ಶಿಕ್ಷಕರ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ

KannadaprabhaNewsNetwork | Updated : May 19 2024, 04:41 AM IST

ಸಾರಾಂಶ

ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಶಿಕ್ಷಕರ ಪರವಾಗಿ ಧ್ವನಿ ಎತ್ತಲು ವಿಧಾನ ಪರಿಷತ್ತಿನಲ್ಲಿ ಸದಸ್ಯರ ಬಹುಮತ ಅಗತ್ಯವಿರುವ ಕಾರಣ ಶಿಕ್ಷಕರು ಸರ್ಕಾರದ ಪರ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಅನುಕೂಲವಾಗುತ್ತದೆ

 ಮಾಲೂರು :  ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣೀಕ ಪ್ರಯತ್ನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾಡಲಿದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರುಅವರು ಇಲ್ಲಿನ ವೈಟ್ ಗಾರ್ಡನ್‌ ಬಡಾವಣೆಯ ಮಾನಸ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಅಗ್ನೇಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಹಮ್ಮಿಕೊಂಡಿದ್ದ ಮತಯಾಚನೆ ಸಭೆಯಲ್ಲಿ ಅವರು ಮತ ಯಾಚಿಸಿದರು.

ಶಿಕ್ಷಕರ ಪರ ಹೋರಾಟ

ಡಿ.ಟಿ.ಶ್ರೀನಿವಾಸ್ ಅವರು ದಶಕ ಕಾಲದಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡಿದವರು. ಅವರು ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆ   ತರಬೇಕೆಂಬ ಉದ್ದೇಶವನ್ನು ಹೊಂದಿದ್ದು ಅವರಿಗೆ ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಶಾಸ್ತ್ಯ ಮತಗಳನ್ನು ನೀಡುವುದರ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಶಿಕ್ಷಕರ ಪರವಾಗಿ ಧ್ವನಿ ಎತ್ತಲು ವಿಧಾನಸಭೆ ಶಾಸನ ಸಭೆಯಲ್ಲಿ ಕೈಗೊಳ್ಳುವ ಹೊಸ ಶಾಸನಗಳು ಕಾಯ್ದೆಗಳು ಯೋಜನೆಗಳಿಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯರ ಬಹುಮತ ಅಗತ್ಯವಿರುವ ಕಾರಣ ಶಿಕ್ಷಕರು ಸರ್ಕಾರದ ಪರ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆ ಎಂದರು. 

ಬೇಡಿಕೆಗಳ ಬಗ್ಗೆ ಸಿಎಂ ಜತೆ ಚರ್ಚೆ

ಶ್ರೀನಿವಾಸ್ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ. ಶಿಕ್ಷಕರು ಶ್ರೀನಿವಾಸ್ ಅವರನ್ನು ಗೆಲ್ಲಿಸಿದರೆ ಶಿಕ್ಷಣ ಇಲಾಖೆಯಲ್ಲಿನ ಶಿಕ್ಷಕರ ಬೇಡಿಕೆಗಳು ಭರವಸೆಗಳು ಈಡೇರಿಸಲು ಸರ್ಕಾರದ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತದೆ. ಆಗ್ನೇಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಈಗಾಗಲೇ ಶ್ರೀನಿವಾಸ್ ಪರವಾದ ಅಲೆಯಿದ್ದು ಅವರು ಗೆಲ್ಲುವುದು ಶತಸಿದ್ಧ ಎಂದರು.ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ೫೦೦ಕ್ಕೂ ಹೆಚ್ಚು ಪ್ರೌಢಶಾಲಾ ಶಿಕ್ಷಕ ಮತದಾರರು, ತಾಲೂಕಿನಲ್ಲಿ ನನ್ನ ಗೌರವ ಕಾಪಾಡಲು ಸರ್ಕಾರದಲ್ಲಿ ನಿಮ್ಮ ಪರವಾಗಿ ಮಾತನಾಡುವ ಶಕ್ತಿಗಾಗಿ ಡಿ.ಟಿ.ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕು. ಈಗಾಗಲೇ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪ್ರೌಢಶಾಲಾ ಶಿಕ್ಷಕ ಮತದಾರರಿಂದ ಮತಯಾಚನೆ ಮಾಡಲಾಗಿದೆ. ಸರ್ಕಾರದ ಪ್ರತಿನಿಧಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರೆ ಶಿಕ್ಷಕರ ಎಲ್ಲಾ ಬೇಡಿಕೆಗಳು ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ

ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ನನಗೆ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಬಹುದು, ಆದರೆ ೧೦ ತಿಂಗಳಲ್ಲಿ ಅಭಿವೃದ್ಧಿಯನ್ನು ಗಮನಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ವಿಜಯಪುರದಿಂದ ತಾಲೂಕಿನ ಸಂಪಂಗೆರೆ ಗಡಿಯವರೆಗೂ ಹಾದು ಹೋಗುವ 6 ಪಥದ ರಸ್ತೆಗೆ ಸರ್ಕಾರ 2200 ಕೋಟಿ ರೂಗಳನ್ನು ಬಿಡುಗಡೆಗೊಳಿಸಿದ್ದು, ಮಾಲೂರು ಪಟ್ಟಣದಲ್ಲಿ ಹಾದು ಹೋಗುವ ರಸ್ತೆಯನ್ನು ಮೇಲ್ ಸೇತುವೆ ನಿರ್ಮಿಸಲು ಸರ್ಕಾರ350 ಕೋಟಿ ರೂಗಳನ್ನು ಬಿಡುಗಡೆಗೊಳಿಸಿದೆ ಎಂದರು. 

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ. ಮಧುಸೂಧನ್, ಎಚ್.ಎಂ.ವಿಜಯನರಸಿಂಹ, ಕ ಸಾ ಪ ತಾ ಅಧ್ಯಕ್ಷ ಹನುಮಂತಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿ ಉಲ್ಲಾ ಖಾನ್, ತಾಲೂಕು ಯಾದವ ಸಂಘದ ಅಧ್ಯಕ್ಷ ಗೋವಿಂದಪ್ಪ, ಮುಖಂಡರಾದ ಅಂಜನಪ್ಪ, ಲಿಂಗಾಪುರ ಕೃಷ್ಣಪ್ಪ(ಕಿಟ್ಟಿ), ಜಿಲ್ಲಾ ಯಾದವ ಸಂಘದ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಇನ್ನಿತರರು ಹಾಜರಿದ್ದರು.

Share this article