ಸಿಎಂ ಬದಲು ಹೇಳಿಕೆ : ಅಶೋಕ್‌ಗೆ ‘ಕೈ’ ತಪರಾಕಿ - ಮೊದಲು ತಮ್ಮ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಲಿ

Published : Feb 03, 2025, 10:16 AM IST
R Ashok

ಸಾರಾಂಶ

ಅಶೋಕ್‌ ಅವರು ಮೊದಲು ತಮ್ಮ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಲಿ  ಎಂದು ಸಿಎಂ ಬದಲಾವಣೆ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರ

ಬೆಂಗಳೂರು : ನವೆಂಬರ್‌ ವೇಳೆಗೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರ ಬದಲಾವಣೆಯಾಗಲಿದೆ ಎಂಬ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರ ಹೇಳಿಕೆಗೆ ಪ್ರತ್ಯೇಕವಾಗಿ ತಿರುಗೇಟು ನೀಡಿರುವ ಡಾ। ಜಿ.ಪರಮೇಶ್ವರ್‌, ಎನ್‌.ಎಸ್‌.ಬೋಸರಾಜು, ಚಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ ಮತ್ತಿತರ ಸಚಿವರು, ಕಾಂಗ್ರೆಸ್‌ನಲ್ಲಿ ಅಂಥ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ. ಅಶೋಕ್‌ ಅವರು ಮೊದಲು ತಮ್ಮ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌, ಆರ್‌.ಅಶೋಕ್‌ ಅವರು ಯಾವಾಗ ಜ್ಯೋತಿಷ್ಯ ಹೇಳುವುದನ್ನು ಕಲಿತುಕೊಂಡರೋ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿ ಬದಲಾವಣೆಯಂತಹ ಯಾವುದೇ ಬೆಳವಣಿಗೆ ನಮ್ಮಲ್ಲಿ ಇಲ್ಲ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಶಾಸಕರೆಲ್ಲರೂ ಅಂದುಕೊಂಡಿದ್ದೇವೆ. ಶಾಸಕರು ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದಾಗ ಅಥವಾ ಹೈಕಮಾಂಡ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಘೋಷಣೆ ಮಾಡಿದ ವೇಳೆ ಎರಡೂವರೆ ವರ್ಷ ಮಾತ್ರ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತಾರೆ. ಆ ಮೇಲೆ ಮುಂದಿನ ಯೋಚನೆ ಮಾಡೋಣ ಅಂತ ಹೇಳಿಲ್ಲ. ಹಾಗಾಗಿ ನಮ್ಮ ಮನಸ್ಸಿನಲ್ಲಿ ಅವರು ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆಂದು ಇದೆ. ಈ ಮಧ್ಯೆ ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ ಎಂದರು.

ಅಶೋಕ್‌ ತಮ್ಮ ಪಕ್ಷದ ಗೊಂದಲ ಸರಿಪಡಿಸಲಿ: ಮಂಡ್ಯದಲ್ಲಿ ಮಾತನಾಡಿರುವ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಅರ್.ಅಶೋಕ್ ಯಾವಾಗ ಎಐಸಿಸಿ ಜವಾಬ್ದಾರಿ ತೆಗೆದುಕೊಂಡರು? ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಗೌರವವಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೇ ತೊಡೆ ತಟ್ಟುತ್ತಿದ್ದಾರೆ. ಮೊದಲು ಅವರ ಪಕ್ಷದಲ್ಲಿ ಉಂಟಾಗಿರುವ ಗೊಂದಲ, ಒಡಕನ್ನು ಸರಿಪಡಿಸಿಕೊಳ್ಳಲಿ ಖಾರವಾಗಿ ಪ್ರತಿಕ್ರಿಯಿಸಿದರು.

