ಕಾಂಗ್ರೆಸ್‌ನ ನಾಯಕತ್ವ ಪ್ರಹಸನ ದೆಹಲಿಗೆ ರವಾನೆ

KannadaprabhaNewsNetwork |  
Published : Nov 25, 2025, 04:00 AM ISTUpdated : Nov 25, 2025, 04:56 AM IST
Siddaramaiah DK Shivakumar

ಸಾರಾಂಶ

ಇತ್ತೀಚೆಗೆ ಸಿಎಂ ಬದಲಾವಣೆ ವಿಚಾರವಾಗಿ ದಿಲ್ಲಿಗೆ ದೌಡಾಯಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಹೈಕಮಾಂಡ್‌ನ ಕೆಲವು ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದರ ನಡುವೆ ಮತ್ತೆ ಈ ವಿಚಾರ ದಿಲ್ಲಿಗೆ ಸ್ಥಳಾಂತರ ಆಗುವ ಲಕ್ಷಣಗಳಿವೆ. 

  ಬೆಂಗಳೂರು :  ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಪ್ರಹಸನ ಇನ್ನು ಇಲ್ಲಿಂದ (ಬೆಂಗಳೂರಿನಿಂದ) ದಿಲ್ಲಿಗೆ ರವಾನೆಯಾಗಲಿದೆ.

ಕಳೆದ ನಾಲ್ಕು ದಿನಗಳ ಹಿಂದೆ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರೊಂದಿಗೆ ಚರ್ಚೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಈ ವಿಚಾರದ ಬಗ್ಗೆ ವಿದೇಶದಿಂದ ಹಿಂತಿರುಗಿರುವ ವರಿಷ್ಠ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.

ಈ ಸಭೆಯ ಫಲಿತಾಂಶ ಆಧರಿಸಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಈ ವಾರದೊಳಗೆ ದೆಹಲಿಗೆ ಬುಲಾವ್‌ ನೀಡಿ, ಉಭಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸೂಕ್ತ ನಿರ್ದೇಶನವನ್ನು ನೀಡಬಹುದು ಎನ್ನುತ್ತವೆ ಮೂಲಗಳು.

ಬೆಂಗಳೂರಿನಲ್ಲಿ 4 ದಿನ ತಂಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಮಸ್ಯೆಯ ತೀವ್ರತೆ ಬಗ್ಗೆ ಬಹಿರಂಗ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೈಕಮಾಂಡೇ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಅನ್ನು ಬಾಧಿಸುತ್ತಿರುವ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯದಿದ್ದರೆ ಪಕ್ಷ ಹಾಗೂ ಸರ್ಕಾರದ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮ ಕುರಿತು ಖರ್ಗೆ ಅವರು ವರಿಷ್ಠ ರಾಹುಲ್‌ ಗಾಂಧಿ ಅವರಿಗೆ ಮನನ ಮಾಡಿಕೊಡುವ ಸಾಧ್ಯತೆಯಿದೆ.

ಖರ್ಗೆ ಏನು ಹೇಳಬಹುದು?:

ಅಧಿಕಾರ ಹಸ್ತಾಂತರದ ಬಗ್ಗೆ ನಡೆದಿತ್ತು ಎನ್ನಲಾದ ‘ಒಪ್ಪಂದ’ ಪಾಲನೆ ಮಾಡದಿದ್ದರೆ ಹೈಕಮಾಂಡ್‌ಗೆ ಯಾವ ರೀತಿಯ ಕಳಂಕ ತಗುಲಬಹುದು ಮತ್ತು ಈ ಒಪ್ಪಂದವನ್ನು ಒತ್ತಾಯ ಪೂರ್ವಕವಾಗಿ ಜಾರಿಗೆ ತರಲು ಮುಂದಾದರೆ ಅದು ನೇರವಾಗಿ ಸರ್ಕಾರದ ಮೇಲೆ ಹೇಗೆ ಅಡ್ಡ ಪರಿಣಾಮ ಬೀರಬಹುದು ಎಂಬ ಗಂಭೀರತೆಯನ್ನು ಖರ್ಗೆ ಅವರು ರಾಹುಲ್‌ ಗಮನಕ್ಕೆ ತರಬಹುದು ಎನ್ನಲಾಗುತ್ತಿದೆ.

ತಾಳ್ಮೆಯಿಂದಿರಿ ಎಂಬ ಹೈಕಮಾಂಡ್‌ ಸೂಚನೆಗೆ ಸಮಾಧಾನಗೊಳ್ಳದ ಡಿ.ಕೆ. ಶಿವಕುಮಾರ್‌

ಅಲ್ಲದೆ, ತಾಳ್ಮೆಯಿಂದಿರಿ ಎಂಬ ಹೈಕಮಾಂಡ್‌ ಸೂಚನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮಾಧಾನಗೊಳ್ಳದೇ ಇರುವರಿಂದ ಮುಂದೇನು ಮಾಡಬೇಕು? ಉಭಯ ಬಣಗಳು ಒಪ್ಪುವಂತಹ ಫಾರ್ಮುಲಾ ಏನಾಗಬಹುದು ಎಂಬ ಬಗ್ಗೆ ಕೂಡ ಉಭಯ ನಾಯಕರು ಚರ್ಚಿಸಬಹುದು ಎಂದೂ ಹೇಳಲಾಗುತ್ತಿದೆ.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಅವಕಾಶ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏನು ಹೇಳಬೇಕು ಎಂಬುದು ಚರ್ಚೆಯಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ, ರಾಜ್ಯ ಕಾಂಗ್ರೆಸ್‌ನ ಸಕಲರ ಚಿತ್ತ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿರುವ ಈ ಸಭೆಯ ಮೇಲೆ ಕೇಂದ್ರೀಕೃತವಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸರ್ಕಾರದ ಒಳ್ಳೆ ಯೋಜನೆ ಪರವಾಗಿ ಫಲಾನುಭವಿಗಳು ನಿಲ್ಲಬೇಕು: ಸಿಎಂ ಸಿದ್ದರಾಮಯ್ಯ
ಮುಂಬೈ ಮೇಯರ್‌ ಹುದ್ದೆ ಅವಧಿ ಹಂಚಿಕೆಗೆ ಸೇನೆ ಸದಸ್ಯರ ಪಟ್ಟು