಟಿಯು ವತಿಯಿಂದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ರೈಲ್ವೆ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಕೆಲಕಾಲ ಧರಣಿ ನಡೆಸಿ ರೈಲ್ವೆ ನಿಲ್ದಾಣದ ಅಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ಮುಂದಾಳತ್ವ ವಹಿಸಿ ಮಾತನಾಡಿದ ಮುಖಂಡ ರಾಮಕೃಷ್ಣ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಕಾರ್ಪೊರೇಟ್ ಬಂಡವಾಳ ದರ, ನವ ಉದಾರವಾದ ನೀತಿಗಳನ್ನು ಅಕ್ರಮವಾಗಿ ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ವರ್ಗ ಸಂಕಷ್ಟಕ್ಕೊಳಗಾಗಿದೆ. ದೇಶದ ಅರ್ಥಿಕತೆಯ ಬೆನ್ನೆಲುಬಾದ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿ ಸರ್ಕಾರಿ ಸ್ವಾಮ್ಯದ ಸಾರಿಗೆ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆರೋಪಿಸಿದರು, ವಿದ್ಯುತ್ ರಂಗವನ್ನು ಸಂಪೂರ್ಣ ಖಾಸಗೀಕರಣ ಮಾಡಲು ವಿದ್ಯುತ್ ತಿದ್ದುಪಡಿ ಮಸೂದೆ ೨೦೨೩ ನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಿದೆ. ಇದರಿಂದ ರೈತರು ಮತ್ತು ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರಲಿದ್ದು, ಎಲ್ಲರೂ ಒಗ್ಗೂಡಿ ಧಿಕ್ಕರಿಸಬೇಕೆಂದು ಮನವಿ ಮಾಡಿದರು. ವಿದ್ಯುತ್ ತಿದ್ದುಪಡಿ ಮಸೂದೆ ೨೨೨ನ್ನು ಕೇಂದ್ರ ಸರ್ಕಾರ ವಾಪಸು ಪಡೆಯಬೇಕು, ವಿದ್ಯುತ್ ಉತ್ಪಾದನೆ, ಸಾಗಾಣಿಕೆ, ವಿತರಣೆಯನ್ನು ಸರ್ಕಾರವೇ ನಿರ್ವಹಿಸಬೇಕು, ಕಾರ್ಪೊರೇಟ್ ಬಂಡವಾಳಗಾರರಿಗೆ ನೀಡುವ ರಿಯಾಯಿತಿಗಳನ್ನು ನಿಲ್ಲಿಸಬೇಕು, ಸಂಪನ್ಮೂಲಗಳ ಕ್ರೋಢೀಕರಣ ಮಾಡಬೇಕು. ರೈಲ್ವೆ ಸಾರಿಗೆಯನ್ನು ಸರ್ಕಾರದ ಅಧೀನದಲ್ಲಿಯೇ ನಡೆಸಬೇಕು. ರೈಲ್ವೆಗೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಖಾಸಗೀಕರಣ ನಿಲ್ಲಬೇಕು ಎಂದು ಆರೋಪಿಸಿದರು. ರೈಲ್ವೆಯಲ್ಲಿ ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು. ಖಾಲಿಯಿರುವ ೩ ಲಕ್ಷಕ್ಕೂ ಹೆಚ್ಚು ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಬೇಕು. ರೈಲ್ವೆ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ರೂಪಿಸಬೇಕು, ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು, ರೈಲ್ವೆಯನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸಬೇಕು, ರೈಲ್ವೆ ಪ್ರಯಾಣಕ್ಕೆ ಉತ್ತೇಜಿಸಬೇಕು ಎಂದು ಒತ್ತಾಯಿಸಿದರು, ವಿದ್ಯುತ್ ಮತ್ತು ರೈಲ್ಷೆ ಖಾಸಗೀಕರಣ ನಿಲ್ಲಿಸಬೇಕೆಂಬುದರ ಜೊತೆಗೆ ೨೧ ಅಂಶಗಳ ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನ. ೨೬-೨೮ ರವರೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಸಿದ್ದರಾಜು, ಸುಜಾತ, ನಾಗಮಣಿ, ಗುರುಲಿಂಗಮ್ಮ, ದೊರೆಸ್ವಾಮಿ, ಚಂದ್ರಶೇಖರ್, ಕೃಷ್ಣನಾಯಕ್, ಸಾಹಿದಾಭಾನು, ರೇವಮ್ಮ ಇತರರು ಭಾಗವಹಿಸಿದ್ದರು. -------- ೩ಸಿಎಚ್‌ಎನ್ ೩ ವಿದ್ಯುತ್ ಮತ್ತು ರೈಲ್ವೆಯನ್ನು ಕೆಂದ್ರ ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿದೆ ಎಂದು ಆರೋಪಿಸಿ ನಗರದಲ್ಲಿ ಸಿಐಟಿಯು ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

Share this article