ವಕ್ಫ್‌ ವಿವಾದ: ಜಮೀರ್‌ ವಿರುದ್ಧ ವರಿಷ್ಠರಿಗೆ ಕೈ ಶಾಸಕರಿಂದ ದೂರು

KannadaprabhaNewsNetwork | Published : Nov 6, 2024 12:33 AM

ಸಾರಾಂಶ

ರಾಜ್ಯದಲ್ಲಿ ತಲೆದೋರಿರುವ ವಕ್ಫ್‌ ಭೂ ವಿವಾದ ಸಂಬಂಧ ಸ್ವಪಕ್ಷೀಯರಿಂದಲೇ ಅಸಮಾಧಾನಕ್ಕೆ ಗುರಿಯಾಗಿರುವ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಇದೀಗ ಕಾಂಗ್ರೆಸ್‌ನ ಕೆಲ ಶಾಸಕರು ಹೈಕಮಾಂಡ್‌ಗೂ ಪತ್ರದ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ತಲೆದೋರಿರುವ ವಕ್ಫ್‌ ಭೂ ವಿವಾದ ಸಂಬಂಧ ಸ್ವಪಕ್ಷೀಯರಿಂದಲೇ ಅಸಮಾಧಾನಕ್ಕೆ ಗುರಿಯಾಗಿರುವ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಇದೀಗ ಕಾಂಗ್ರೆಸ್‌ನ ಕೆಲ ಶಾಸಕರು ಹೈಕಮಾಂಡ್‌ಗೂ ಪತ್ರದ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರಿನಲ್ಲಿ ಆಗಾಗ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರಕ್ಕೆ ಒಳಪಡಿಸುವಂತಹ ನಡವಳಿಕೆ ತೋರುತ್ತಿರುವ ಜಮೀರ್‌ಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವಕ್ಫ್‌ ಆಸ್ತಿ ನೋಟಿಸ್‌ ವಿಷಯ ರಾಜ್ಯದಲ್ಲಿ ರಾಜಕೀಯವಾಗಿ ಭಾರೀ ಸದ್ದು ಮಾಡಲು, ವಿವಿಧ ಜಿಲ್ಲೆಗಳಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗಲು ಮತ್ತು ಪ್ರತಿಭಟನೆಗೆ ಕಾರಣವಾಗಲು ಸಚಿವ ಜಮೀರ್‌ ಕೈಗೊಂಡ ವಕ್ಫ್‌ ಅದಾಲತ್‌ ಕಾರಣ. ಜೊತೆಗೆ ಉಪಚುನಾವಣೆ ಸಮಯದಲ್ಲಿ ಬಿಜೆಪಿಯವರು ವಕ್ಫ್‌ ವಿವಾದವನ್ನು ಕಾಂಗ್ರೆಸ್‌ ವಿರುದ್ಧ ಜನಾಭಿಪ್ರಾಯ ಮೂಡಿಸುವ ಅಸ್ತ್ರವಾಗಿಸಿಕೊಂಡು ಧರಣಿ ನಡೆಸುತ್ತಿದ್ದಾರೆ.

ಜಮೀರ್‌ ನಡೆಯಿಂದ ಪಕ್ಷ ಹಾಗೂ ಸರ್ಕಾರ ಎರಡಕ್ಕೂ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಮಧ್ಯಪ್ರವೇಶ ಮಾಡಿ ಹೆಚ್ಚು ಮಾತನಾಡದಂತೆ ಸೂಚನೆ ನೀಡಬೇಕು ಎಂದು ಹಲವು ಶಾಸಕರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ವಿಜಯಪುರ, ಬಾಗಲಕೋಟೆ, ಕಲಬುರಗಿಯಲ್ಲಿ ರೈತರಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಶಾಸಕರು ವಿರೋಧ ಎದುರಿಸುವಂತಾಗಿದೆ. ಇದು ಶಾಸಕರು ದೂರು ನೀಡಲು ಕಾರಣವಾಗಿದೆ. ಇದು ಉಪಚುನಾವಣೆಯಲ್ಲೂ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹೈಕಮಾಂಡ್‌ ನಾಯಕರಿಗೂ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಮೊದಲು ಸಚಿವ ಕೆ.ಎನ್‌.ರಾಜಣ್ಣ, ಶಾಸಕ ಮಹೇಶ್‌ ಟೆಂಗಿನಕಾಯಿ ಸೇರಿದಂತೆ ಇನ್ನು ಕೆಲ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿಯೇ ಜಮೀರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ವಕ್ಫ್ ಆಸ್ತಿ ಕಬಳಿಕೆ ಹಾಗೂ ಭೂ ವಿವಾದ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆಯಿಂದ ಅದಾಲತ್ ನಡೆಸಲಾಗುತ್ತಿದೆ. ವಕ್ಫ್ ಅದಾಲತ್ ಬಳಿಕ ಜಮೀರ್ ಸೂಚನೆಯಂತೆ ನೋಟಿಸ್‌ ಕೊಡಲಾಗಿದೆ ಎಂಬ ಆರೋಪ ಇದೆ. ಆದರೆ, ಜಮೀರ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ನಾನು ನೋಟಿಸ್ ಕೊಡಲು ಅಧಿಕಾರಿಗಳಿಗೆ ಹೇಳಿದ್ದೆ ಎಂದು ಹೇಳಿಕೆ ನೀಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿತ್ತು. ಇದೀಗ ಅಹೋರಾತ್ರಿ ಧರಣಿ ನಡೆಸುತ್ತಿರುವುದು ಸರ್ಕಾರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

Share this article