ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಿಎಂ-ಖರ್ಗೆ ಚರ್ಚೆ : ಈಗಾಗಲೇ ಅಧ್ಯಕ್ಷ ಹುದ್ದೆ ಬಿಡುವ ಬಗ್ಗೆ ಡಿಕೆಶಿ ಮಾತು

Published : Mar 24, 2025, 07:34 AM IST
Congress chief Mallikarjun Kharge (File photo/ANI)

ಸಾರಾಂಶ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು :  ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಸಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ 100 ಕಚೇರಿಗಳ ಶಂಕುಸ್ಥಾಪನೆ ಬಳಿಕ ತಾವೇ ಹೊಣೆಗಾರಿಕೆ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಡಿ.ಕೆ. ಶಿವಕುಮಾರ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಇನ್ನು ವರಿಷ್ಠರ ಭೇಟಿ ವೇಳೆಯೂ ಜಿ.ಪಂ., ತಾ.ಪಂ. ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.

ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಜ್ಯದಲ್ಲಿ ಒಂದಲ್ಲಾ ಒಂದು ರೀತಿ ಚರ್ಚೆಗೆ ಬರುತ್ತಿದ್ದು, ಭಾನುವಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರೂ ಈ ಕುರಿತು ಚರ್ಚಿಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಲಿಂಗಾಯತರು ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಸಲಹೆ ನೀಡಿದ್ದಾರೆ. ಇದು ಸಲಹೆಯಷ್ಟೇ ನೀವೂ ಕರ್ನಾಟಕದವರೇ ಆಗಿರುವುದರಿಂದ ಅಂತಿಮ ನಿರ್ಧಾರವು ನಿಮಗೆ ಬಿಟ್ಟದ್ದು ಎಂದಿರುವುದಾಗಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಮಹತ್ವದ ಚರ್ಚೆ

ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿಧಾನಪರಿಷತ್‌ನ ಖಾಲಿ ಸ್ಥಾನಗಳ ನೇಮಕದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾನುವಾರ ಮಹತ್ವದ ಚರ್ಚೆ ನಡೆಸಿದ್ದು, ಅಂತಿಮ ಹಂತದ ಚರ್ಚೆಗೆ ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿಯೂ ಚರ್ಚಿಸಿದ್ದು ಏಪ್ರಿಲ್‌ ತಿಂಗಳಿನಲ್ಲಿ ಪುನರ್‌ರಚನೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿದೆ. ಸಂಪುಟದಿಂದ ಐದಾರು ಮಂದಿ ಸಚಿವರನ್ನು ಆ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ.

ಯಾರನ್ನು ಕೈಬಿಡಬೇಕು ಹಾಗೂ ಹೊಸದಾಗಿ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ಮುಂದಿನ ವಾರ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂಎಲ್‌ಸಿ ನಾಮ ನಿರ್ದೇಶನದ ಬಗ್ಗೆ ಚರ್ಚೆ:

ಇನ್ನು ಖಾಲಿ ಆಗಿರುವ ನಾಲ್ಕು ವಿಧಾನಪರಿಷತ್‌ ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭದ ಬಗ್ಗೆಯೂ ಖರ್ಗೆ ಹಾಗೂ ಸಿದ್ದರಾಮಯ್ಯ ಭಾನುವಾರ ಚರ್ಚಿಸಿದ್ದಾರೆ. ಒಂದು ವಾರದಲ್ಲಿ ಸಂಭವನೀಯರ ಪಟ್ಟಿ ಸಿದ್ಧಪಡಿಸಿ ದೆಹಲಿಯಲ್ಲಿ ಅಂತಿಮ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಯು.ಬಿ. ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ. ಯೋಗೇಶ್ವರ್‌, ತಿಪ್ಪೇಸ್ವಾಮಿ ಅವರಿಂದ ನಾಲ್ಕು ಪರಿಷತ್‌ ಸದಸ್ಯ ಸ್ಥಾನಗಳು ತೆರವಾಗಿವೆ. ವಿವಿಧ ಕ್ಷೇತ್ರಗಳಿಂದ ಅರ್ಹರನ್ನು ನಾಮನಿರ್ದೇಶನ ಮಾಡಲು ನಾಲ್ಕು ಸ್ಥಾನಗಳು ಖಾಲಿ ಇರಲಿವೆ. ಈ ಸ್ಥಾನಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಬೇಕು ಎಂಬ ಬಗ್ಗೆ ಮುಂದಿನ ವಾರದ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ವೇಳೆ ಅಂತಿಮವಾಗುವ ಸಾಧ್ಯತೆಯಿದೆ.

ಸಿಎಂ ತಾವೇ ದೆಹಲಿಗೆ ಬರುತ್ತೇನೆ ಎಂದಿದ್ದಾರೆ: ಖರ್ಗೆ

ಸಿದ್ದರಾಮಯ್ಯ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಅವರು ನಮ್ಮ ಮನೆಗೆ ಬರುವುದಾಗಿ ಹೇಳಿದ್ದರು. ಆಗ ನಾನೇ ಆರೋಗ್ಯ ವಿಚಾರಿಸಲು ಬರುತ್ತೇನೆ ಎಂದಿದ್ದೆ. ಈಗ ಆರೋಗ್ಯ ವಿಚಾರಿಸಲು ಭೇಟಿ ಮಾಡಿದ್ದು ಇದು ಸೌಜನ್ಯದ ಭೇಟಿ ಅಷ್ಟೇ. ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆ ಸಂಭ್ರಮಾಚರಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಅವರೇ ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವುಗಳ ಬಗ್ಗೆ ಅಲ್ಲೇ ಚರ್ಚೆ ಮಾಡುತ್ತೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು