ಕಾಂಗ್ರೆಸ್‌ ಸೋಲಿಗೆ ಹೊಂದಾಣಿಕೆ ರಾಜಕೀಯವೇ ಕಾರಣ

KannadaprabhaNewsNetwork |  
Published : Jul 12, 2024, 01:35 AM ISTUpdated : Jul 12, 2024, 05:04 AM IST
Congress flag

ಸಾರಾಂಶ

ಪ್ರತಿಪಕ್ಷಗಳೊಂದಿಗೆ ಅನೈತಿಕ ಹೊಂದಾಣಿಕೆ, ಸ್ವಕ್ಷೇತ್ರದಲ್ಲೇ ಲೀಡ್ ಕೊಡಿಸುವಲ್ಲಿ ಪ್ರಮುಖ ಸಚಿವರ ವೈಫಲ್ಯ ಮತ್ತು ಕಾರ್ಯಕರ್ತರು ಬಗ್ಗೆ ನಿರ್ಲಕ್ಷ್ಯ. ಇವೇ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯದಿರಲು ಪ್ರಮುಖ ಕಾರಣ  

 ಬೆಂಗಳೂರು :  ಪ್ರತಿಪಕ್ಷಗಳೊಂದಿಗೆ ಅನೈತಿಕ ಹೊಂದಾಣಿಕೆ ರಾಜಕಾರಣ ನಡೆಸುವ ಪ್ರಮುಖ ನಾಯಕರು, ಸ್ವಕ್ಷೇತ್ರದಲ್ಲೇ ಲೀಡ್ ಕೊಡಿಸುವಲ್ಲಿ ಪ್ರಮುಖ ಸಚಿವರ ವೈಫಲ್ಯ ಮತ್ತು ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಾದ ಕೆಡರ್‌ (ಕಾರ್ಯಕರ್ತರು) ಬಗ್ಗೆ ದಿವ್ಯ ನಿರ್ಲಕ್ಷ್ಯ. ಇವೇ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯದಿರಲು ಪ್ರಮುಖ ಕಾರಣ ಎಂದು ಹಿರಿಯ ನಾಯಕರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಮಧುಸೂಧನ್‌ ಮಿಸ್ತ್ರಿ ನೇತೃತ್ವದ ಎಐಸಿಸಿ ಸತ್ಯಶೋಧನಾ ಸಮಿತಿಗೆ ದೂರು ನೀಡಿದ್ದಾರೆ.

17 ಸಚಿವರ ಮೇಲೆ ದೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ 17 ಸಚಿವರು ಸ್ವಂತ ಕ್ಷೇತ್ರಗಳಲ್ಲೇ ಲೋಕಸಭೆ ಅಭ್ಯರ್ಥಿಗಳಿಗೆ ಲೀಡ್‌ ಕೊಡಿಸಿಲ್ಲ. ಹೀಗೆ ಲೀಡ್‌ ಕೊಡಿಸದೇ ಇರಲು ಹೊಂದಾಣಿಕೆ ರಾಜಕಾರಣವೇ ಮುಖ್ಯ ಕಾರಣ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಬೆಂಬಲ ಪಡೆಯಲು ಲೋಕಸಭೆಯಲ್ಲಿ ಪ್ರತಿಪಕ್ಷಗಳಿಗೆ ನೆರವು ನೀಡುವ ಅನೈತಿಕ ಹೊಂದಾಣಿಕೆಯನ್ನು ಪ್ರಮುಖ ಸಚಿವರೇ ನಡೆಸುತ್ತಾರೆ. ಇದು ಹಲವು ಬಾರಿ ಗಮನಕ್ಕೆ ಬಂದರೂ ಹೈಕಮಾಂಡ್‌ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಚುನಾವಣೆಯಲ್ಲಿ ಕೋಲಾರ, ಬೆಂಗಳೂರು ಸೆಂಟ್ರಲ್‌, ವಿಜಯಪುರ, ಬಾಗಲಕೋಟೆಯಂತಹ ಕ್ಷೇತ್ರಗಳಲ್ಲಿ ಇದಕ್ಕೆ ಸ್ಪಷ್ಟ ನಿದರ್ಶನಗಳಿವೆ. ಈ ರೀತಿ ಅನೈತಿಕ ಹೊಂದಾಣಿಕೆ ಮಾಡಿಕೊಳ್ಳುವ ಇಂತಹ ಸಚಿವರು ಹಾಗೂ ನಾಯಕರಿಗೆ ಸ್ಪಷ್ಟ ಸಂದೇಶವನ್ನು ನೀಡದಿದ್ದರೆ ಮುಂದಿನ ಚುನಾವಣೆಗಳಲ್ಲಿ ಇದೇ ಮಾದರಿ ವೈಫಲ್ಯವನ್ನು ಕಾಂಗ್ರೆಸ್‌ ಕಾಣಬೇಕಾಗುತ್ತದೆ ಎಂದು ಸಮಿತಿಗೆ ಈ ನಾಯಕರು ಎಚ್ಚರಿಕೆ ನೀಡಿದರು ಎಂದು ಮೂಲಗಳು ಹೇಳಿವೆ.

