ಕಾಂಗ್ರೆಸ್‌ 3ನೇ ಅಭ್ಯರ್ಥಿ ಪಟ್ಟಿ ಪ್ರಕಟ: ಚಿಕ್ಕಬಳ್ಳಾಪುರಕ್ಕೆ ರಕ್ಷಾ, ಬಳ್ಳಾರಿಗೆ ತುಕಾರಾಂ, ಚಾ.ನಗರಕ್ಕೆ ಬೋಸ್‌

KannadaprabhaNewsNetwork |  
Published : Mar 30, 2024, 12:59 AM ISTUpdated : Mar 30, 2024, 07:57 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ  ಹೊರಬಿದ್ದಿದ್ದು, ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ನಿರೀಕ್ಷೆಯಂತೆ ಚಿಕ್ಕಬಳ್ಳ‍ಾಪುರ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ, ಬಳ್ಳಾರಿಗೆ ಶಾಸಕ ಇ.ತುಕಾರಾಂ ಮತ್ತು ಚಾಮರಾಜನಗರಕ್ಕೆ  ಸುನೀಲ್‌ ಬೋಸ್‌ಗೆ ಟಿಕೆಟ್‌ ದೊರಕಿದೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿ ಶುಕ್ರವಾರ ಹೊರಬಿದ್ದಿದ್ದು, ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ನಿರೀಕ್ಷೆಯಂತೆ ಚಿಕ್ಕಬಳ್ಳ‍ಾಪುರ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ, ಬಳ್ಳಾರಿಗೆ ಶಾಸಕ ಇ.ತುಕಾರಾಂ ಮತ್ತು ಚಾಮರಾಜನಗರಕ್ಕೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ದೊರಕಿದೆ. 

ತೀವ್ರ ಬಿಕ್ಕಟ್ಟು ಹುಟ್ಟುಹಾಕಿರುವ ಕೋಲಾರ ಕ್ಷೇತ್ರವೊಂದನ್ನು ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ ಏಳು ಹಾಗೂ ಎರಡನೇ ಪಟ್ಟಿಯಲ್ಲಿ 17 ಮಂದಿಗೆ ಟಿಕೆಟ್‌ ಘೋಷಿಸಿತ್ತು. 

ಇದೀಗ ಮೂರು ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸುವ ಮೂಲಕ ಒಟ್ಟು 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದಂತೆ ಆಗಿದೆ. ಆದರೆ, ಸಚಿವ ಕೆ.ಎಚ್. ಮುನಿಯಪ್ಪ ಕುಟುಂಬ ಹಾಗೂ ಮಾಜಿ ಸಚಿವ ರಮೇಶ್‌ಕುಮಾರ್‌ ಬಣದ ನಡುವೆ ಟಿಕೆಟ್‌ಗಾಗಿ ಮೇಲಾಟ ನಡೆದಿರುವ ಕೋಲಾರ ಕ್ಷೇತ್ರದ ಸಸ್ಪೆನ್ಸ್‌ ಬಾಕಿ ಉಳಿದಂತಾಗಿದೆ.

ಕೋಲಾರ- ಮುಂದುವರೆದ ಹೈಡ್ರಾಮಾ:ಕೋಲಾರ ಟಿಕೆಟ್‌ಗಾಗಿ ಖಡಾಕಡಿ ಮೇಲಾಟ ನಡೆಸಿರುವ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್‌ಕುಮಾರ್‌ ಬಣದ ಶಾಸಕರೊಂದಿಗೆ ರಾಜ್ಯ ನಾಯಕರು ಗುರುವಾರ ಪ್ರತ್ಯೇಕ ಸಭೆ ನಡೆಸಿ ಹೊಂದಾಣಿಕೆ ವಿಫಲ ಪ್ರಯತ್ನ ನಡೆಸಿದ್ದರು. 

ಉಭಯ ಬಣಗಳು ಪಟ್ಟುಬಿಡದ ಕಾರಣ ಈ ಬಣಗಳ ಬಯಕೆಯ ಅಕಾಂಕ್ಷಿಗಳಾದ ಚಿಕ್ಕಪೆದ್ದಣ್ಣ (ಮುನಿಯಪ್ಪ ಬಣ) ಹಾಗೂ ಎಲ್‌.ಹನುಮಂತಯ್ಯ (ರಮೇಶ್‌ಕುಮಾರ್ ಬಣ) ಹೆಸರು ಕೈಬಿಟ್ಟು, ನ್ಯೂಟ್ರಲ್‌ ಆಕಾಂಕ್ಷಿಗಳ ಪ್ಯಾನೆಲ್‌ ಸಿದ್ಧಪಡಿಸಿ ಹೈಕಮಾಂಡ್‌ಗೆ ರವಾನಿಸಿದ್ದರು.

