700 ಕೋಟಿ ಅಬಕಾರಿ ಆರೋಪ ಸಾಬೀತಿಗೆ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಸಿಎಂ, ಡಿಸಿಎಂ ಸವಾಲ್‌!

KannadaprabhaNewsNetwork |  
Published : Nov 11, 2024, 01:05 AM ISTUpdated : Nov 11, 2024, 04:30 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಮಹಾರಾಷ್ಟ್ರದ ಚುನಾವಣಾ ವೆಚ್ಚಕ್ಕಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ ₹700 ಕೋಟಿ ಸಂಗ್ರಹಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಹರಿಹಾಯ್ದಿದ್ದಾರೆ.  

 ಶಿಗ್ಗಾಂವಿ/ ಬೆಂಗಳೂರು : ಮಹಾರಾಷ್ಟ್ರದ ಚುನಾವಣಾ ವೆಚ್ಚಕ್ಕಾಗಿ ಕರ್ನಾಟಕದ ಮದ್ಯ ಮಾರಾಟಗಾರರಿಂದ ₹700 ಕೋಟಿ ಸಂಗ್ರಹಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಹರಿಹಾಯ್ದಿದ್ದಾರೆ. ಇದು ಕೇವಲ ರಾಜಕೀಯ ಕಾರಣಕ್ಕಾಗಿ ಮಾಡಿದ ಸುಳ್ಳು ಆರೋಪ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ 700 ಕೋಟಿ ರು. ಅಬಕಾರಿ ಅಕ್ರಮದ ಕುರಿತು ಮಾಡಿರುವ ಆರೋಪವನ್ನು ಮೋದಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ, ಇಲ್ಲದಿದ್ದರೆ ಅವರೇ ನಿವೃತ್ತಿ ಘೋಷಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರೆ, ಮೋದಿ ಅಕ್ರಮದ ಕುರಿತು ಸಣ್ಣ ಆಧಾರ ನೀಡಿದರೂ ನಾವು ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂದು ಡಿ.ಕೆ.ಶಿವಕುಮಾರ್‌ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದಿಂದ ಮಹಾರಾಷ್ಟ್ರದ ಚುನಾವಣೆಗಾಗಿ ಅಲ್ಲಿನ ಮದ್ಯ ಮಾರಾಟಗಾರರಿಂದ 700 ಕೋಟಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ಶುಕ್ರವಾರ ಪ್ರಧಾನಿ ಮಾಡಿದ ಆರೋಪ ಇದೀಗ ರಾಜ್ಯ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಕಿಡಿಕಿಡಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಬಕಾರಿ ಇಲಾಖೆಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರು ನಮ್ಮ ವಿರುದ್ಧ ಮತ್ತೊಂದು ಸುಳ್ಳಿನ ಆರೋಪ ಮಾಡಿದ್ದಾರೆ. ಮೋದಿ ಅವರು ಒಬ್ಬ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಲೂ ಒಂದು ಇತಿಮಿತಿ ಇರಬೇಕು. ಮೋದಿ ಅವರು ಹೊಂದಿರುವ ದೊಡ್ಡ ಹುದ್ದೆಗೆ ಅವರು ನೀಡುತ್ತಿರುವ ಹೇಳಿಕೆಗಳು ಶೋಭೆ ತರುವುದಿಲ್ಲ. ಅವರು ತಮ್ಮ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸಲು ಸಿದ್ಧ, ಇಲ್ಲವಾದರೆ ಅವರು ನಿವೃತ್ತಿ ಘೋಷಿಸಲಿ ಎಂದು ಸವಾಲೆಸೆದರು.

ನಮ್ಮ ಮೇಲೆ ಆರೋಪ ಮಾಡುವ ಬಿಜೆಪಿಯವರು ಈ ಹಿಂದೆ ಕಾಂಗ್ರೆಸ್‌ನ 17 ಮಂದಿ ಶಾಸಕರನ್ನು ಯಾವ ಹಣದಲ್ಲಿ ಖರೀದಿಸಿದರು? ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವಾಗ ₹2 ಸಾವಿರ ಕೋಟಿ ನೀಡಿದ್ದಾರೆಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರೇ ಆರೋಪಿಸಿದ್ದಾರೆ. ಹಾಗಾದರೆ ಆ ಹಣ ಎಲ್ಲಿಂದ ಬಂತು? ಎಂದು ತಿರುಗೇಟು ನೀಡಿದರು.

ಸುಳ್ಳೇ ಬಿಜೆಪಿ ಅಸ್ತ್ರ: ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರ. ಅಬಕಾರಿ ಇಲಾಖೆಯಲ್ಲಿ ಅಕ್ರಮ ಎಂಬುದು ಕೇವಲ ರಾಜಕೀಯ ಆರೋಪ. ಮೋದಿ ಅವರು ತಾವು ಮಾಡಿರುವ ಆರೋಪಕ್ಕೆ ಸಣ್ಣ ಆಧಾರ ನೀಡಲಿ, ಆಗ ನಾವು ಯಾವುದೇ ಶಿಕ್ಷೆಗೆ ಗುರಿಯಾಗಲೂ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ದೊಡ್ಡ ಹುದ್ದೆಯಲ್ಲಿರುವ ಪ್ರಧಾನಿ ಅವರು ಆಧಾರ ಇಲ್ಲದೆ ಆರೋಪ ಮಾಡುವುದು ಬೇಡ. ಬಿಜೆಪಿಯ ಕೇಂದ್ರ ಸಚಿವರು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ. ಆದರೆ ಆಧಾರ ಇಲ್ಲದೆ ಮಾತನಾಡುವುದು ಗೌರವವಲ್ಲ ಎಂದು ಆಕ್ರೋಶ ಹೊರಹಾಕಿದರು.

ಮೋದಿ ಏನು ಹೇಳಿದ್ದರು?

ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಮದ್ಯ ಮಾರಾಟಗಾರರಿಂದ 700 ಕೋಟಿ ರು. ಸುಲಿಗೆ ಮಾಡಿ ಮಹಾರಾಷ್ಟ್ರದ ಚುನಾವಣೆಗೆ ಕಳುಹಿಸಿದೆ. ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್‌ ಆಡಳಿತದ ರಾಜ್ಯಗಳು ಎಟಿಎಂ ಆಗಿವೆ.

ಮೋದಿ ದೊಡ್ಡ ಸುಳ್ಳುಗಾರ

ಮೋದಿ ಅವರು ಒಬ್ಬ ದೊಡ್ಡ ಸುಳ್ಳುಗಾರ. ಸುಳ್ಳು ಹೇಳಲೂ ಒಂದು ಇತಿಮಿತಿ ಇರಬೇಕು. ಮೋದಿ ಅವರು ಹೊಂದಿರುವ ದೊಡ್ಡ ಹುದ್ದೆಗೆ ಅವರು ನೀಡುತ್ತಿರುವ ಹೇಳಿಕೆಗಳು ಶೋಭೆ ತರುವುದಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಕೇಂದ್ರ ಸಚಿವರಿಂದ ವಸೂಲಿ

ದೊಡ್ಡ ಹುದ್ದೆಯಲ್ಲಿರುವ ಮೋದಿ ಅವರು ಆಧಾರ ಇಲ್ಲದೆ ಆರೋಪ ಮಾಡಬಾರದು. ಬಿಜೆಪಿಯ ಕೇಂದ್ರ ಸಚಿವರು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