ಮೇಲ್ಮನೆ ಅಭ್ಯರ್ಥಿ ಘೋಷಣೆಗೆ ಇಂದು ಸಿದ್ದರಾಮಯ್ಯ, ಡಿಕೆಶಿ ದಿಲ್ಲಿಗೆ

KannadaprabhaNewsNetwork |  
Published : May 28, 2024, 01:03 AM ISTUpdated : May 28, 2024, 04:26 AM IST
ಸಿದ್ದು ಡಿಕೆ | Kannada Prabha

ಸಾರಾಂಶ

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲು ಮಂಗಳವಾರ ಬೆಳಗ್ಗೆ 11ಕ್ಕೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲಿದ್ದಾರೆ.

 ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲು ಮಂಗಳವಾರ ಬೆಳಗ್ಗೆ 11ಕ್ಕೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ತೆರಳಲಿದ್ದಾರೆ.ಜೂ.13ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನದ ಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ 7 ಮಂದಿಯನ್ನು ಆಯ್ಕೆ ಮಾಡಲು ಅವಕಾಶವಿದೆ.

ಈ ಏಳು ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ ವಿಪರೀತವಾಗಿರುವುದರಿಂದ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳದೆ ಉಭಯ ನಾಯಕರು ವಿಮಾನ ಹತ್ತಲಿದ್ದಾರೆ ಮತ್ತು ವಿಮಾನದಲ್ಲೇ ಈ ಬಗ್ಗೆ ಮೊದಲ ಬಾರಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಆಕಾಂಕ್ಷಿಗಳ ಸಂಖ್ಯೆ ಶತಕವನ್ನು ದಾಟಿದೆ. ಹೀಗಾಗಿ ಯಾವ ಯಾವ ಸಮುದಾಯಕ್ಕೆ ಹುದ್ದೆ ನೀಡಬೇಕು ಎಂಬುದನ್ನು ಮಾತ್ರ ಸಿದ್ಧಪಡಿಸಿಕೊಂಡು ಉಭಯ ನಾಯಕರು ದೆಹಲಿಗೆ ತೆರ‍ಳಲಿದ್ದಾರೆ. ನೂರಕ್ಕೂ ಹೆಚ್ಚಿರುವ ಆಕಾಂಕ್ಷಿಗಳ ಸಂಖ್ಯೆಯನ್ನು ಜರಡಿ ಮಾಡಿ ಅಂತಿಮವಾಗಿ ಹೈಕಮಾಂಡ್‌ ಮುಂದೆ ಚರ್ಚೆ ಮಾಡುವ ವೇಳೆಗೆ 15 ರಿಂದ 20ರ ಪಟ್ಟಿ ಸಿದ್ಧಪಡಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಪಟ್ಟಿಯೊಂದಿಗೆ ಮಂಗಳವಾರ ಸಂಜೆ ಅಥವಾ ರಾತ್ರಿ ಹೈಕಮಾಂಡ್‌ನ ನಾಯಕರೊಂದಿಗೆ ಸಂಭವನೀಯರ ಆಯ್ಕೆ ಬಗ್ಗೆ ಉಭಯ ನಾಯಕರು ಚರ್ಚಿಸುವರು ಎಂದು ಮೂಲಗಳು ಹೇಳಿವೆ.

ಯತೀಂದ್ರ, ಬೋಸರಾಜು ಪಕ್ಕಾ?:ಸಂಭವನೀಯರ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೋಸರಾಜು ಮತ್ತು ಒಕ್ಕಲಿಗರ ಪೈಕಿ ಕೆ. ಗೋವಿಂದರಾಜು ಅಥವಾ ವಿನಯ ಕಾರ್ತಿಕ್ ಅವರ ಹೆಸರು ಮಾತ್ರ ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಪೈಕಿ ಯತೀಂದ್ರ ಹಾಗೂ ಬೋಸರಾಜು ಅವರ ಹೆಸರು ಪಕ್ಕಾ. ಇನ್ನು ಒಕ್ಕಲಿಗರಲ್ಲಿ ಕೆ. ಗೋವಿಂದರಾಜು ಹಾಗೂ ವಿನಯ ಕಾರ್ತಿಕ್ ಹೆಸರು ಇದ್ದರೂ ದೆಹಲಿ ಮಟ್ಟದಲ್ಲಿ ಕೆ. ಗೋವಿಂದರಾಜು ಅವರು ಹೊಂದಿರುವ ಪ್ರಭಾವದ ಹಿನ್ನೆಲೆಯಲ್ಲಿ ಅ‍ವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಾತಿ ಲೆಕ್ಕಾಚಾರದ ಪ್ರಕಾರ ಹಿಂದುಳಿದವರಿಗೆ ಎರಡು, ಒಕ್ಕಲಿಗ, ಮುಸ್ಲಿಂ, ಕ್ರಿಶ್ಚಿಯನ್, ಎಸ್ಸಿ, ಎಸ್ಟಿ ಸಮುದಾಯಗಳಿಗೆ ತಲಾ ಒಂದು ಸ್ಥಾನ ದೊರೆಯಲಿದೆ. ಲಿಂಗಾಯತರಿಗೂ ಒಂದು ಸ್ಥಾನ ದೊರೆಯಲಿದೆ. ಆದರೆ, ಅದು ಈಗ ಅಲ್ಲ. ಬದಲಾಗಿ, ಜಗದೀಶ್ ಶೆಟ್ಟರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರ ನಡೆಯುವ ಪ್ರತ್ಯೇಕ ಚುನಾವಣೆ ವೇಳೆ ಆ ಸ್ಥಾನವನ್ನು ಲಿಂಗಾಯತರಿಗೆ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ಇನ್ನು ಏಳು ಸ್ಥಾನಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್‌ನ ಪ್ರಮುಖ ನಾಯಕರು ಸೂಚಿಸುವ ಹೆಸರುಗಳಿಗೆ ಆದ್ಯತೆ ದೊರೆಯಲಿದೆ. ಹೀಗಾಗಿ ಈ ನಾಯಕರು ತಮ್ಮ ಕೋಟಾ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಸೋಮವಾರವೂ ಲಾಬಿ:

ಉಭಯ ನಾಯಕರು ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಸೋಮವಾರ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿವಾಸಕ್ಕೆ ದಾಂಗುಡಿಯಿಟ್ಟು ತಮ್ಮ ಪರ ಬ್ಯಾಟ್‌ ಬೀಸುವಂತೆ ತೀವ್ರ ಒತ್ತಡ ನಿರ್ಮಾಣ ಮಾಡಿದರು.

ಜಾತಿ, ಪ್ರಾದೇಶಿಕತೆ, ಪಕ್ಷದಲ್ಲಿನ ಸೇವೆ, ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಬಂದಿರುವ ಫಲಿತಾಂಶದ ಲೆಕ್ಕಾಚಾರದ ಮೇಲೆ ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಕೆಲವರು ಬೆಂಬಲಿಗರೊಂದಿಗೆ ಆಗಮಿಸಿ ಶಕ್ತಿ ಪ್ರದರ್ಶನವನ್ನೂ ಮಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಸಲೀಂ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?