ಮುಡಾ ಹಗರಣದ ವಿರುದ್ಧ ಮೈಸೂರಿಗೆ ಪಾದಯಾತ್ರೆ- ಬಿಜೆಪಿ ಕಾಲ್ನಡಿಗೆ ವಿರುದ್ಧ ಕಾಂಗ್ರೆಸ್‌ 4 ಪ್ರತಿತಂತ್ರ!

KannadaprabhaNewsNetwork |  
Published : Jul 30, 2024, 01:38 AM ISTUpdated : Jul 30, 2024, 04:58 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಮುಡಾ ಹಗರಣದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ತಿರುಗೇಟು ನೀಡುವ ಸಂಬಂಧ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ.

 ಬೆಂಗಳೂರು : ಮುಡಾ ಹಗರಣದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ತಿರುಗೇಟು ನೀಡುವ ಸಂಬಂಧ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ, ಪಾದಯಾತ್ರೆ ಉದ್ದಕ್ಕೂ ಸುದ್ದಿಗೋಷ್ಠಿಗಳನ್ನು ನಡೆಸಿ ಪ್ರತಿಪಕ್ಷಗಳ ಅವಧಿಯ ಹಗರಣ ಬಿಚ್ಚಿಡುವುದು, ಕಾನೂನು ಹೋರಾಟ ನಡೆಸುವುದು, ಜತೆಗೆ ಮೈಸೂರಿನಲ್ಲಿ ಬೃಹತ್ ಸಮಾವೇಶ ಹಾಗೂ ತಾಲೂಕು, ಜಿಲ್ಲಾ ಮಟ್ಟದಲ್ಲೂ ಸಮಾವೇಶ ನಡೆಸಿ ಮುಡಾ ಹಗರಣ ಬಿಜೆಪಿ ಅವಧಿಯದ್ದು ಎಂದು ದಾಖಲೆ ಸಹಿತ ಸಾಬೀತುಪಡಿಸಲು ನಿರ್ಧರಿಸಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹತ್ತು ಮಂದಿ ಸಚಿವರೊಂದಿಗೆ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ.ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್, ಸಚಿವರಾದ ಎಚ್.ಸಿ.ಮಹಾದೇವಪ್ಪ, ಎಂ.ಸಿ.ಸುಧಾಕರ್, ವೆಂಕಟೇಶ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಕೃಷ್ಣಬೈರೇಗೌಡ, ಬೈರತಿ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕಾಂಗ್ರೆಸ್ಸಿಂದ ಪ್ರತಿ-ಸಮಾವೇಶ:

ಆರಂಭದ ದಿನದಿಂದ ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ಸಿನಿಂದ ಸಮಾವೇಶ ನಡೆಸಿ ಬಿಜೆಪಿಯ ಅವಧಿಯ ಹಗರಣಗಳನ್ನು ಬಿಚ್ಚಿಡಬೇಕು. ಜತೆಗೆ ಮುಡಾ ಹಗರಣ ಬಿಜೆಪಿ ಅವಧಿಯದ್ದು ಎಂಬುದನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿ ಇದು ಮುಖ್ಯಮಂತ್ರಿಗಳ ಸಚ್ಚಾರಿತ್ರ್ಯಕ್ಕೆ ಮಸಿ ಬಳಿಯಲು ನಡೆಸುತ್ತಿರುವ ಹುನ್ನಾರ ಎಂಬುದನ್ನು ಜನರಿಗೆ ಅರ್ಥ ಮಾಡಿಸಬೇಕು ಎಂದು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

3 ಲಕ್ಷ ಜನ ಸೇರಿಸಿ ಸಮಾವೇಶ:

ಇನ್ನು ಮೈಸೂರಿಗೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿರುವುದರಿಂದ ಮೈಸೂರಿನಲ್ಲೇ ಕಾಂಗ್ರೆಸ್‌ ವತಿಯಿಂದ ಬೃಹತ್ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ.

ಸುಮಾರು ಮೂರು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಿ ಬಿಜೆಪಿ, ಜೆಡಿಎಸ್ ವಿರುದ್ಧವೇ ಜನಾಭಿಪ್ರಾಯ ಮೂಡಿಸುವಂತೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ.

ಮಾರ್ಗ ಮಧ್ಯೆ ಸುದ್ದಿಗೋಷ್ಠಿ:

ಪ್ರತಿಪಕ್ಷಗಳ ಪಾದಯಾತ್ರೆ ಸಾಗುವ ಮಾರ್ಗದ ಪ್ರಮುಖ ಕೇಂದ್ರಗಳಲ್ಲಿ ಮಾಧ್ಯಮಗೋಷ್ಠಿ ನಡೆಸಬೇಕು.ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರವನ್ನು ದಾಖಲೆಗಳೊಂದಿಗೆ ಬಹಿರಂಗಗೊಳಿಸಬೇಕು. ಇದು ಬಿಜೆಪಿಯ ಅವಧಿಯದ್ದು ಎಂದು ಒತ್ತಿ ಹೇಳಬೇಕು. ಮುಡಾ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟು ಪ್ರತಿಪಕ್ಷಗಳದ್ದು ರಾಜಕೀಯ ಲಾಭ ಪಡೆಯಲು ನಡೆಸುತ್ತಿರುವ ದುರುದ್ದೇಶದ ಯಾತ್ರೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಲಾಗಿದೆ.

PREV

Recommended Stories

ಕೆರೆಗಳ ಬಫರ್ ವಲಯ ಕಡಿತ ವಿರೋಧಿಸಿ ರಾಜ್ಯಪಾಲರಿಗೆ ಮನವಿ
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್‌ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್‌