ಯಲಹಂಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಾರಾಮಯ್ಯ ರೋಡ್ ಶೋ

KannadaprabhaNewsNetwork |  
Published : Apr 20, 2024, 01:05 AM ISTUpdated : Apr 20, 2024, 05:32 AM IST
Raksha Ramaiah

ಸಾರಾಂಶ

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್‌ಶೋ ನಡೆಸಿದರು. ಈ ವೇಳೆ ಅವರು ದಿ.ನಟ ಪುನೀತ್‌ರಾಜ್‌ಕುಮಾರ್‌ ಅವರನ್ನು ಸ್ಮರಿಸಿದರು.

 ಯಲಹಂಕ :  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದರು.

ಮಾಜಿ ಶಾಸಕರಾದ ಪ್ರಸನ್ನ ಕುಮಾರ್, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕೇಶವ ರಾಜಣ್ಣ, ಗೋಪಾಲ್ ಕೃಷ್ಣ ಹಾಗೂ ಪಕ್ಷದ ಕಾರ್ಯಕರ್ತರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಲ್ಲಿ ಭಾಗಿಯಾದರು. ಎಲ್ಲೆಡೆ ಜಯಘೋಷ ಮೊಳಗಿತು. ಪುಷ್ಪಾರ್ಚನೆ ಮೂಲಕ ಭರ್ಜರಿ ಸ್ವಾಗತ ದೊರೆಯಿತು. ಪ್ರಚಾರದುದ್ದಕ್ಕೂ ಮಹಿಳೆಯರ ಹಿಂಡು ರಕ್ಷಾ ರಾಮಯ್ಯ ಅವರ ಜೊತೆಗೂಡಿತು.

ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ವಿವಿಧ ರಸ್ತೆಗಳಲ್ಲಿ ಜನರ ಅಭೂತಪೂರ್ವ ಬೆಂಬಲದೊಂದಿಗೆ ಪ್ರಚಾರ ನಡೆಸಿದರು. ನಂತರ ಕೆಂಪೇಗೌಡರ ಪ್ರತಿಮೆ ಮತ್ತು ಡಾ। ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ವಾರ್ಡ್ ನಂಬರ್ 2ರಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಆರಂಭಿಸಿದರು. ನಂತರ ರೋಡ್ ಶೋ ಮೂಲಕ ಸಾಮಾಕ್ಷಮ್ಮ ರಸ್ತೆ, ಬಡಾವಣೆ ರಸ್ತೆ, ಮಸೀದಿ ರಸ್ತೆ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ, ಡೌನ್ ಬಜಾರ್ ರಸ್ತೆ, ಓಎಂಎಸ್ ರಸ್ತೆ, ಹೊಸಬೀದಿ ಬಸ್ ನಿಲ್ದಾಣ, ಕೆಂಪೇಗೌಡ ಪ್ರತಿಮೆ, ನಂತರ ವಾರ್ಡ್ ನಂಬರ್ 4ರಲ್ಲಿ ಚಿಕ್ಕಬೊಮ್ಮಸಂದ್ರ ಕ್ರಾಸ್‌ನಿಂದ ಅಟ್ಟೂರು ಮುಖ್ಯರಸ್ತೆವರೆಗೆ ವಾರ್ಡ್ ನಂಬರ್ 3ರಲ್ಲಿ ಶನಿ ಮಹಾತ್ಮಾ ದೇವಸ್ಥಾನದಿಂದ ಅಟ್ಟೂರು ಗ್ರಾಮದವರೆಗೆ ಪ್ರಚಾರ ನಡೆಸಿದರು.

ಅಪಾರ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿದ ರಕ್ಷಾ ರಾಮಯ್ಯ, ಪುನಿತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡರು. ಶಾಲಾ ದಿನಗಳಲ್ಲಿ ಪುನಿತ್ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಯುವ ಜನಾಂಗಕ್ಕೆ ಪುನಿತ್ ರಾಜ್ ಕುಮಾರ್ ಸ್ಫೂರ್ತಿಯಾಗಿದ್ದರು ಎಂದರು.

ಹಸಿವು ಮುಕ್ತ ಕರ್ನಾಟಕ ಕಾಂಗ್ರೆಸ್ ಗುರಿಯಾಗಿದ್ದು, ಬಡತನ ನಿರ್ಮೂಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಆದ್ಯತೆ ನೀಡುತ್ತಿದೆ. ನಮ್ಮ ಗುರಿ ಸಾಧನೆಗೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಡವರ ಪರವಾಗಿದ್ದು, ಜನ ಸಾಮಾನ್ಯರ ಹಿತ ರಕ್ಷಣೆಗೆ ಬದ್ಧವಾಗಿದೆ. ಕಾಂಗ್ರೆಸ್ ಪ್ರಣಾಳಿಕೆ ಇದಕ್ಕೆ ಸ್ವಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಿದೆ. ಕನ್ನಡ ನಾಡಿನ ಮಾತೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ತಮ್ಮನ್ನು ಆಶೀರ್ವದಿಸಿ ಬೆಂಬಲಿಸಬೇಕು ಎಂದು ರಕ್ಷಾ ರಾಮಯ್ಯ ಮನವಿ ಮಾಡಿದರು.ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸಿದೆ. ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಉದ್ಯೋಗ ಸೃಜನೆಯಲ್ಲಿ ಶೇ 5ರಷ್ಟು ಸಾಧನೆ ಮಾಡಿಲ್ಲ.

-ರಕ್ಷಾ ರಾಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ. ಚಿಕ್ಕಬಳ್ಳಾಪುರ ಕ್ಷೇತ್ರ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