ಉಪ ಚುನಾವಣೆ ಭರ್ಜರಿ ಗೆಲುವಿನ ನೆಪದಲ್ಲಿ ಗುರುವಾರ ಹಾಸನದಲ್ಲಿ ನಡೆದ ಜನ ಕಲ್ಯಾಣೋತ್ಸವ ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿದ್ದ ದಾವಣಗೆರೆ ಸಿದ್ದರಾಮೋತ್ಸವದ ಶಕ್ತಿ ಪ್ರದರ್ಶನದ ನೆನಪು ಮಾರ್ದನಿಸುವಂತೆ ಮಾಡಿತು
ಗಿರೀಶ್ ಗರಗ
ಹಾಸನ : ಉಪ ಚುನಾವಣೆ ಭರ್ಜರಿ ಗೆಲುವಿನ ನೆಪದಲ್ಲಿ ಗುರುವಾರ ಹಾಸನದಲ್ಲಿ ನಡೆದ ಜನ ಕಲ್ಯಾಣೋತ್ಸವ ವಿಧಾನಸಭಾ ಚುನಾವಣೆಗೂ ಮುನ್ನ ನಡೆದಿದ್ದ ದಾವಣಗೆರೆ ಸಿದ್ದರಾಮೋತ್ಸವದ ಶಕ್ತಿ ಪ್ರದರ್ಶನದ ನೆನಪು ಮಾರ್ದನಿಸುವಂತೆ ಮಾಡಿತು. ತನ್ಮೂಲಕ ಮುಡಾ, ಮುಖ್ಯಮಂತ್ರಿ ಬದಲಾವಣೆ ಚರ್ಚೆಯಂಥ ವಿಚಾರಗಳು, ಜನಮಾನಸದಲ್ಲಿರುವ ಸಿದ್ದರಾಮಯ್ಯ ಪ್ರಭಾವಳಿ ಕುಂದಿಸಿಲ್ಲ ಎಂಬ ಸಂದೇಶ ರವಾನಿಸುವ ಸಿದ್ದು ಪಾಳಯದ ಪ್ರಯತ್ನ ಸಂಪೂರ್ಣ ಯಶಸ್ವಿಯಾಯಿತು.
ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಸಮಾವೇಶ ಆಗಬೇಕೋ? ಅಥವಾ ಪಕ್ಷದ ಸಮಾವೇಶ ಆಗಬೇಕೋ? ಎಂಬ ಬಗ್ಗೆ ವಿವಾದ ಉಂಟಾಗಿತ್ತು. ಅಂತಿಮವಾಗಿ ಪಕ್ಷದ ಬಾವುಟದ ಅಡಿಯಲ್ಲೇ ಸಮಾವೇಶ ನಡೆಯಿತಾದರೂ ಸಿದ್ದರಾಮಯ್ಯ ಕಂಡಾಗ, ಮಾತಿಗೆ ಇಳಿದಾಗ, ಹೆಸರು ಪ್ರಸ್ತಾಪವಾದಾಗ ಮೊಳಗಿದ ಕಾರ್ಯಕರ್ತರ ಹರ್ಷೋದ್ಘಾರದಿಂದಾಗಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ಉದ್ದೇಶ ಸಾಕಾರಗೊಂಡಿತ್ತು.
ಈ ಮೂಲಕ ತಮ್ಮನ್ನು ತುಳಿಯಲು ಅಣಿಯಾಗಿರುವ ಆಂತರಿಕ ಹಾಗೂ ಬಾಹ್ಯ ರಾಜಕೀಯ ಶಕ್ತಿಗಳಿಗೆ ಸ್ವಾಭಿಮಾನಿ ಒಕ್ಕೂಟದ ಬೆಂಬಲದೊಂದಿಗೆ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದರು.
ಸಮಾವೇಶದ ಮೂಲಕ ಹೊಸ ಅಧ್ಯಾಯ:
ಸಮಾವೇಶ ಆಯೋಜನೆ ಕುರಿತ ಗೊಂದಲದ ಬಗ್ಗೆ ಭಾಷಣದಲ್ಲೂ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಉಪಚುನಾವಣೆ ಫಲಿತಾಂಶದ ನಂತರ ಕೃತಜ್ಞತಾ ಸಮಾವೇಶ ಮಾಡುತ್ತೇವೆ ಎಂದು ಸ್ವಾಭಿಮಾನಿ ಒಕ್ಕೂಟದ ಸದಸ್ಯರು ಹೇಳಿದ್ದರು. ಆದರೆ ನಾನೇ ಪಕ್ಷದ ಅಡಿ ಸಮಾವೇಶ ಮಾಡುವಂತೆ ಹೇಳಿದೆ.
ನಾನೀಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಒಕ್ಕೂಟವು ಸಮಾವೇಶ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಮಾವೇಶ ಮಾಡುವಂತೆ ತಿಳಿಸಿದೆ. ಈ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ. ಎಲ್ಲ ಮತದಾರರಿಗೆ, ಕಾರ್ಯಕರ್ತರಿಗೂ, ಮುಖಂಡರಿಗೂ ಅಭಿನಂದನೆಗಳು. ಈ ಸಮಾವೇಶ ಹೊಸ ಅಧ್ಯಾಯ ಬರೆಯುತ್ತಿದೆ ಎಂದರು.
