ಅಧಿವೇಶನದಲ್ಲಿ ವಿಪಕ್ಷ ಎದುರಿಸಲು ಸಿಎಂ ತಾಲೀಮು- ಸಚಿವರಿಗೆ ಹಿರಿಯರಿಂದ ಸಲಹೆ, ಮಾರ್ಗದರ್ಶನ

Published : Aug 13, 2026, 06:21 AM IST
DK shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ತಮ್ಮ ಸಂಪುಟ ಸಹೋದ್ಯೋಗಿಗಳ ಸಭೆ ನಡೆಸಿ, ಗುರುವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಬಹುದಾದ ವಿಷಯಗಳನ್ನು ಯಾವ ರೀತಿ ಎದುರಿಸಬೇಕು, ಸರ್ಕಾರವನ್ನು ಸಮರ್ಥಿಸಿಕೊಂಡು ಏಟಿಗೆ ಹೇಗೆ ಎದಿರೇಟು ನೀಡಬೇಕೆಂದು ತಾಲೀಮು ನೀಡಿದ್ದಾರೆ.

 ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ತಮ್ಮ ಸಂಪುಟ ಸಹೋದ್ಯೋಗಿಗಳ ಸಭೆ ನಡೆಸಿ, ಗುರುವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳು ಪ್ರಸ್ತಾಪಿಸಬಹುದಾದ ವಿಷಯಗಳನ್ನು ಯಾವ ರೀತಿ ಎದುರಿಸಬೇಕು, ಸರ್ಕಾರವನ್ನು ಸಮರ್ಥಿಸಿಕೊಂಡು ಏಟಿಗೆ ಹೇಗೆ ಎದಿರೇಟು ನೀಡಬೇಕೆಂದು ತಾಲೀಮು ನೀಡಿದ್ದಾರೆ.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ, ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಸಂಪುಟದ ಎಲ್ಲ ಸಚಿವರು ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದರು.

ಹಳೆಯ ಸಚಿವರ ಜೊತೆಗೆ ಇತ್ತೀಚೆಗೆ ಸಂಪುಟ ಸೇರಿದ ಹೊಸ ಸಚಿವರಿಗೂ ಸದನದಲ್ಲಿ ಹೇಗೆ ತಮ್ಮ ಕಾರ್ಯಗಳನ್ನು ನಿಭಾಯಿಸಬೇಕೆಂದು ಸಲಹೆ, ಸೂಚನೆಗಳನ್ನು ನೀಡಿದರು. ಸಿಎಂ ಅವರು ತಮ್ಮ ಜೊತೆಗೆ ಎಚ್‌.ಕೆ.ಪಾಟೀಲ್‌, ರಮೇಶ್‌ ಕುಮಾರ್‌, ಬಿ.ಎಲ್‌.ಶಂಕರ್‌, ವಿ.ಆರ್‌.ಸುದರ್ಶನ್‌ ಸೇರಿದಂತೆ ಹಲವು ಹಿರಿಯ ಸಚಿವರು, ಮಾಜಿ ಸಭಾಧ್ಯಕ್ಷರು, ಸಭಾಪತಿಗಳನ್ನೂ ಸಭೆಗೆ ಕರೆಸಿ ನೂತನ ಸಚಿವರಿಗೆ ಮಾರ್ಗದರ್ಶನ ಕೊಡಿಸಿದರು. ಒಟ್ಟಾರೆ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ಪ್ರಯೋಗಿಸಬಹುದಾದ ಅಸ್ತ್ರಗಳಿಗೆ ಪ್ರತ್ಯಸ್ತ್ರಗಳನ್ನು ಹೆಣೆಯಲಾಯಿತು ಎಂದು ತಿಳಿದು ಬಂದಿದೆ.

