ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ವಿಚಾರಣೆ ಎದುರಿಸುತ್ತಿರುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಸಚಿವ ಕೃಷ್ಣಬೈರೇಗೌಡ ಆರೋಪ ಮಾಡಿದ್ದಾರೆ.
ಬೆಂಗಳೂರು : ‘ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ವಿಚಾರಣೆ ಎದುರಿಸುತ್ತಿರುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.
‘ಬಂಧನಕ್ಕೆ ಒಳಗಾಗಿರುವ ಸಚಿವ ಬಿ.ನಾಗೇಂದ್ರ ಅವರಿಗೆ ಸರ್ಕಾರದಲ್ಲಿನ ಉನ್ನತ ಮಟ್ಟದಲ್ಲಿರುವವರ ಹೆಸರು ಹೇಳುವಂತೆ ಇ.ಡಿ. ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ತನ್ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ದೂರಿದ್ದಾರೆ.
ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡೂರಾವ್ ಹಾಗೂ ಸಂತೋಷ್ ಲಾಡ್ ಅವರು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಇ.ಡಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಇ.ಡಿ. ಅಧಿಕಾರಿಗಳು ವಿಚಾರಣೆಗೊಳಪಟ್ಟವರನ್ನು ದಬಾಯಿಸುತ್ತಿದ್ದಾರೆ. ಹಗರಣದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಲ ಸಚಿವರು ಸಹ ಭಾಗಿಯಾಗಿದ್ದಾರೆ, ಹಣ ಚುನಾವಣೆಗೆ ಬಳಕೆಯಾಗಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನೀವು ತಪ್ಪೊಪ್ಪಿಗೆ ನೀಡದಿದ್ದರೆ ನಿಮಗೆ ಇ.ಡಿ. ಶಕ್ತಿ ತೋರಿಸಬೇಕಾಗುತ್ತದೆ. ಬಳಿಕ ನೀವು ಕಷ್ಟಕ್ಕೆ ಸಿಲುಕುತ್ತೀರಿ’ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರ ಅಸ್ಥಿರಗೊಳಿಸಲು ಯತ್ನ:ಕೇಂದ್ರ ಸರ್ಕಾರ ಇ.ಡಿ. ಬಳಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ದೇಶದ ಜನ ಎರಡು ತಿಂಗಳ ಹಿಂದೆ ಅವರಿಗೆ ಪಾಠ ಕಲಿಸಿದ್ದರು. ಇನ್ನೂ ಪಾಠ ಕಲಿಯದಿರುವುದು ದುರಂತ. ಅವರ ಅವನತಿಗೆ ಅವರೇ ಗುಂಡಿ ತೋಡಿಕೊಳ್ಳುತ್ತಿದ್ದಾರೆ ಎಂದು ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇ.ಡಿ. ಅಧಿಕಾರಿಗಳಿಗೆ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಹುಡುಕುವ ಉದ್ದೇಶವೇ ಇಲ್ಲ. ತನಿಖೆ ನೆಪ ಮಾತ್ರವಾಗಿದ್ದು, ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದೇ ಇ.ಡಿ. ತನಿಖೆಯ ಉದ್ದೇಶ. ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದರು.
ಬಿಜೆಪಿಗೆ ಸೇರಿದರೆ ಖುಲಾಸೆ ಚೀಟಿ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇ.ಡಿ.ಯು ಬಿಜೆಪಿಯ ರಾಜಕೀಯ ವಿಭಾಗವಾಗಿ ಬದಲಾಗಿದೆ. ಇ.ಡಿ. ತನಿಖೆ ಎಂಬುದು ರಾಜಕೀಯ ಷಡ್ಯಂತ್ರ. ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಇ.ಡಿ.-ಐ.ಟಿ. ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ನಡೆಸಿ ಕೇಸು ಹಾಕುವುದು, ಬಿಜೆಪಿಗೆ ಸೇರಿದರೆ ಖುಲಾಸೆ ಚೀಟಿ ನೀಡುವುದು ವಾಡಿಕೆಯಾಗಿದೆ. ಇದನ್ನು ರಾಜ್ಯದಲ್ಲಿ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಹಗರಣಗಳ ಬಗ್ಗೆ ಇ.ಡಿ. ತನಿಖೆ ಏಕಿಲ್ಲ:
ಪ್ರಿಯಾಂಕ್ ಖರ್ಗೆ ಮಾತನಾಡಿ, ತನಿಖೆ ನೆಪದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವುದು ಇ.ಡಿ.ಯ ಕಾರ್ಯನಿರ್ವಹಣೆ ರೀತಿ ಆಗಿಬಿಟ್ಟಿದೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 46 ಕೋಟಿ ರುಪಾಯಿ ಲೂಟಿಯಾಗಿದೆ. ಬಿಜೆಪಿಯ ಮಾಜಿ ಪರಿಷತ್ ಸದಸ್ಯ ಹಾಗೂ ಮಾಜಿ ಲೋಕಸಭೆ ಅಭ್ಯರ್ಥಿಯೊಬ್ಬರ ಬ್ಯಾಂಕ್ ಖಾತೆಗೆ 3 ಕೋಟಿ ರು. ಹೋಗಿದೆ. ಈ ಪ್ರಕರಣವನ್ನು ಏಕೆ ಇ.ಡಿ. ತನಿಖೆ ಮಾಡುತ್ತಿಲ್ಲ? ಭೋವಿ ನಿಗಮ, ತಾಂಡ ಅಭಿವೃದ್ಧಿ ನಿಗಮದಲ್ಲೂ ಕೋಟಿ ಕೋಟಿ ಲೂಟಿಯಾಗಿದೆ ಅಲ್ಲಿ ಏಕೆ ತನಿಖೆ ಇಲ್ಲ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಜರಿದ್ದರು.
ಇಡಿ. ಕೇಸಲ್ಲಿ 95% ವಿಪಕ್ಷಗಳೇ ಗುರಿ!
2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ‘ಇ.ಡಿ.’ ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400ರಷ್ಟು ಹೆಚ್ಚಾಗಿದೆ. ಅದರಲ್ಲಿ ಶೇ.95ರಷ್ಟು ಪ್ರಕರಣಗಳು ವಿಪಕ್ಷಗಳ ವಿರುದ್ಧವಾಗಿದ್ದರೆ, ಶೇ.5ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ದಾಖಲಾಗಿದೆ. ಈ ಅಂಕಿಅಂಶಗಳೆಲ್ಲವೂ ಬಿಜೆಪಿ ವಾಷಿಂಗ್ ಮಷಿನ್ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ ಎಂದು ಸಚಿವರು ಆರೋಪಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.53ರಷ್ಟು ಪ್ರಕರಣಗಳು ಮಾತ್ರ ವಿಪಕ್ಷ ನಾಯಕರ ಮೇಲೆ ದಾಖಲಾಗಿತ್ತು. ಶೇ.47ರಷ್ಟು ಪ್ರಕರಣಗಳು ಸ್ವತಃ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಾಯಕರ ಮೇಲೆ ದಾಖಲಾಗಿದ್ದವು. ಆದರೆ ಇಂದಿನ ಸ್ಥಿತಿ ಏನು ಎಂದು ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.