ಹಳೆ ಮೈಸೂರಲ್ಲಿ ಆಗಸ್ಟ್‌ನಲ್ಲಿ ಸಿದ್ದು ಅಹಿಂದ ಶಕ್ತಿಪ್ರದರ್ಶನ?

KannadaprabhaNewsNetwork |  
Published : Jul 13, 2024, 01:31 AM ISTUpdated : Jul 13, 2024, 05:53 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ದಾವಣಗೆರೆಯ ‘ಸಿದ್ದರಾಮೋತ್ಸವ’ ಮಾದರಿಯಲ್ಲಿ ಬೃಹತ್‌ ಸಮಾವೇಶವೊಂದನ್ನು ‘ಅಹಿಂದ’ ಹೆಸರಿನಲ್ಲಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗ ಸಿದ್ಧತೆ ಆರಂಭಿಸಿದೆ.  

 ಬೆಂಗಳೂರು :  ದಾವಣಗೆರೆಯ ‘ಸಿದ್ದರಾಮೋತ್ಸವ’ ಮಾದರಿಯಲ್ಲಿ ಬೃಹತ್‌ ಸಮಾವೇಶವೊಂದನ್ನು ‘ಅಹಿಂದ’ ಹೆಸರಿನಲ್ಲಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗ ಸಿದ್ಧತೆ ಆರಂಭಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಅಹಿಂದ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ನಡೆಸಬೇಕು ಎಂದು ಸ್ಥಳೀಯ ಸಂಘಟನೆಗಳು ಮನವಿ ಮಾಡುತ್ತಿದ್ದರೂ, ಆಪ್ತ ಬಳಗ ಮಾತ್ರ ಹಳೆ ಮೈಸೂರು ಭಾಗದಲ್ಲೇ ನಡೆಸಲು ಉದ್ದೇಶಿಸಿದೆ.

ಬರೋಬ್ಬರಿ 3-4 ಲಕ್ಷ ಮಂದಿಯನ್ನು ಸೇರಿಸುವ ಮೂಲಕ ದಾವಣಗೆರೆಯ ಸಿದ್ದರಾಮೋತ್ಸವ ಮಾದರಿಯಲ್ಲಿ ಶಕ್ತಿ ಪ್ರದರ್ಶನ ನಡೆಸಬೇಕು. ತನ್ಮೂಲಕ ಸಿದ್ದರಾಮಯ್ಯ ಶಕ್ತಿಯನ್ನು ಪ್ರಶ್ನಾತೀತವಾಗಿ ಸಾಬೀತುಪಡಿಸಬೇಕು ಎಂಬುದು ಅವರ ಆಪ್ತ ಬಳಗದ ಉದ್ದೇಶ.

ವಿಶ್ವಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ ಬಳಿಕ ಪರ-ವಿರೋಧದ ಚರ್ಚೆಗಳು ಜೋರಾಗಿದ್ದವು. ಇಂತಹ ಚರ್ಚೆಗಳಿಗೆ ಇತಿಶ್ರೀ ಹೇಳುವಂತೆ ಈ ಸಮಾವೇಶ ನಡೆಯಬೇಕು ಎಂಬುದು ಸಿದ್ದರಾಮಯ್ಯ ಅವರ ಆಪ್ತರ ಆಶಯ.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಗಸ್ಟ್‌ 12ರಂದು ನಡೆಯಲಿದೆ. ಆದರೆ, ಈ ವೇಳೆಗೆ ಅಹಿಂದ ಸಮಾವೇಶ ಸಂಘಟಿಸುವುದು ಕಷ್ಟವಾದ್ದರಿಂದ ಆಗಸ್ಟ್‌ 12ಕ್ಕೆ ಬದಲಾಗಿ ಆಗಸ್ಟ್‌ ಮಾಸದಲ್ಲಿ ಹಳೆ ಮೈಸೂರು ಭಾಗ (ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಲ್ಲಿ) ನಡೆಸಬೇಕು ಎಂಬುದು ಆಪ್ತ ಬಳಗದ ಉದ್ದೇಶ.

ಈ ನಡುವೆ, ಹುಬ್ಬಳ್ಳಿ ಭಾಗದ ಸಂಘಟನೆಗಳು ಆಗಸ್ಟ್‌ನಲ್ಲಿ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಅವರ 77ನೇ ಹುಟ್ಟುಹಬ್ಬ ಆಚರಿಸುವ ಮೂಲಕ ಅಹಿಂದ ಸಮಾವೇಶ ಹಾಗೂ ಅಹಿಂದ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿವೆ. ಆದರೆ, ಸಿದ್ದರಾಮಯ್ಯ ಅವರು ಆಪ್ತರು ಹಳೆ ಮೈಸೂರು ಭಾಗದಲ್ಲಿ ಸಮಾವೇಶ ನಡೆಸಲು ಉತ್ಸುಕತೆ ತೋರಿದ್ದಾರೆ ಎಂದು ತಿಳಿದುಬಂದಿದೆ.

ಈ ಸಮಾವೇಶದ ಬಗ್ಗೆ ಸದ್ಯದಲ್ಲೇ ಸಭೆ ನಡೆಸಿ ರೂಪರೇಷೆ ಸಿದ್ಧಪಡಿಸಿ ಸಿದ್ದರಾಮಯ್ಯ ಅವರ ಅಂಗೀಕಾರ ಪಡೆಯಬೇಕು ಎಂದು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