ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಯುದ್ಧವನ್ನೇ ಸಾರಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ತಮ್ಮ ಹೋರಾಟದ ಕಹಳೆ ಮೊಳಗಿಸಿದ್ದಾರೆ.
ಬೆಳಗಾವಿ : ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಯುದ್ಧವನ್ನೇ ಸಾರಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಹೋರಾಟ ಮುಂದುವರಿಸಿದೆ. ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಬೃಹತ್ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕರು, ಸೋಮವಾರ ಬೆಳಗಾವಿಯಲ್ಲಿ ತಮ್ಮ ಹೋರಾಟದ ಕಹಳೆ ಮೊಳಗಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇ ವಾಲಾ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಪುಟ ಸಹೋದ್ಯೋಗಿಗಳು ಹಾಗೂ ಇತರ ನಾಯಕರು ಭಾಗಿಯಾಗಿ ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ನಡೆಸಿದ್ದ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ನಗರದ ಸಿಪಿಇಡಿ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷ ಈ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿತ್ತು.
ಸಿದ್ದು ಆಕ್ರೋಶ:
ಈ ವೇಳೆ ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿದ್ದನ್ನು ಖಂಡಿಸಿ ಸಿಲಿಂಡರ್‌ಗೆ ಹೂಮಾಲೆ ಹಾಕುವ ಮೂಲಕ ಸಮಾವೇಶ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸಿದೆ ಎಂದು ಕೇಂದ್ರ ಸರ್ಕಾರದ ತೀವ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ತನ್ನ ಆಡಳಿತ ಅವಧಿಯಲ್ಲಿ ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ, ಜನದ್ರೋಹಿಯಾಗಿ ವರ್ತಿಸಿದ್ದನ್ನು ಬಿಟ್ಟರೆ ಬೇರೇನು ಮಾಡಿದೆ ತೋರಿಸಲಿ ಎಂದು ಸಿದ್ದರಾಮಯ್ಯ ಬಿಜೆಪಿಗೆ ನೇರ ಸವಾಲೆಸೆದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್‌ಎಸ್‌ಎಸ್ ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ. ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಸಮಾಜದಲ್ಲಿ ಒಡಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನಿದೆ ಎಂದು ದೇಶದ ಜನಕ್ಕೆ ವಿವರಿಸಿ ಎಂದು ತಾಕೀತು ಮಾಡಿದರು.
ಸಿರಿವಂತರ ಮೇಲೆ ತೆರಿಗೆ ಕಡಿತ:
ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ ಶೇ.32 ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ.25ಕ್ಕೆ ಇಳಿಸಲಾಗಿದೆ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿ ಆಡಳಿತವನ್ನು ಪ್ರಶ್ನಿಸಬಾರದಾ? ಎಂದರು.
ಭಾರತೀಯರನ್ನು ನಿರಂತರ ಸುಳ್ಳುಗಳಲ್ಲಿ ಇನ್ನೂ ಎಷ್ಟು ವರ್ಷ ಮರಳು ಮಾಡುತ್ತೀರಿ? ಸತ್ಯ ಹೇಳಿ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆಗೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ಲುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಆ ಶಕ್ತಿ ಇದೆ ಎಂದು ಗುಡುಗಿದರು.
ಬಿಜೆಪಿಯ ದೇಶ ವಿರೋಧಿ ಆಡಳಿತ, ಜನ ವಿರೋಧಿ ಕ್ರಮಗಳನ್ನು ಖಂಡಿಸಿ ಭಾಷಣ ಮಾಡುವ ವೇಳೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, ನಾವು ಬಿಜೆಪಿ- ಆರ್‌ಎಸ್‌ಎಸ್‌ನ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ. ನಮ್ಮ ಕಾರ್ಯಕರ್ತರಿಗೂ ಇದೆ ಎಂದರು. ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ? ಸ್ವಾತಂತ್ರ್ಯ ಹೋರಾಟಕ್ಕೆ ಏಕೆ ಬರಲಿಲ್ಲ? ಏನ್ ಮಾಡುತ್ತಾ ಕೂತಿದ್ರಿ ಎಂದು ಜರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಮೊದಲಾದವರು ಇದ್ದರು.