ಸಚಿವರು ಮೊದಲನೆಯದಾಗಿ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಚಾರಗಳಿಗೆ ಸದನದಲ್ಲಿ ಸಮರ್ಪಕವಾದ ಉತ್ತರಗಳನ್ನು ನೀಡಲು ತಯಾರಿರಬೇಕು. ಇಲಾಖೆಗಳ ಹೊರತಾಗಿ ಸರ್ಕಾರವನ್ನು ಗುರಿಯಾಗಿಸಿ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳು ಮುಗಿಬಿದ್ದಾಗ ಒಟ್ಟಾಗಿ ತಕ್ಕ ಉತ್ತರ ಕೊಡಬೇಕು. ನಿರ್ದಿಷ್ಟ ವಿಚಾರಗಳ ಪ್ರಸ್ತಾಪದ ವೇಳೆ ಅಂತಹ ವಿಚಾರಗಳಲ್ಲಿ ಪ್ರತಿಪಕ್ಷಗಳ ಆಡಳಿತದಲ್ಲಿ ಆದ ನಿರ್ಧಾರಗಳೇನು? ವೈಫಲ್ಯಗಳೇನು ಎನ್ನುವ ಬಗ್ಗೆ ಪ್ರತ್ಯುತ್ತರ ನೀಡುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ಸಚಿವರು ತುಂಬಾ ಅಲರ್ಟ್‌ ಆಗಿರಬೇಕು. ಬರೀ ತಮ್ಮ ಇಲಾಖೆ ವಿಚಾರ ಬಂದಾಗ ಮಾತ್ರ ಭಾಗವಹಿಸಿ, ಬಳಿಕ ಎದ್ದುಹೋಗಬಾರದು. ಸಚಿವ ನಾಗೇಂದ್ರ ಮರುಸೇರ್ಪಡೆ, ಬಿಡದಿ ಟೌನ್‌ಶಿಪ್‌ ಸೇರಿದಂತೆ ಪ್ರತಿಪಕ್ಷ ಪ್ರಸ್ತಾಪಿಸುವ ಎಲ್ಲ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮರ್ಥವಾಗಿ ಎದುರಿಸಬೇಕು ಎಂದು ಸಿಎಂ ಒಗ್ಗಟ್ಟಿನ ಪಾಠ ಮಾಡಿದರು ಎನ್ನಲಾಗಿದೆ.

‘ವಿಧಾನಸಭೆಗೆ ಸ್ಪೀಕರ್‌ ಮತ್ತು ವಿಧಾನ ಪರಿಷತ್ತಿಗೆ ಸಭಾಪತಿಗಳನ್ನು ಆಯ್ಕೆ ಮಾಡಬೇಕಿದೆ. ಎರಡೂ ಕಡೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡೋಣ. ಅಧಿವೇಶನವನ್ನು ಫಲಪ್ರದವಾಗಿ ಮಾಡೋಣ’ ಎಂದು ಸಿಎಂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸಮನ್ವಯ ಸಮಿತಿ ರಚನೆಗೆ ನಿರ್ಧಾರ

ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಎರಡೂ ಕಡೆ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.

ಯತೀಂದ್ರಗೆ ಟ್ರೈನ್‌ ಮಾಡಿ: ಸಚಿವರಿಗೆ ಸಿಎಂ ಸೂಚನೆ

ಮೇಲ್ಮನೆಯಲ್ಲಿ ಏಕೈಕ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ. ಅವರೇ ಸಭಾನಾಯಕ ಸ್ಥಾನವನ್ನು ನಿರ್ವಹಿಸಬೇಕಾಗುತ್ತದೆ. ಆದರೆ, ಅವರು ಹೊಸಬರು ಕೂಡ ಆಗಿರುವುದರಿಂದ ಉಳಿದ ಸಚಿವರು ಅವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಶಿವಕುಮಾರ್‌ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಚಿವರ ಶಪಥದ 10 ದಿನ ಬಳಿಕ, ಅಧಿವೇಶನಕ್ಕೆ 1 ದಿನ ಮುನ್ನ ಖಾತೆ ಹಂಚಿಕೆ:ಹೊಸಬರಿಗೆ ಯಾವ ಖಾತೆ?
ರಾಜಕೀಯ ಲಾಭಕ್ಕೆ ಬಳಸಿದಾಗ ಅಯೋಧ್ಯೆ ರಾಜ್ಯದ ವಿಷಯ ಆಗಿರಲಿಲ್ಲವೇ?: ಪ್ರಿಯಾಂಕಾ