ನ್ಯೂಟ್ರಲ್‌ ಹೆಸರುಗಳಾಗಿ ಮಾಜಿ ಮೇಯರ್‌ ವಿಜಯ್‌ ಕುಮಾರ್‌ ಪುತ್ರರಾದ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ವಿ.ಗೌತಮ್‌, ನೆಲಮಂಗಲ ಶಾಸಕ ಡಾ.ಶ್ರೀನಿವಾಸ್‌ ಹಾಗೂ ಎಸ್‌.ಎಂ.ಮುನಿಯಪ್ಪ ಅವರ ಹೆಸರು ಕಳುಹಿಸಲಾಗಿದೆ. 

ಈ ಮೂವರ ಪೈಕಿ ಮೊದಲ ಆದ್ಯತೆಯನ್ನು ಗೌತಮ್‌ಗೆ ರಾಜ್ಯ ನಾಯಕರು ನೀಡಿದ್ದು, ಗೌತಮ್‌ ಆಯ್ಕೆ ಬಹುತೇಕ ನಿಕ್ಕಿ ಎಂದು ಹೇಳಲಾಗುತ್ತಿದೆ.

ಆದರೆ, ಮುನಿಯಪ್ಪ ಅವರ ಕುಟುಂಬ ಮಾತ್ರ ಈ ನ್ಯೂಟ್ರಲ್‌ ಅಭ್ಯರ್ಥಿ ಆಯ್ಕೆ ಬಗ್ಗೆ ಸಮಾಧಾನ ಹೊಂದಿಲ್ಲ. ಕೋಲಾರ ಜಿಲ್ಲೆಯಲ್ಲಿ ಭಿನ್ನ ಧೋರಣೆ ಹೊಂದಿರುವ ತಮ್ಮ ಹಾಗೂ ರಮೇಶ್‌ಕುಮಾರ್‌ ಬಣದ ನಡುವೆ ಹೊಂದಾಣಿಕೆ ಮೂಡಿಸದೆ ಮೂರನೇ ಅಭ್ಯರ್ಥಿ (ನ್ಯೂಟ್ರಲ್‌ ಅಭ್ಯರ್ಥಿ) ಕಣಕ್ಕೆ ಇಳಿಸಿದರೆ ಕಾಂಗ್ರೆಸ್‌ ಗೆಲುವು ಕಷ್ಟ ಎಂದು ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಕೋಲಾರ ಟಿಕೆಟ್‌ ವಿಚಾರದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಕೋಲಾರ ಟಿಕೆಟ್‌ ಆಯ್ಕೆ ಕುರಿತ ಘಟನೆಗಳಿಂದ ಮನಸ್ಸಿಗೆ ಆಘಾತವಾಗಿದೆ. 

ಮುಖ್ಯಮಂತ್ರಿಗಳು ಸುಖಾಸುಮ್ಮನೆ ಯಾವುದೋ ಅಭ್ಯರ್ಥಿಯನ್ನು ಘೋಷಿಸಬಾರದು. ಈಗಲೂ ಕಾಲ ಮಿಂಚಿಲ್ಲ. ನಮ್ಮನ್ನು ಒಂದು ಮಾಡಿ ನಮ್ಮ ಕುಟುಂಬಕ್ಕೆ ಅವಕಾಶ ನೀಡಿದರೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ. 

ಅಷ್ಟೇ ಅಲ್ಲದೆ, ಬೇರೆ ಕಡೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ಕೋಲಾರದ್ದು ಮಾತ್ರ ಯಾಕೆ ಬಗೆಹರಿಯುತ್ತಿಲ್ಲ? ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕೋಲಾರ ಸಮಸ್ಯೆ ಬಗೆಹರಿಸುವ ದೊಡ್ಡ ಜವಾಬ್ದಾರಿ ಇದೆ. 

ಯಾರು ಸಮಸ್ಯೆ ಬಗೆಹರಿಸಬೇಕಿತ್ತೋ ಅವರ ಮನಸ್ಸು ಸ್ವಲ್ಪ ದೊಡ್ಡದಾದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಗ್ಗೆಯೇ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪ್ರಿಯಾಂಕಾ ಗಾಂಧಿಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ!
''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''