ಸಂಖ್ಯಾಬಲದಿಂದ ಸಿಎಂ ನಿರ್ಧಾರ ಆಗಲ್ಲ : ಡಿ.ಕೆ.ಶಿವಕುಮಾರ್‌

Published : Oct 14, 2025, 05:30 AM IST
DK Shivakumar

ಸಾರಾಂಶ

‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಸಂಖ್ಯಾಬಲದಿಂದ ನಿರ್ಧಾರವಾಗುವುದಿಲ್ಲ, ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

  ಬೆಂಗಳೂರು :  ‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಸಂಖ್ಯಾಬಲದಿಂದ ನಿರ್ಧಾರವಾಗುವುದಿಲ್ಲ, ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ನವೆಂಬರ್‌ನಲ್ಲಿ ಯಾವುದೇ ಕ್ರಾಂತಿಯಿಲ್ಲ. ಅದೆಲ್ಲವೂ ಸೃಷ್ಟಿಯಷ್ಟೆ. ಕಾಂಗ್ರೆಸ್‌ ಪಕ್ಷದಲ್ಲಿ ನಿರ್ಧಾರಗಳು ಹೈಕಮಾಂಡ್‌ ಮಟ್ಟದಲ್ಲಿಯೇ ಆಗುತ್ತವೆ. ಸಂಖ್ಯಾಬಲದಿಂದ ಯಾವುದೂ ನಿರ್ಧಾರವಾಗುವುದಿಲ್ಲ. ಹೈಕಮಾಂಡ್‌ ಎಲ್ಲವನ್ನೂ ನಿರ್ಧರಿಸುತ್ತದೆ’ ಎಂದರು.

ಅಲ್ಲದೆ, ‘ಯಾರನ್ನು ಎಲ್ಲಿಡಬೇಕು, ಯಾವಾಗ ಸ್ಥಾನಮಾನ ನೀಡಬೇಕು, ಎಷ್ಟು ದಿನ ಕೊಡಬೇಕು ಎಂಬುದನ್ನೂ ಸಹ ಹೈಕಮಾಂಡ್‌ ತೀರ್ಮಾನಿಸುತ್ತದೆ’ ಎಂದರು.

‘ನನಗೆ ಪಕ್ಷದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ನಮ್ಮ ಅಧಿಕಾರ, ಜವಾಬ್ದಾರಿ ಬಗ್ಗೆ ತಿಳಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ನಾನು ಉಪಮುಖ್ಯಮಂತ್ರಿಯಾಗಿರಬೇಕು ಎಂದು ಹೇಳಿದರು. ನಾವು ಅದರಂತೆ ಒಪ್ಪಿಕೊಂಡು ಬಂದು ಈಗ ಕೆಲಸ ಮಾಡುತ್ತಿದ್ದೇವೆ. ಉಳಿದ ಚರ್ಚೆಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚಿಸುವ ಅವಶ್ಯಕತೆಯಿಲ್ಲ. ದೆಹಲಿ ನಾಯಕರು ನನಗೆ ವಹಿಸಿರುವ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ನಾನು ಈವರೆಗೆ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ. ಕಾಂಗ್ರೆಸ್‌ನ 140 ಶಾಸಕರು ನನಗೆ ಬೇಕಾದವರೇ. ನನಗೆ ಯಾರೂ ಜೈಕಾರ ಹಾಕುವುದು ಬೇಡ. ನನಗೆ ಹಿಂಬಾಲಕರೂ ಬೇಡ. ಹೈಕಮಾಂಡ್‌ ಹೇಳಿದಂತೆ ನಾನು ಕೇಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಹೇಳಿದ್ದೇನು?

- ಯಾರು ಎಲ್ಲಿರಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತೆ

- ಸಿದ್ದು ಸಿಎಂ, ನೀವು ಡಿಸಿಎಂ ಎಂದು ವರಿಷ್ಠರು ಅಂದು ಹೇಳಿದ್ದರು

- ರಾಜ್ಯ ರಾಜಕೀಯದಲ್ಲಿ ನವೆಂಬರ್‌ ಕ್ರಾಂತಿಯೆಂಬುದು ಸೃಷ್ಟಿಯಷ್ಟೆ

- ನಾನು ಯಾವುದೇ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಲ್ಲ

- ಪಕ್ಷದ 140 ಶಾಸಕರು ನನಗೆ ಬೇಕಾದವರೇ. ನನಗೆ ಜೈಕಾರ ಬೇಡ

- ಹೈಕಮಾಂಡ್‌ ಹೇಳಿದಂತೆ ನಾನು ಕೇಳುತ್ತೇನೆ: ಶಿವಕುಮಾರ್ ನುಡಿ

PREV
Read more Articles on

Recommended Stories

ಚುನಾವಣೆಗೆ ಮುನ್ನ ಲಾಲು ಕುಟುಂಬಕ್ಕೆ ಭಾರೀ ಶಾಕ್‌
ಆರೆಸ್ಸೆಸ್‌ ನಿಷೇಧಕ್ಕೆ ಹೇಳಿಲ್ಲ : ಪ್ರಿಯಾಂಕ್