ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗದ್ದಲ

KannadaprabhaNewsNetwork | Updated : Jun 04 2024, 04:41 AM IST

ಸಾರಾಂಶ

ಕಾಂಗ್ರೆಸ್‌ನ ಕೆಲವರು ತಾಲೂಕು ಕಚೇರಿ ಗೇಟ್ ಬಳಿ ಮತಯಾಚನೆ ಮಾಡುತ್ತಿದ್ದರು ಎಂದು ಆರೋಪಿಸಿದ ಬಿಜೆಪಿ ಪರ ನೌಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಸಹ ಗೇಟ್ ಬಳಿ ನಿಂತು ಮತಯಾಚನೆ ಮಾಡಿದಾಗ ಎರಡೂ ಕಡೆಯವರ ನಡುವೆ ವಗ್ವಾದ ನಡೆಯಿತು.

 ಬಂಗಾರಪೇಟೆ :  ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತಗಟ್ಟೆ ಬಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಮತ್ತಿತರರು ಮತಯಾಚನೆ ಮಾಡಿದರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರೂ ಸಹ ಪ್ರತಿರೋಧವ್ಯಕ್ತಪಡಿಸಿದ್ದರಿಂದ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ,ತಳ್ಳಾಟ,ಕೂಗಾಟ ನಡೆದು ಕೆಲಕಾಲ ಗೊಂದಲ ಮೂಡಿಸಿದ ಘಟನೆ ನಡೆಯಿತು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದ ಶಾಂತಿಯುತವಾಗಿ ಮತದಾನ ನಡೆಯಿತು.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ವಾಗ್ವಾದ

ಮಧ್ಯಾಹ್ನ ಕಾಂಗ್ರೆಸ್‌ನ ಕೆಲವರು ತಾಲೂಕು ಕಚೇರಿ ಗೇಟ್ ಬಳಿ ಮತಯಾಚನೆ ಮಾಡುತ್ತಿದ್ದರು ಎಂದು ಆರೋಪಿಸಿದ ಬಿಜೆಪಿ ಪರ ನೌಕರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ ಸಹ ಗೇಟ್ ಬಳಿ ನಿಂತು ಮತಯಾಚನೆ ಮಾಡಿದಾಗ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ಗದ್ದಲ ನಡೆಯಿತು.ಪೊಲೀಸರು ಎರಡೂ ಪಕ್ಷಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಶಾಸಕ ನಾರಾಯಣಸ್ವಾಮಿ ಆಕ್ರೋಶ

ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಳಗ್ಗೆಯಿಂದ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ, ಆದರೆ ಬಿಜೆಪಿ ಪರವಾಗಿ ನೌಕರ ಸಂಘದ ಅಧ್ಯಕ್ಷ ಅಯ್ಯಪ್ಪಗೌಡ ದಬ್ಬಾಳಿಕೆ, ರೌಡಿಸಂ ನಡೆಸಿ ಗೇಟ್ ಬಳಿ ಹೋಗಿ ಮತಯಾಚನೆ ಮಾಡುವ ಅವಶ್ಯಕತೆ ಏನಿತ್ತು, ಹಾಗಾದರೆ ನಾವೂ ಸಹ ಗೇಟ್ ಬಳಿ ಹೋಗಿ ಮತಯಾಚನೆ ಮಾಡುತ್ತೇವೆ. ನಮಗೂ ಅವಕಾಶ ನೀಡಿ ಎಂದು ಪಟ್ಟು ಹಿಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮಾತನಾಡಿ ಮತದಾನ ನಡೆಯುತ್ತಿರುವ ಸ್ಥಳದಿಂದ ದೂರದಲ್ಲಿ ಮತಯಾಚನೆ ಮಾಡಿದರೆ ತಪ್ಪಿಲ್ಲ, ಅದಕ್ಕೂ ಅವಕಾಶ ಕೊಡದಿದ್ದರೆ ಹೇಗೆ, ನಾವು ಯಾವ ವಿರುದ್ಧವೂ ರೌಡಿಸಂ, ದಬ್ಬಾಳಿಕೆ ಮಾಡಿಲ್ಲ. ಶಾಂತಿಯುತವಾಗಿ ಮತಯಾಚನೆ ಮಾಡಿದೆವು, ಕಾಂಗ್ರೆಸ್ ನವರೂ ಸಹ ಪ್ರಚಾರ ಮಾಡಿದರು, ನಾವು ಅದಕ್ಕೆ ವಿರೋಧ ಮಾಡಿಲ್ಲ. ನಾವು ಮತಯಾಚಿಸಿದಾಗ ಅವರೇಕೆ ವಿರೋಧ ಮಾಡಬೇಕೆಂದು ಸಿಡಿಮಿಸಿಗೊಂಡರು.

Share this article