ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಮೋದಿ

KannadaprabhaNewsNetwork |  
Published : Apr 22, 2024, 02:00 AM ISTUpdated : Apr 22, 2024, 04:50 AM IST
PM Modi Interview

ಸಾರಾಂಶ

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ ಹಾಗೂ ಅದರ ನಾಯಕ ರಾಹುಲ್‌ ಗಾಂಧಿ ಏ.7ರಂದು ನೀಡಿದ್ದ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

 ಜೈಪುರ :  ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ ಹಾಗೂ ಅದರ ನಾಯಕ ರಾಹುಲ್‌ ಗಾಂಧಿ ಏ.7ರಂದು ನೀಡಿದ್ದ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 

‘ಶ್ರಮದಿಂದ ಗಳಿಸಿದ ಸಂಪತ್ತನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಆದರೂ ಇದನ್ನು ಕಾಂಗ್ರೆಸ್‌ ಮಾಡಲಿದೆ. ತಾಯಂದಿರು ಶ್ರಮದಿಂದ ಗಳಿಸಿ ಮಾಡಿಸಿಕೊಂಡಿರುವ ಚಿನ್ನದ ತಾಳಿ ಕಿತ್ತುಕೊಳ್ಳಲಾಗುತ್ತದೆ ಹಾಗೂ ಅದನ್ನು ‘ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕುದಾರರು ಮುಸ್ಲಿಮರು’ ಎಂದಿದ್ದ ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಹಾಗೂ ‘ಹೆಚ್ಚು ಮಕ್ಕಳಿದ್ದವರಿಗೆ’ ಹಂಚಲಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಭಾನುವಾರ ಸಂಜೆ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದರೆ ಎಲ್ಲರ ಆಸ್ತಿ ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಹೇಳುತ್ತದೆ. ಅಂದರೆ ನಿಮ್ಮ ಎಲ್ಲ ಚಿನ್ನ ಹಾಗೂ ಇತರ ಆಸ್ತಿಪಾಸ್ತಿಗಳ ಮೌಲ್ಯಮಾಪನ ಆಗುತ್ತದೆ. ಮಹಿಳೆಯರ ಚಿನ್ನವನ್ನು ಸಮಾನ ವಿತರಣೆ ಮಾಡುತ್ತೇವೆ ಎಂದು ಅದರಲ್ಲಿ ಹೇಳಲಾಗಿದೆ. ಇದು ನಿಮಗೆ ಸ್ವೀಕಾರ ಇದೆಯೆ? ನೀವು ಶ್ರಮದಿಂದ ಗಳಿಸಿದ ಸಂಪತ್ತನ್ನು ಸರ್ಕಾರಕ್ಕೆ ಹಂಚುವ ಅಧಿಕಾರ ಇದೆಯೇ?’ ಎಂದು ಪ್ರಶ್ನಿಸಿದರು.

‘ಮಹಿಳೆಯರ ಚಿನ್ನ ಶೋಕಿಗಾಗಿ ಇರಲ್ಲ. ಅದು ಸ್ವಾಭಿಮಾನಕ್ಕೆ ಸಂಬಂಧಿಸಿದ್ದು. ಮಂಗಳಸೂತ್ರ ಕೇವಲ ಚಿನ್ನಕ್ಕೆ ಸಂಬಂಧಿಸಿದ್ದಲ್ಲ. ಜೀವನಕ್ಕೆ ಸಂಬಂಧಿಸಿದ್ದು. ಅದನ್ನೇ ಕಿತ್ತುಕೊಳ್ಳುವ ಮಾತು ಆಡಿದ್ದೀರಲ್ಲಾ ನಿಮ್ಮ (ಕಾಂಗ್ರೆಸ್‌) ಪ್ರಣಾಳಿಕೆಯಲ್ಲಿ?’ ಎಂದು ಕಿಡಿಕಾರಿದರು.‘ಈ ಮುಂಚಿನ ಕಾಂಗ್ರೆಸ್‌ ಸರ್ಕಾರವು ‘ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ’ ಎಂದು ಹೇಳಿತ್ತು. ಇದರ ಅರ್ಥ ಏನು? ಅಂದರೆ ಸಂಪತ್ತನ್ನು ಒಗ್ಗೂಡಿಸಿ ಯಾರಿಗೆ ಹಂಚುವುದು? ಯಾರಿಗೆ ಹೆಚ್ಚು ಮಕ್ಕಳಿವೆ ಅವರಿಗೆ... ಅಂದರೆ ಒಳ ನುಸುಳುಕೋರರಿಗೆ... ಏನು ನಿಮ್ಮ ಶ್ರಮದ ಹಣವನ್ನು ಒಳನುಸುಳುಕೋರರಿಗೆ ಕೊಡಬೇಕೆ? ನೀವು ಇದನ್ನು ಒಪ್ಪುತ್ತೀರಾ? ಇದನ್ನೇ ಕಾಂಗ್ರೆಸ್‌ ಪ್ರಣಾಳಿಕೆ ಹೇಳುತ್ತಿದೆ’ ಎಂದು ಮೋದಿ ವಿಶ್ಲೇಷಿಸಿದರು.

‘ಕಾಂಗ್ರೆಸ್ ಗೆದ್ದರೆ ನಮ್ಮ ಮಾತೆಯರು ಹಾಗೂ ಸೋದರಿಯರ ಚಿನ್ನವನ್ನು ಜಪ್ತಿ ಮಾಡಲಾಗುತ್ತದೆ. ಹರಿದು ಹಂಚಲಾಗುತ್ತದೆ. ಯಾರಿಗೆ ಹಂಚಲಾಗುತ್ತದೆ? ಮನಮೋಹನ ಸಿಂಗ್‌ ಸರ್ಕಾರ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ ಎಂದು 2006ರಲ್ಲಿ ಹೇಳಿತ್ತು. ಈ ಅರ್ಬನ್‌ ನಕ್ಸಲರ ಚಿಂತನೆ ನಿಮ್ಮ ಮಂಗಳಸೂತ್ರವನ್ನೂ ಉಳಿಸುವುದಿಲ್ಲ. ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅವರು’ ಎಂದು ಪ್ರಧಾನಿ ಆಕ್ರೋಶಭರಿತರಾಗಿ ನುಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!