ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ವಿವಿಧ ನಿಗಮಗಳು, ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಸುರ್ಜೇವಾಲಾ ಮತ್ತು ಖರ್ಗೆ ಅವರನ್ನು ಭೇಟಿಯಾಗಿ ಹೊರಬಂದ ಬಳಿಕ ಸಿಎಂ ಆಗಲಿ, ಡಿಸಿಎಂ ಆಗಲಿ ಮಾಧ್ಯಮದವರೊಂದಿಗೆ ಮಾತನಾಡಲಿಲ್ಲ.
ನಿಗಮ-ಮಂಡಳಿ ಆಕಾಂಕ್ಷಿಗಳ ಪಟ್ಟಿ ಚರ್ಚೆ ಪೂರ್ಣಗೊಂಡಿದ್ದು, ಅಂತಿಮ ತೀರ್ಮಾನ ಬಾಕಿ ಇದೆ. ಮುಂದಿನ ವಾರ ಸುರ್ಜೇವಾಲಾ ಬೆಂಗಳೂರಿಗೆ ಬಂದಾಗ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಡಿ.ಕೆ.ಶಿವಕುಮಾರ್ ಇಡೀ ದಿನ ಮೌನಕ್ಕೆ ಜಾರಿದ್ದರು. ಸಿಎಂ 5 ವರ್ಷಗಳ ಹೇಳಿಕೆಯ ಬಳಿಕ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ. ಇದೇ ವೇಳೆ ಗುರುವಾರ ಸಂಜೆ, ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು.