ಸರಣಿ ಸಭೆ ನಡೆಸಿದ ಸಚಿವರಿಗೆ ಸಿಎಂ ಕ್ಲಾಸ್, ಮಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗ್ಯಾರು ಹೇಳಿದ್ದು?

Published : Oct 11, 2024, 05:40 AM ISTUpdated : Oct 11, 2024, 05:41 AM IST
Siddaramaiah

ಸಾರಾಂಶ

ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕುವಂತೆ ಪ್ರತ್ಯೇಕ ಸಭೆ, ರಾಜಕೀಯ ಅಸ್ಥಿರತೆ ಉಂಟಾಗುವಂತೆ ಬಹಿರಂಗ ಹೇಳಿಕೆ ನೀಡುತ್ತಿದ್ದೀರಿ. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. : ಸಿಎಂ ಸಿದ್ದರಾಮಯ್ಯ

ಬೆಂಗಳೂರು : 'ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹುಟ್ಟು ಹಾಕುತ್ತಿದ್ದೀರಿ. ಇಷ್ಟಕ್ಕೂ ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಎಂದು ಹೇಳಿದ್ದು ಯಾರು? ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ.' ಇದು ಸಿದ್ದರಾಮಯ್ಯ ತಮ್ಮ ಸಂಪುಟ ಸದಸ್ಯರಿಗೆ ಗುರುವಾರದ ಸಂಪುಟ ಸಭೆಯಲ್ಲಿ ನೀಡಿದ ಸ್ಪಷ್ಟ ಸಂದೇಶ.

ಸಭೆಯಲ್ಲಿ ಕೆಲ ಸಚಿವರು ಹಾಗೂ ನಾಯಕರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಅವರು, 'ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕುವಂತೆ ಪ್ರತ್ಯೇಕ ಸಭೆ, ರಾಜಕೀಯ ಅಸ್ಥಿರತೆ ಉಂಟಾಗುವಂತೆ ಬಹಿರಂಗ ಹೇಳಿಕೆ ನೀಡುತ್ತಿದ್ದೀರಿ. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್ ಯಾವುದೇ ಕಠಿಣ ಕ್ರಮ ಕೈಗೊಂಡರೂ ನಾನು ಹೊಣೆಯಲ್ಲ' ಎಂದು ಪರೋಕ್ಷವಾಗಿ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಸಂದೇಶ:

ಪಕ್ಷದ ಶಿಸ್ತು ಉಲ್ಲಂಘಿಸುವ ಯಾವುದೇ ಚಟುವಟಿಕೆಗೂ ಅವಕಾಶ ನೀಡಬಾರದು ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಹೀಗಾಗಿ ಯಾವುದೇ ನಾಯ ಕರೂ ಅನಗತ್ಯ ಹೇಳಿಕೆಗಳನ್ನು ನೀಡಬಾರದು. ಕೇವಲ ಇಲಾಖೆಗಳ ಅಭಿವೃದ್ದಿ ಕಾರ್ಯಗಳತ್ತ ಗಮನ ಹರಿಸಬೇಕು. ವಿನಾಕಾರಣ ಪ್ರತಿಪಕ್ಷಗಳಿಗೆ ಆಹಾರ ಆಗುವಂತೆ ವರ್ತಿಸಬಾರದು ಎಂದು ಸ್ಪಷ್ಟಪಡಿಸಿದರು ಎಂದು ತಿಳಿದು ಬಂದಿದೆ.

ರಾಜೀನಾಮೆ ನೀಡಲ್ಲ:

ಇದೇ ವೇಳೆ ಮುಡಾ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಇದು ಪ್ರತಿಪಕ್ಷಗಳ ಷಡ್ಯಂತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ವರಿಷ್ಠರು ಸಹ ಈಗಾಗಲೇ ಈ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಸಂಪುಟ ಸಭೆಗೆ ತಿಳಿಸಿದರು. ಸಿಎಂಗೆ ಸಂಪುಟ ಬೆಂಬಲ: ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, 'ಎಲ್ಲಾ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಲ್ಲಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ' ಎಂದು ಹೇಳಿದರು.

ಶಿಸ್ತು ಉಲ್ಲಂಘಿಸಿದರೆ ನೋಟಿಸ್‌ ಕೊಡಿ:

ಡಿಕೆಶಿಗೆ ಖರ್ಗೆ ಸೂಚನೆ ಮುಖ್ಯಮಂತ್ರಿ ಬದಲಾವಣೆ ಹೇಳಿಕೆ, ಪ್ರತ್ಯೇಕ ಸಭೆಗಳ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದ್ದು, ಪಕದ ಶಿಸ್ತು ಉಲ್ಲಂಘಿಸುವ ನಾಯಕರಿಗೆ ನೋಟಿಸ್ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ. ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದ ಹೊರತಾಗಿಯೂ ಕೆಲ ನಾಯಕರು ಸುಮ್ಮನಾಗಿಲ್ಲ. ಹೀಗಾಗಿ ಶಿಸ್ತು ಉಲ್ಲಂಘಿಸಿದರೆ ನೋಟಿಸ್ ಜಾರಿ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪ್ರಿಯಾಂಕಾ ಗಾಂಧಿಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ!
''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''