ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

Published : Oct 01, 2026, 07:30 AM IST
Congress flag

ಸಾರಾಂಶ

ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದು, ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರಕಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ವಿಧ್ಯುಕ್ತ ಚಾಲನೆ ನೀಡಿದರು.

ಶಿಕಾರಿಪುರ : ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್ ಪಕ್ಷವು ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದು, ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಅಧಿಕೃತ ಚಾಲನೆ ದೊರಕಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಸೇವಾದಳದ ಬಾವುಟವನ್ನು ಹಾರಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ವಿಧ್ಯುಕ್ತ ಚಾಲನೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿಯೇ ಟಕ್ಕರ್ ನೀಡಲು ಕಾಂಗ್ರೆಸ್ ನಾಯಕರು ಈ ಬೃಹತ್ ಪಾದಯಾತ್ರೆ ನಡೆಸಿದರು. ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿ ಶಿಕಾರಿಪುರದಿಂದಲೇ ಈ ಭಾರತ್ ಜೋಡೋ 2.0 ಯಾತ್ರೆಯನ್ನು ಆರಂಭಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಈ ಪಾದಯಾತ್ರೆಯು ಕಿಟ್ಟದಹಳ್ಳಿಯಿಂದ ಆರಂಭವಾಗಿ ಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವೊಡ್ಲು ಮಾರ್ಗವಾಗಿ ಒಟ್ಟು ೧೦ ಕಿಲೋಮೀಟರ್ ಸಾಗಿತು. ಬೃಹತ್ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವರಾದ ಮಧುಬಂಗಾರಪ್ಪ, ಕೆ.ಎಸ್.ಬಸವಂತಪ್ಪ ಹಾಗೂ ಡಾ। ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಶಾಸಕ ಬೇಳೂರು ಗೋಪಾಲಕೃಷ್ಣ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಎಂಎಲ್‌ಸಿ ಬಲ್ಕೀಷ್ ಬಾನು ಸೇರಿದಂತೆ ವಿವಿಧ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿ ಆಗಿರುವ ಹಿನ್ನೆಲೆಯಲ್ಲಿ ತಡವಾಗಿ ಪಾದಯಾತ್ರೆಯಲ್ಲಿ ಭಾಗಿಯಾದರು.

ಗಮನ ಸೆಳೆದ ಟಗರಿನ ಗಾಡಿ: 

ಭಾರತ್ ಜೋಡೋ 2.0 ಪಾದಯಾತ್ರೆಯಲ್ಲಿ ಟಗರಿನ ಗಾಡಿ ಗಮನ ಸೆಳೆಯಿತು. ಕಾಂಗ್ರೆಸ್ ಕಾರ್ಯಕರ್ತರು ಕಂದು ಹಾಗೂ ಕಪ್ಪು ಬಣ್ಣದ ಎರಡು ಟಗರುಗಳನ್ನು ಪಾದಯಾತ್ರೆಯಲ್ಲಿ ರಸ್ತೆಗಿಳಿಸಿದ್ದರು. ಅಷ್ಟೇ ಅಲ್ಲದೆ, ಅವುಗಳ ತಲೆಯ ಭಾಗಕ್ಕೆ ಗೆಜ್ಜೆ ಕಟ್ಟಿ, ಬೆನ್ನಿನ ಮೇಲೆ ಕಾಂಗ್ರೆಸ್ ಬಾವುಟವನ್ನು ಹೊದಿಸಲಾಗಿತ್ತು. ಟಗರುಗಳ ಗಾತ್ರಕ್ಕೆ ತಕ್ಕಂತೆ ಎತ್ತಿನಗಾಡಿಯ ಮಾದರಿಯಲ್ಲೇ ಗಾಡಿಯನ್ನು ಸಿದ್ಧಪಡಿಸಿ, ಟಗರುಗಳು ಆ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಕೂಗಿದ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆದವು.

ಸಾವಿರಾರು ಜನ ಭಾಗಿ: 

ಭಾರತ್ ಜೋಡೋ 2.0 ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮಿರಿ ಜನರು ಭಾಗಿಯಾಗಿದ್ದರು. 6 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾದ ಜನರಿಗೆ ತಂಪು ಪಾನೀಯ, ಮಜ್ಜಿಗೆ, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣು ಜೊತೆಗೆ ಲಘು ಉಪಾಹಾರ ವಿತರಣೆ ಮಾಡಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಧಾನಸೌಧದ ಮೆಟ್ಟಿಲು ಮೇಲೆ ನವಂಬರ್‌ 9ರಂದು ಉರ್ದು ಹಬ್ಬ: ಖಾದರ್‌
ರಾಜ್ಯದ ಶೇ.75ರಷ್ಟು ಶಾಸಕರು ಕಮಿಷನ್‌ ಕೇಳ್ತಾರೆ : ಆರೋಪ - ಪ್ರತಿ ಕಾಮಗಾರಿ, ಟೆಂಡರ್‌ನಲ್ಲೂ ಹಸ್ತಕ್ಷೇಪ