;Resize=(412,232))
ಬೆಂಗಳೂರು : ಕಷ್ಟವೋ, ಸುಖವೋ ನಾನು ಯಾವುದೇ ಕಾರಣಕ್ಕೂ ಯಾವುದೇ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ‘ಕನ್ನಡಪ್ರಭ’ದ ಸೋದರ ಸಂಸ್ಥೆ ‘ಏಷ್ಯಾನೆಟ್ ಸುವರ್ಣ ನ್ಯೂಸ್’ಗೆ ನೀಡಿದ ಮೊದಲ ಸಂದರ್ಶನ ನೀಡಿದ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ, ಹಣಕಾಸು ಇಲಾಖೆಯ ಎಚ್ಚರಿಕೆ ಪತ್ರ, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಕಷ್ಟವಾಗುತ್ತಿದೆಯೇ ಎಂಬ ವಿಚಾರಗಳ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನಾವು ಜನರಿಗೆ ಮಾತುಕೊಟ್ಟಿದ್ದೇವೆ. ಅದನ್ನು ಉಳಿಸಿಕೊಳ್ಳಬೇಕು. ಹಾಗಾಗಿ ಕಷ್ಟವೋ, ಸುಖವೋ ಯಾವುದೇ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸುವುದಿಲ್ಲ. ಮಾತು ಕೊಟ್ಟಿದ್ದೇವೆ, ಅದನ್ನು ಉಳಿಸಿಕೊಳ್ಳಬೇಕು. ನಾನು ಯಾವುದೇ ಕಾರಣಕ್ಕೂ ಯಾವ ಗ್ಯಾರಂಟಿ ಯೊಜನೆಗಳನ್ನೂ ನಿಲ್ಲಿಸಲ್ಲ. ಆದರೆ, ಯೋಜನೆಗಳು ದುರುಪಯೋಗ ಆಗಬಾರದು. ಈ ನಿಟ್ಟಿನಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು
ಉತ್ತಮ ಆಡಳಿತ ನೀಡಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡು ನಡೆಯುವುದು ನಮ್ಮ ಬದ್ಧತೆ. ಅದನ್ನು ಮಾಡುತ್ತೇವೆ. 2028ರ ಚುನಾವಣೆಗೂ ನಮ್ಮ ಬಳಿಯೂ ಸಾಕಷ್ಟು ಆಲೋಚನೆಗಳಿವೆ. ಅದರ ಬಗ್ಗೆ ಕಾಲ ಬಂದಾಗ ಹೇಳೋಣ. ನಾನು ಸಾಮೂಹಿಕ ನಾಯತ್ವದಲ್ಲಿ ನಂಬಿಕೆ ಇಡುವವನು. ನಮ್ಮ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ. ಮುಂದೆಯೂ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. 2023ರ ಸಂಖ್ಯಾಬಲಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
ಇನ್ನು, ಹಣಕಾಸು ಇಲಾಖೆ ಪತ್ರದ ವಿಚಾರ ಹೇಳುವುದಾದರೆ ಆ ಇಲಾಖೆ ಇರುವುದೇ ಸರ್ಕಾರಕ್ಕೆ ಸಮಯಕ್ಕೆ ಸರಿಯಾದ ಯಾವಾಗಲೂ ಸಲಹೆ, ಸೂಚನೆ ನೀಡಲು. ಸಾಲ ಹೆಚ್ಚಾದಾಗ, ಇಂತಹ ಮತ್ತೊಂದು, ಮಗದೊಂದು ವಿಚಾರ ಬಂದಾಗ ಸರ್ಕಾರಕ್ಕೆ ಪತ್ರ ಬರೆಯುತ್ತಿರುತ್ತಾರೆ.
ಇದು ನನ್ನ ಕಾಲದಲ್ಲಿ ಅಷ್ಟೇ ಅಲ್ಲ, ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರು., ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗೆ 22 ಸಾವಿರ ಕೋಟಿ ರು, ವಿಧವಾ ವೇತನ, ವೃದ್ಧಾಪ್ಯ, ಅಂಗವಿಕಲರ ಮಾಸಾಶನ ಸೇರಿ ಇತರೆ ಕಲ್ಯಾಣ ಕಾರ್ಯಕ್ರಮಗಳು ಸೇರಿ ಒಟ್ಟಾರೆ ವಾರ್ಷಿಕ 1 ಲಕ್ಷ ಕೋಟಿ ರು.ಗಳಷ್ಟು ಜನರಿಗಾಗಿ ವೆಚ್ಚ ಮಾಡುತ್ತಿದ್ದೇವೆ. ಇಂಥ ಸಮಯದಲ್ಲಿ ಕೆಲ ಸಲಹೆ, ಸೂಚನೆಗಳು ಬರುತ್ತಿರುತ್ತವೆ. ಇತ್ತೀಚೆಗೆ ಒಂದು ಟೆಂಡರ್ ವಿಚಾರದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ನಾನು ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದು ಮಾಡಿ ಹೊಸದಾಗಿ ಮರು ಟೆಂಡರ್ ಮಾಡಿ ಎಂಬ ಸೂಚನೆ ನೀಡಿದೆ ಎಂದು ತಿಳಿಸಿದರು.