ಸಿದ್ದರಾಮಯ್ಯ ಜೊತೆ ಸಿಎಂ ಸುದೀರ್ಘ ಮಾತುಕತೆ - ಸಿದ್ದು ಜತೆ ಮುನಿಸಿಲ್ಲ: ಡಿಕೆ

Published : Nov 10, 2026, 06:06 AM IST
DK Shivakumar Siddaramaiah

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ತಿಳಿಸುವ ಜತೆಗೆ ಸ್ಟಿಂಗ್ ಆಪರೇಷನ್‌ ತನಿಖೆ, ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಿಂದ ವಾಪಸಾದ ಬೆನ್ನಲ್ಲೇ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ತಿಳಿಸುವ ಜತೆಗೆ ಸ್ಟಿಂಗ್ ಆಪರೇಷನ್‌ ತನಿಖೆ, ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಈ ನಡುವೆ, ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಕೆಲವರು ನಮ್ಮ ನಡುವೆ ಮುನಿಸು ಇದೆ ಎಂಬ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ರಾಜಕಾರಣದಲ್ಲಿ ನಿಂದಕರು ಇರಬೇಕು, ವಿರೋಧಿಗಳೂ ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂಥವರು ಶುದ್ಧ ರಾಜಕಾರಣ ಮಾಡಲು ಸಾಧ್ಯ ಎಂದರು.

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಮಹಾಸ್ವಾಮಿಗಳೂ (ಎಚ್‌.ಡಿ.ಕುಮಾರಸ್ವಾಮಿ) ಸೇರಿ ಕೆಲವರು ಮಾಧ್ಯಮಗಳಲ್ಲಿ ವಿಭಿನ್ನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿ ನಾವು ಅವರಿಗೆ ತಿಳಿಸಬೇಕಾದ ವಿಷಯಗಳನ್ನು ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ನಮ್ಮ ನಾಯಕರು.‌ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ.‌ ಹೀಗಾಗಿ ಅವರ ಬಳಿ ಅನೇಕ ವಿಚಾರ ಚರ್ಚೆ ಮಾಡಬೇಕಾಗಿದ್ದರಿಂದ‌ ಅವರನ್ನು ಭೇಟಿ‌ಯಾಗಿದ್ದೇನೆ, ದೀಪಾವಳಿ ಹಬ್ಬದ ಶುಭಾಶಯವನ್ನೂ ಕೋರಿದ್ದೇನೆ ಎಂದಷ್ಟೇ ತಿಳಿಸಿದರು.

ಸ್ಟಿಂಗ್‌ ತನಿಖೆ, ಸಂಪುಟ ವಿಸ್ತರಣೆ ಚರ್ಚೆ:

ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್‌ ಅವರು ಸುದೀರ್ಘ ಮಾತುಕತೆ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಷಡ್ಯಂತ್ರ ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಇತ್ತೀಚೆಗೆ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು, ಸ್ಟಿಂಗ್‌ ಪ್ರಕರಣದಲ್ಲಿ ಪಕ್ಷದ ನಾಯಕರ ಪಾತ್ರದ ಕುರಿತು ಅನುಮಾನ ಹಾಗೂ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಹಾಗೂ ರಾಜ್ಯದಲ್ಲಿ ಯಾವ ರೀತಿ ವಿಷಯ ಬಿಂಬಿತವಾಗಿದೆ ಎಂಬುದನ್ನೂ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಇದಾದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ಭೇಟಿ ನೀಡಿ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸ್ಟಿಂಗ್‌ ವಿಚಾರ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ಇಬ್ಬರೂ ನಾಯಕರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು. ಒಟ್ಟಾಗಿ ಕುಳಿತು ಮಾತನಾಡಿ ಗೊಂದಲ ಬಗೆಹರಿಸಿಕೊಳ್ಳದಿದ್ದರೆ ಪಕ್ಷಕ್ಕೆ ಡ್ಯಾಮೇಜ್‌ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಿವಕುಮಾರ್‌, ದೀಪಾವಳಿ ಶುಭಾಶಯ ಕೋರಿದರು. ಇದೇ ವೇಳೆ ಸ್ಟಿಂಗ್ ತನಿಖೆ ಹೇಗೆ ನಡೆಯುತ್ತಿದೆ? ಈವರೆಗೆ ಯಾವುದೆಲ್ಲಾ ವಿಚಾರ ಹೊರ ಬಂದಿದೆ. ಮುಂದೆ ತನಿಖೆ ಹೇಗೆ ನಡೆಯಲಿದೆ ಹಾಗೂ ಹೇಗೆ ನಡೆಯಬೇಕು ಎಂಬ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಪರಸ್ಪರ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ನಿಗಮ-ಮಂಡಳಿ ನೇಮಕ ಹಾಗೂ ಸಂಪುಟ ವಿಸ್ತರಣೆ ಕುರಿತೂ ಚರ್ಚಿಸಿದ್ದು, ಗೊಂದಲಗಳನ್ನು ಬಗೆಹರಿಸಿಕೊಂಡು ಸದ್ಯದಲ್ಲೇ ನೇಮಕ ಮಾಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

ಮುನಿಸು ಬಿಂಬಿಸಲು ಮಹಾಸ್ವಾಮಿ ಯತ್ನ

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಕೆಲವರು ನಮ್ಮ ನಡುವೆ ಮುನಿಸು ಇದೆ ಎಂಬ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಮಹಾಸ್ವಾಮಿಗಳೂ (ಎಚ್‌.ಡಿ.ಕುಮಾರಸ್ವಾಮಿ) ಸೇರಿ ಕೆಲವರು ಆ ರೀತಿ ಬಿಂಬಿಸುತ್ತಿದ್ದಾರೆ. ರಾಜಕಾರಣದಲ್ಲಿ ನಿಂದಕರು ಇರಬೇಕು, ವಿರೋಧಿಗಳೂ ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂಥವರು ಶುದ್ಧ ರಾಜಕಾರಣ ಮಾಡಲು ಸಾಧ್ಯ.

- ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಫಾರಿನ್‌ನಿಂದ ಮರಳಿದ ಸ್ಟಿಂಗ್‌ ಕೃಪಾ ಆಳ್ವಗೆ ಪೊಲೀಸ್‌ ಗ್ರಿಲ್‌ - 4 ತಾಸು ವಿಚಾರಣೆ
ಹಾಸನಾಂಬೆಯ ಮೇಲಾಣೆ-ಡೀಸಿ ವರ್ಗ ತಡೆಗೆ ನಯಾಪೈಸೆ ಹಣ ಪಡೆದಿಲ್ಲ: ಶಿವಲಿಂಗೇಗೌಡ