ತಮ್ಮ ಭಾಷಣದಲ್ಲಿ ದೇವೇಗೌಡ, ಜೆಡಿಎಸ್ ಹಾಗೂ ಬಿಜೆಪಿಯನ್ನು ಖಂಡತುಂಡ ಮಾಡುವಂತೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ, ನಾನು ಇರುವವರೆಗೂ ಗ್ಯಾರಂಟಿ ಯೋಜನೆ ಸ್ಥಗಿತವಾಗುವುದಿಲ್ಲ. 2028ರ ಮೇ ವರೆಗೂ ಈ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಗೆದ್ದು ಯೋಜನೆ ಮುಂದುವರೆಸುತ್ತೇವೆ ಎನ್ನುವ ಮೂಲಕ ಹಲವು ಅರ್ಥ ಹೊಮ್ಮುವ ಹೇಳಿಕೆ ನೀಡಿದರು.
ಸಾಯೋವರೆಗೆ ಸಿದ್ದು ಜತೆಗಿರುತ್ತೇನೆ:
ಇಡೀ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಬಹುಪರಾಕ್‌ಗೆ ಮೀಸಲಿದ್ದಂತೆ ಕಂಡರೆ ಭಾಗವಹಿಸಿದ್ದ ಎಲ್ಲ ಸಚಿವರು, ನಾಯಕರು ಮುಖಂಡರು ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು. ಇದರ ಪ್ರಭಾವವೋ ಏನೋ ಎಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ, ತಾವು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ಕನಕಪುರದ ಬಂಡೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ನಾನು ಯಾವಾಗಲೂ ಸಿದ್ದರಾಮಯ್ಯ ಬೆಂಬಲವಾಗಿ ಇರುತ್ತೇನೆ ಎಂದು ಘೋಷಿಸಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಈ ಕನಕಪುರದ ಬಂಡೆ ಸಾಯುವವರೆಗೂ ಸಿದ್ದರಾಮಯ್ಯ ಜತೆಯಲ್ಲಿರುತ್ತೇನೆ’ ಎಂದು ಹೇಳಿದರು.
ಸಿದ್ದುಗೆ ಸಚಿವರ ಬಹುಪರಾಕ್:
ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಸಚಿವರು, ಶಾಸಕರು ಸಿದ್ದರಾಮಯ್ಯ ಗುಣಗಾನ ಮಾಡಿದರು. ಅದರಲ್ಲೂ ವಸತಿ ಸಚಿವ ಜಮೀರ್ ಅಹಮದ್ ಖಾನ್, ಸಿದ್ದರಾಮೋತ್ಸವವಾದ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನೋಡಿದ್ದೇನೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ‘ಸಮಾವೇಶದ ಹೆಸರನ್ನು ಸ್ವಾಭಿಮಾನಿ ಸಮಾವೇಶ ಎಂದೇ ಪದೇ ಪದೆ ಪುನರುಚ್ಚರಿಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. 2028ರಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಬೇಕಾದರೆ ಹೀಗೆ ಕೆಲಸ ಮಾಡಬೇಕು’ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡುವಾಗ, ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಲ್ಲಾಡಿಸಲು ಆಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾರಾಜಿಸಿದ ಸಿದ್ದು ಭಾವಚಿತ್ರ:
ಸಮಾವೇಶದಲ್ಲಿ ಸುಮಾರು 2 ಲಕ್ಷದವರೆಗೆ ಜನ ಪಾಲ್ಗೊಂಡಿದ್ದರು. ಸಮಾವೇಶದ ವೇದಿಕೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಕಾಂಗ್ರೆಸ್ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಸಮಾವೇಶಕ್ಕೆ ಬಂದಿದ್ದ ಜನರ ಕೈಗಳಲ್ಲೆಲ್ಲ ಸಿದ್ದರಾಮಯ್ಯ ಅವರ ಭಾವಚಿತ್ರ ಮಾತ್ರವಿತ್ತು. ಅಲ್ಲದೆ ಬ್ಯಾನರ್‌ಗಳ ತುಂಬೆಲ್ಲಾ ಸಿದ್ದರಾಮಯ್ಯ ಅವರೇ ತುಂಬಿಕೊಂಡಿದ್ದರು. ಇದು ಸಿದ್ದರಾಮಯ್ಯ ಬೆಂಬಲಿಗರ ಸಮಾವೇಶ ಎಂಬಂತೆ ಭಾಸವಾಗುತ್ತಿತ್ತು.
ಗೈರಾದ ಸಚಿವರು:
ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿ ಬಹುತೇಕ ಎಲ್ಲ ಸಚಿವರು, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಸೇರಿ ಬಹುತೇಕ ಎಲ್ಲ ನಾಯಕರು ಭಾಗವಹಿಸಿದ್ದರು. ಆದರೆ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೃಷ್ಣ ಬೈರೇಗೌಡ, ಮಧು ಬಂಗಾರಪ್ಪ ಸೇರಿ ಹಲವರು ಸಚಿವರು ಗೈರಾಗಿದ್ದರು.