ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಗೆ ಅಭಿನಂದನೆ: ಮೋದಿ

KannadaprabhaNewsNetwork |  
Published : Jul 01, 2024, 01:49 AM ISTUpdated : Jul 01, 2024, 05:00 AM IST
Case filed against PM Modi

ಸಾರಾಂಶ

  ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘65 ಕೋಟಿ ಜನರು ಮತ ಚಲಾಯಿಸಿದ ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ, ಜನತೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ನಂಬಿಕೆ ವ್ಯಕ್ತಪಡಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘65 ಕೋಟಿ ಜನರು ಮತ ಚಲಾಯಿಸಿದ ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ, ಜನತೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ನಂಬಿಕೆ ವ್ಯಕ್ತಪಡಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇಂಥದ್ದೊಂದು ಸಾಧನೆಗೆ ಕಾರಣರಾದ ಚುನಾವಣಾ ಆಯೋಗ, ಜನತೆ ಮತ್ತು ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದು ತಮ್ಮ 30 ನಿಮಿಷಗಳ ರೇಡಿಯೋ ಭಾಷಣದಲ್ಲಿ ಮೋದಿ ಹೇಳಿದರು. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಳೆದ ಫೆಬ್ರುವರಿಯಲ್ಲಿ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ತಾಯಿಯ ಹೆಸರಲ್ಲಿ ಒಂದು ಮರ:

ಇದೇ ವೇಳೆ ವಿಶ್ವಪರಿಸರ ದಿನದ ಅಂಗವಾಗಿ ಹೊಸದಾಗಿ ಆರಂಭಿಸಲಾದ ತಾಯಿಯ ಹೆಸರಲ್ಲಿ ಒಂದು ಮರ ಎಂಬ ವಿನೂತನ ಅಭಿಯಾನದ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. ಅಲ್ಲದೆ ತಾವು ಕೂಡಾ ತಮ್ಮ ತಾಯಿಯ ಹೆಸರಲ್ಲಿ ಒಂದು ಮರ ನೆಟ್ಟಿರುವುದಾಗಿ ಹೇಳಿದರು.

ಕೇರಳದ ಕೊಡೆ:

ಈ ನಡುವೆ ಕೇರಳದ ಅಟ್ಟಪಾಡಿಯಲ್ಲಿ ಆದಿವಾಸಿ ಸಮುದಾಯದ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕೆಲ ಸ್ಥಳೀಯ ಸಂಸ್ಥೆಗಳು ಆರಂಭಿಸಿ ಕತೃಭೂಮಿ ಕೊಡೆ ಬಗ್ಗೆಯೂ ಮೋದಿ ಪ್ರಸ್ತಾಪಿಸಿ, ಸಣ್ಣ ಗ್ರಾಮದಲ್ಲಿ ಆರಂಭವಾದ ಪ್ರಯಾಣ ಇದೀಗ ಬಹುರಾಷ್ಟ್ರೀಯ ಕಂಪನಿಗಳನ್ನು ತಲುಪಿದೆ. ವೋಕಲ್‌ ಫಾರ್‌ ಲೋಕಲ್‌ಗೆ ಇದಕ್ಕಿಂತ ದೊಡ್ಡ ಉದಾಹರಣೆಗೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.

ಸಂಸ್ಕೃತ ವಾರ್ತೆ:

ಈ ನಡುವೆ ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತಾ ಪ್ರಸಾರಕ್ಕೆ 50 ವರ್ಷ ತುಂಬಿದೆ. ಪುರಾತನ ಭಾಷೆ ದೇಶದ ಜ್ಞಾನಭಂಡಾರ ಮತ್ತು ವಿಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿಸದರು.

ಒಲಿಂಪಿಕ್ಸ್‌:

ಇದೇ ವೇಳೆ ಮುಂದಿನ ತಿಂಗಳು ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೂ ಶುಭ ಹಾರೈಸಿದ ಪ್ರಧಾನಿ, ‘ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಸಾಧನೆ ಮೂಲಕ ಪ್ರತಿ ಭಾರತೀಯರ ಮನ ಗೆದ್ದಿದ್ದರು. ಜೊತೆಗೆ ಈ ಬಾರಿ, ಇದೇ ಮೊದಲ ಸಲ ಎನ್ನುವಂತೆ ಇನ್ನಷ್ಟು ಹೊಸತನಗಳಿಗೆ ಭಾರತೀಯರು ಸಾಕ್ಷಿಯಾಗಲಿದ್ದಾರೆ.

ಶೂಟಿಂಗ್‌ನಲ್ಲಿ ನಮ್ಮ ಪ್ರತಿಭೆ ಮತ್ತಷ್ಟು ಅನಾವರಣಗೊಂಡಿದೆ. ಟೇಬಲ್‌ ಟೆನಿಸ್‌ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಅರ್ಹತೆ ಪಡೆದಿವೆ. ಈ ಬಾರಿ ಕುಸ್ತಿಯಲ್ಲೂ ನಮ್ಮ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮೊದಲ ಬಾರಿಗೆ ಹಾರ್ಸ್‌ ರೇಸಿಂಗ್‌ನಲ್ಲೂ ನಮ್ಮ ತಂಡ ಭಾಗಿಯಾಗಲಿದೆ. ಹೀಗಾಗಿ ಈ ಬಾರಿಯ ಒಲಿಂಪಿಕ್ಸ್‌ ಹೊಸ ಅನುಭವ ನೀಡಲಿದೆ ಎಂದರು. ಜೊತೆಗೆ ವಿಶ್ವಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲೂ ಭಾರತೀಯ ತಂಡ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!