ಮೈಸೂರು : ರಾಜ್ಯ ಸರ್ಕಾರದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಿದೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯಲ್ಲಿ ಸುರ್ಜೇವಾಲ ಹೆಸರು ಹಾಕಿರುವಾಗ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರನ್ನು ಸಹ ಹಾಕಬಹುದಿತ್ತು. ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಮಾತ್ರ ಹಾಕಿದ್ದು, ಉಳಿದ ಕೇಂದ್ರ ಸಚಿವರ ಹೆಸರನ್ನು ಕೈಬಿಡಲಾಗಿದೆ ಎಂದರು.
ಸರ್ಕಾರಿ ಕಾರ್ಯಕ್ರಮ ಎಂದು ಹೇಳಿಕೊಂಡು ಶಕ್ತಿ ಪ್ರದರ್ಶನ ಸಮಾವೇಶ ಮಾಡಿದ್ದಾರೆ, ಬ್ಲಾಕ್ ಮೇಲ್ ಸಮಾವೇಶ ಮಾಡಿದ್ದಾರೆ. ಸಾಧನಾ ಸಮಾವೇಶಕ್ಕೂ ಸುರ್ಜೇವಾಲಗೂ ಏನು ಸಂಬಂಧ? ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲರನ್ನು ಮುಂದಿಟ್ಟುಕೊಂಡು ಸಮಾವೇಶ ಮಾಡಿದ್ದಾರೆ. ಪ್ರಧಾನಿ ಮೋದಿಯವರನ್ನು ಬೈಯುವ ಒಂದಂಶದ ಕಾರ್ಯಕ್ರಮ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಹಿರಂಗ ಚರ್ಚೆಗೆ ಬರಲಿ:
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆಂದೇ 2627 ಕೋಟಿ ಅನುದಾನ ಕೊಟ್ಟಿದೆ. ಮೈಸೂರಿನಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಹಣ ಕೊಟ್ಟಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮೈಸೂರಿಗೆ 1393 ಕೋಟಿ ಕೊಟ್ಟಿದ್ದಾರೆ. ಇದ್ಯಾವುದನ್ನೂ ಸ್ಮರಿಸದೇ ಸಾಧನಾ ಸಮಾವೇಶ ಮಾಡಿದ್ದಾರೆ. ಮುದ್ರಾ ಯೋಜನೆಯಲ್ಲಿ ಮೈಸೂರು ಜಿಲ್ಲೆಗೆ 3 ಸಾವಿರ ಕೋಟಿ ಕೊಟ್ಟಿದ್ದಾರೆ ಎಂದರು.
ವಿಶ್ವಕರ್ಮ ಯೋಜನೆಯಲ್ಲಿ 6 ಸಾವಿರ ಮಂದಿಗೆ ತರಬೇತಿ ನೀಡಲಾಗುತ್ತಿದೆ. ಮುದ್ರಾ ಯೋಜನೆಯಲ್ಲಿ ಮೈಸೂರು ಜಿಲ್ಲೆಯಾದ್ಯಂತ 5,38,000 ಫಲಾನುಭವಿಗಳಿದ್ದಾರೆ. ಈ ಯೋಜನೆಯಡಿ ಇದುವರೆಗೂ 10 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೂ ಮೈಸೂರು ಜಿಲ್ಲೆಗೆ ಕೇಂದ್ರ ಸರ್ಕಾರ ಏನನ್ನೂ ಕೊಟ್ಟಿಲ್ಲ ಎಂದಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಅನುದಾನದಲ್ಲಿ ನಮ್ಮದು ಎಷ್ಟಿದೆ, ನಿಮ್ಮದು ಎಷ್ಟಿದೆ ತಿಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಸಮಾವೇಶದ ನೆಪದಲ್ಲಿ ಬಲ ಪ್ರದರ್ಶನ:
ಸಾಧನಾ ಸಮಾವೇಶ ಮಾಡಲು ಬಂದು ನಿಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದೇ ಸಾಧನೆಯಾ? ಡಿ.ಕೆ. ಶಿವಕುಮಾರ್ ಹೇಳಿ ಹೋಗಿದ್ದರೂ ಸೌಜನ್ಯಕ್ಕಾದರೂ ಅವರ ಹೆಸರ ಹೇಳಬಹುದಿತ್ತಲ್ವಾ? ಯಾರೋ ಹಿಂದಿನಿಂದ ಬಂದು ಹೇಳಿದಾಗ ನೀವು ನಡೆದುಕೊಂಡ ರೀತಿ ಸರೀನಾ? ಸಾಧನಾ ಸಮಾವೇಶದ ನೆಪದಲ್ಲಿ ಬಲ ಪ್ರದರ್ಶನ ಮಾಡಿದ್ದೀರಾ. ಸಮಾವೇಶದಲ್ಲಿ ಪರಸ್ಪರ ವಿಶ್ವಾಸದ ಕೊರತೆಯನ್ನು ತೋರಿಸಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯರ ಭಾಷಣ ಗಮನಿಸಿದರೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಚುನಾವಣೆಗೆ ಹೋಗುವ ಹುನ್ನಾರ ನಡೆಸಿದ್ದಾರೇನೊ ಎನಿಸುತ್ತಿದೆ. ತೆರಿಗೆದಾರರ ಹಣದಲ್ಲಿ ಸಮಾವೇಶ ಮಾಡಿ ಪೋಲು ಮಾಡಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ, ನಗರ ವಕ್ತಾರ ಎಂ.ಎ. ಮೋಹನ್, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ದಯಾನಂದ ಪಟೇಲ್, ನಗರ ಉಪಾಧ್ಯಕ್ಷ ಜೋಗಿ ಮಂಜು, ಕಾರ್ಯದರ್ಶಿ ನಂದಕುಮಾರ್ ಮೊದಲಾದವರು ಇದ್ದರು.
ಡಿಕೆಶಿ ನೋಡಿದ್ರೇ ಪಾಪ ಅನ್ಸುತ್ತೆ
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಬಿಜೆಪಿ ನಾಯಕರಿಗೆ ಹೆಚ್ಚು ಪ್ರೀತಿ ಬಂದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ.ಎಸ್. ಶ್ರೀವತ್ಸ ಅವರು, ಡಿ.ಕೆ. ಶಿವಕುಮಾರ್ ನೋಡಿದ್ರೇ ನಿಜವಾಗಲೂ ಪಾಪ ಅನ್ಸುತ್ತೆ. ಸಮಾವೇಶದಲ್ಲಿ ಅವರು ಭಾಷಣ ಮಾಡಿ ಹೋದ ಮೇಲೂ ಸ್ವಾಗತ ಹೇಳಬಹುದಿತ್ತು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಸ್ವಾಗತ ಮಾಡಿಲ್ಲ, ವೇದಿಕೆಯ ಮೇಲೆ ಇಲ್ಲದಿದ್ರು, ಮಾಡಬಹುದಿತ್ತು. ಆದರೆ ಉಪ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿಲ್ಲ, ಅದನ್ನು ನೋಡಿದ್ರೆ ಪಾಪ ಅನ್ಸುತ್ತೆ. ನಂವೆಂಬರ್ ನಲ್ಲಿ ಬಹುಶಃ ಸಿಎಂ ಸ್ಥಾನ ಬದಲಾವಣೆ ಆಗುತ್ತೆ ಎಂಬುದು ಕಾಣುತ್ತಿದೆ ಎಂದು ತಿಳಿಸಿದರು.