ಅಶೋಕ್‌ಗೆ ಸಾಮಾನ್ಯ ಜ್ಞಾನ ಇದೆಯೇ?: ರಾಯಚೂರಿನಲ್ಲಿ ಮಾತನಾಡಿರುವ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು, ಯಾವ ಅಕ್ಟೋಬರ್‌, ನವೆಂಬರ್‌ಗೂ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಚರ್ಚೆ ನಮ್ಮ ಪಕ್ಷದಲ್ಲಿಲ್ಲ. ಅಶೋಕ್‌ ಅವರಿಗೆ ಸಾಮಾನ್ಯ ಜ್ಞಾನ ಇದೆಯೇ? ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ದಿನಾಂಕ ಕೊಡುವುದಕ್ಕೆ ನಾಚಿಕೆ ಆಗುವುದಿಲ್ಲವೇ? ಮೊದಲು ಅವರ ಪಕ್ಷದ ಸಮಸ್ಯೆ ಸರಿಪಡಿಸಿಕೊಳ್ಳಲಿ. ಪಕ್ಷವನ್ನು ಆರು ಭಾಗ ಮಾಡಿಕೊಂಡಿದ್ದಾರೆ. ಅವರ ಪಕ್ಷದ ಕೇಂದ್ರದ ನಾಯಕರೂ ಏನೂ ಮಾಡಲಾಗದ ಸ್ಥಿತಿ ತಲುಪಿದ್ದಾರೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಇದೆ. ಅದು ಹೇಳಿದಂತೆ ನಾವು ನಡೆಯುತ್ತೇವೆ ಎಂದರು.

ಅಶೋಕ್‌ ಹೇಳಿದ್ದೇನು?: ಮುಂದಿನ ನ.15 ಅಥವಾ 16ಕ್ಕೆ ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಆಗಲಿದೆ. ಸಿದ್ದರಾಮಯ್ಯ ಅವರು ಗಂಟು ಮೂಟೆ ಕಟ್ಟಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಬೆಂಗಳೂರಿನಲ್ಲಿ ಹೇಳಿದ್ದರು.

ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ನವೆಂಬರ್‌ ವೇಳೆಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಲಾಗುತ್ತದೆ. ಡಿ.ಕೆ.ಶಿವಕುಮಾರ್‌ ಅವರು ಕುರ್ಚಿ ಒದ್ದಾದ್ರೂ ಅಧಿಕಾರ ಕಿತ್ತುಕೊಳ್ಳೋದಾಗಿ ಈಗಾಗಲೇ ಹೇಳಿದ್ದಾರೆ. ಆ ವೇಳೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಖುರ್ಚಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯುತ್ತದೆ. ಇದು ಪಕ್ಕಾ ನ್ಯೂಸ್ ಎಂದಿದ್ದರು.

ಇದು ನಿಮಗೆ ಹೇಗೆ ಗೊತ್ತು ಎಂಬ ಪ್ರಶ್ನೆಗೆ, ನಾನೇನು ಜ್ಯೋತಿಷಿ ಅಲ್ಲ. ಆದರೆ ನನಗೆ ಕಾಂಗ್ರೆಸ್‌ನಲ್ಲಿ ಸ್ನೇಹಿತರು ಇದ್ದಾರೆ. ಅಲ್ಲದೆ, ನಾನು ಪ್ರತಿಪಕ್ಷ ನಾಯಕ ಅಂದರೆ ಶ್ಯಾಡೋ ಸಿಎಂ. ಕಾಂಗ್ರೆಸ್‌ನಲ್ಲಿ ಈಗಾಗಲೇ ಒಪ್ಪಂದ ಆಗಿದೆ. ಹೀಗಾಗಿ ಈ ವಿಚಾರ ತಿಳಿದಿದೆ ಎಂದು ಹೇಳಿದ್ದರು.

PREV

Recommended Stories

ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವೀಪಿ ಚುನಾವಣೆ ಅಡ್ಡ ಮತದಾನ : ಇಂಡಿಯಾ ಕೂಟದಲ್ಲಿ ಒಡಕು