ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಾರಣವೇ ಹೊರತು ರಾಜ್ಯ ಸರ್ಕಾರವಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ : ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಾರಣವೇ ಹೊರತು ರಾಜ್ಯ ಸರ್ಕಾರವಲ್ಲ. ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಕೇಂದ್ರದ ಮೋದಿ ಸರ್ಕಾರ ವಿಫಲವಾಗಿದ್ದು, ಬೆಲೆ ಏರಿಕೆಯ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಗೆ ತಿರುಗೇಟು ನೀಡುವ ಸಲುವಾಗಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿತ್ತು. ಕೇಂದ್ರದ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಹಾಗೂ ಸಂವಿಧಾನ ರಕ್ಷಣೆ ಮಾಡಿ ಎಂಬ ಘೋಷವಾಕ್ಯದೊಂದಿಗೆ ನಡೆಸಿದ ಪ್ರತಿಭಟನಾ ಸಮಾವೇಶ, ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಸಮಾವೇಶದಲ್ಲಿ ಮಾತನಾಡಿದ ಸಿಎಂ, ಕೇಂದ್ರದ ಮೋದಿ ಸರ್ಕಾರ ಹಾಗೂ ಆರ್‌ಎಸ್ ಎಸ್ ವಿರುದ್ಧ ಹರಿಹಾಯ್ದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ಆಯೇಗಾ, ಎಲ್ಲ ಸೌಲಭ್ಯ ಸಿಗಲಿದೆ ಎಂದು ಮೋದಿ ಹೇಳಿದ್ದರು. ಅಚ್ಛೇ ದಿನ್ ಬಂದಿದೆಯಾ? ಈ ಕುರಿತು ಮೋದಿಯವರು ಜನತೆಗೆ ಉತ್ತರಿಸಬೇಕು ಎಂದು ಸವಾಲೆಸೆದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ರಾಜ್ಯಗಳಲ್ಲೂ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಎಲ್ಲ ಸಬ್ಸಿಡಿಗಳು ನಿಂತಿವೆ. ಪೆಟ್ರೋಲ್, ಡೀಸೆಲ್, ಅಕ್ಕಿ, ಬೇಳೆ, ಸಿಮೆಂಟ್, ಚಿನ್ನ, ಬೆಳ್ಳಿ, ಗೊಬ್ಬರ, ಸಕ್ಕರೆ... ಹೀಗೆ ಎಲ್ಲಾ ವಸ್ತುಗಳ ಬೆಲೆ ಏರಿದೆ. ಕೇಂದ್ರದ ಆಡಳಿತ ವೈಫಲ್ಯ ಮತ್ತು ಬೆಲೆ ಏರಿಕೆಯ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ‘ನಿಮ್ಮ ವಿರುದ್ಧವೇ ಜನರ ಆಕ್ರೋಶವಿದೆ. ನೀವು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬೇಕು’ ಎಂದು ಬಿಜೆಪಿಗೆ ಕರೆ ನೀಡಿದರು.
ಮೋದಿ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಕೇಂದ್ರಕ್ಕೆ ₹4.68 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿ ಕೊಡುತ್ತಿದ್ದರೆ, ಪ್ರತಿಯಾಗಿ ಕೇವಲ ₹60 ಸಾವಿರ ಕೋಟಿ ಅಂದರೆ, ₹1ಗೆ 3 ಪೈಸೆ ಮಾತ್ರ ನಮಗೆ ಬರುತ್ತಿದೆ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ನೀರಾವರಿಗೆ ₹22 ಸಾವಿರ ಕೋಟಿ ಕೊಟ್ಟಿದ್ದೇವೆ. ಹೊಸ ರಸ್ತೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರುಪಾಯಿ ಮೀಸಲಿಟ್ಟಿದ್ದೇವೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಲಿನ ದರ ಏರಿಸಿದ್ದು ನಿಜ. ಇದರಲ್ಲಿ ಸರ್ಕಾರಕ್ಕೆ ನಯಾಪೈಸೆ ಬರುತ್ತಿಲ್ಲ. ಎಲ್ಲವನ್ನೂ ರೈತರಿಗೆ ನೀಡುತ್ತಿದ್ದೇವೆ. ಬಸ್ ಪ್ರಯಾಣ ದರ, ಹಾಲಿನ ದರ ಇತರ ರಾಜ್ಯಗಳಿಗಿಂತ ಕಡಿಮೆ ಇದೆ. ಆದರೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ರೈತರಿಗೆ ಪ್ರೋತ್ಸಾಹ ಧನ ಕೊಡುವುದು ತಪ್ಪಾ? ಹಾಗಾದರೆ ಇವರ ಪ್ರತಿಭಟನೆ ರೈತರ ವಿರುದ್ಧವೇ ಎಂದು ಪ್ರಶ್ನಿಸಿದರು.
ಇದೇ ವೇಳೆ, ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದ ಸಿಎಂ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯ, ಸಂವಿಧಾನದ ಪರವಾಗಿ ಇರಲಿಲ್ಲ. ಆರ್‌ಎಸ್‌ಎಸ್ ಹುಟ್ಟಿ 100 ವರ್ಷವಾಗಿದೆ. ಯಾವತ್ತಾದರೂ ಸಂವಿಧಾನದ ಪರವಾಗಿ, ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿದೆಯೇ? ಅದು ಎಂದೂ ಮಾತನಾಡುವುದಿಲ್ಲ. ಬಿಜೆಪಿಯಿಂದ ಸಂವಿಧಾನಕ್ಕೆ ಧಕ್ಕೆ ಎಂದು ಆರೋಪಿಸಿದರು.
ಮರುದಿನವೇ ಮಹದಾಯಿಗೆ ಚಾಲನೆ:
ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡಿಸಿದ ಮರುದಿನವೇ ರಾಜ್ಯ ಸರ್ಕಾರ ಕೆಲಸ ಆರಂಭಿಸುತ್ತದೆ. ಪರಿಸರ ಇಲಾಖೆಯಿಂದ ತಕ್ಷಣ ಕ್ಲಿಯರೆನ್ಸ್ ಕೊಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
2017ರಲ್ಲಿ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಮಹದಾಯಿ ಜಾರಿಗೊಳಿಸುವುದಾಗಿ ಹೇಳಿದ್ದರು. ನೋಟಿಫಿಕೇಶನ್ ಆದಾಗ ಸಂಭ್ರಮಿಸಿದ್ದ ಬಿಜೆಪಿಯವರು ಗೋವಾ ಮುಖ್ಯಮಂತ್ರಿಯನ್ನು ಒಪ್ಪಿಸಿದ್ದಾಗಿ ಹೇಳಿದ್ದರು. ಆದರೆ, ಈವರೆಗೂ ಅವರಿಗೆ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗೆಗಳಿಗೂ ಅನುಮತಿ ನೀಡುತ್ತಿಲ್ಲ. ತುಂಗಭದ್ರಾ ಮೇಲ್ದಂಡೆ ಯೋಜನೆಗೆ ₹5 ಸಾವಿರ ಕೋಟಿ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದರು. ಬೆಂಗಳೂರು ಪೆರಿಫರಲ್ ರಿಂಗ್ ರೋಡ್‌ಗೆ ₹3 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು, ಬರಲಿಲ್ಲ. ಹೀಗೆ ಪ್ರತಿಯೊಂದರಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.