ಗುಂಪುಗಾರಿಕೆ: ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಒಂದಾಗಿದ್ದ ನಾಯಕರೆಲ್ಲರೂ ಲೋಕಸಭೆ ಚುನಾವಣೆಯಲ್ಲಿ ಗುಂಪುಗಾರಿಕೆ ನಡೆಸಿದರು. ಈ ಧೋರಣೆಯನ್ನು ತಿದ್ದದಿದ್ದರೆ ಪಕ್ಷಕ್ಕೆ ಮುಂದೆಯೂ ನಷ್ಟ ತಪ್ಪಿದ್ದಲ್ಲ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೂಕ್ತ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ಪಡೆಯಲು ರಾಜ್ಯ ಕಾಂಗ್ರೆಸ್‌ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶದ ಪರಾಮರ್ಶೆಗೆ ಆಗಮಿಸಿದ್ದ ಎಐಸಿಸಿ ಸತ್ಯ ಶೋಧನಾ ಸಮಿತಿಯು ಗುರುವಾರ ಮಿಸ್ತ್ರಿ ಅಧ್ಯಕ್ಷತೆಯಲ್ಲಿ ಸರಣಿ ಸಭೆ ನಡೆಸಿ ಒಬ್ಬೊಬ್ಬರೇ ನಾಯಕರಿಂದ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಿತು.

ಸಚಿವರಾದ ಕೃಷ್ಣಬೈರೇಗೌಡ, ಡಾ.ಎಂ.ಸಿ.ಸುಧಾಕರ್‌, ಕೆ.ಎಚ್. ಮುನಿಯಪ್ಪ, ಬೈರತಿ ಸುರೇಶ್‌ ಸೇರಿದಂತೆ ವಿವಿಧ ಸಚಿವರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿ 3 ರಿಂದ 10 ನಿಮಿಷಗಳ ಕಾಲ ವಿವರಣೆ ಪಡೆದುಕೊಂಡರು. ಜತೆಗೆ ಎಐಸಿಸಿ ಪದಾಧಿಕಾರಿಗಳು, ಸಿಡಬ್ಲ್ಯೂಸಿ ಸದಸ್ಯರು, ಹಿರಿಯ ನಾಯಕರು, ಲೋಕಸಭೆ-ರಾಜ್ಯಸಭೆ ಸದಸ್ಯರು, ಶಾಸಕರು, ಪಿಸಿಸಿ ಜಿಲ್ಲಾಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.

ಪ್ರಭಾವಿಗಳಿಗೆ ನಿಗಮ-ಮಂಡಳಿ ಪಟ್ಟ: ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಸೂಚಿಸಿದವರಿಗೆ ನೀಡಿಲ್ಲ. ಬದಲಿಗೆ ಸಚಿವರ ಆಪ್ತರಾಗಿರುವ ಪ್ರಭಾವಿಗಳಿಗೆ ನೀಡಲಾಗಿದೆ. ಅವರನ್ನೇ ಪಕ್ಷದ ಕಾರ್ಯಕರ್ತರು ಎಂದು ಬಿಂಬಿಸಲಾಗಿದೆ. ಹೀಗಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಲೋಕಸಭೆ ಚುನಾವಣೆಯಲ್ಲಿ ಅಸಹಾಯಕರಾದರು. ಯಾವ ನೇಮಕಾತಿಗಳಲ್ಲೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಬೆಲೆ ನೀಡಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಸಮಿತಿಗೆ ದೂರಲಾಗಿದೆ.

ಕೋಲಾರ ನಾಯಕರಿಂದ ಪ್ರತ್ಯೇಕ ವಿವರಣೆ: ಕೋಲಾರ ಲೋಕಸಭಾ ಕ್ಷೇತ್ರದ ಸೋಲಿಗೆ ಪಕ್ಷದಲ್ಲಿನ ಬಣ ರಾಜಕೀಯವೇ ಕಾರಣ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಡಾ.ಎಂ.ಸಿ. ಸುಧಾಕರ್‌, ಶಾಸಕರಾದ ಕೆ.ವೈ. ನಂಜೇಗೌಡ, ಪರಿಷತ್‌ ಸದಸ್ಯ ಅನಿಲ್‌ಕುಮಾರ್‌, ಪರಾಜಿತ ಲೋಕಸಭೆ ಅಭ್ಯರ್ಥಿ ಕೆ.ವಿ. ಗೌತಮ್‌ ಅವರಿಂದ ಕೋಲಾರ ಸೋಲಿಗೆ ಕಾರಣಗಳ ಬಗ್ಗೆ ವಿವರಣೆ ಪಡೆಯಲಾಯಿತು. ಬಳಿಕ ಕೆ.ಎಚ್‌. ಮುನಿಯಪ್ಪ ಅವರಿಂದಲೂ ಪ್ರತ್ಯೇಕ ವಿವರಣೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸದನದಲ್ಲಿ ಹೆಸರು ತಪ್ಪಾಗಿ ಹೇಳಿದರೆ ದಂಡ ಫಿಕ್ಸ್‌!
''ದ್ವೇಷ ಭಾಷಣ ಎಂದರೆ ಯಾವುದು ಅಂತ ಹೇಳಿ ''