ಉಪಸಮರಕ್ಕೆ ಕಾಂಗ್ರೆಸ್‌ ರಣತಂತ್ರ ಪ್ರತಿ ಕ್ಷೇತ್ರಕ್ಕೂ 10 ಜನ ಸಚಿವರು, 30 ಶಾಸಕರ ನಿಯೋಜನೆಗೆ ಚಿಂತನೆ

Published : Oct 21, 2024, 08:19 AM IST
Congress flag

ಸಾರಾಂಶ

ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬ ಸಚಿವರು ಒಂದೊಂದು ಹೋಬಳಿ ಜವಾಬ್ದಾರಿ ವಹಿಸಿಕೊಂಡು ಸಂಪೂರ್ಣ ಶ್ರಮ ಹಾಕಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು : ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬ ಸಚಿವರು ಒಂದೊಂದು ಹೋಬಳಿ ಜವಾಬ್ದಾರಿ ವಹಿಸಿಕೊಂಡು ಸಂಪೂರ್ಣ ಶ್ರಮ ಹಾಕಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಲಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಉಪ ಚುನಾವಣೆ, ಜಾತಿಗಣತಿ, ಒಳ ಮೀಸಲಾತಿ ಹಾಗೂ ಪಂಚಮಸಾಲಿ ಮೀಸಲಾತಿ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಸಚಿವರು ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಿ ಪಕ್ಷವನ್ನು ಗೆಲ್ಲಿಸಬೇಕಿದೆ. ಪಕ್ಷ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಗೆಲ್ಲಿಸಬೇಕು. ಬಿಜೆಪಿಯವರ ಸುಳ್ಳುಗಳನ್ನು ಬಯಲು ಮಾಡುವ ಜತೆಗೆ ಪಕ್ಷ ಹಾಗೂ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಮಂದಿ ಶಾಸಕರು ಮತ್ತು 10 ಸಚಿವರ ನಿಯೋಜನೆಗೆ ಚರ್ಚಿಸಿದ್ದು, ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಮಾಜಿ ಶಾಸಕರು, ಪರಿಷತ್‌ ಸದಸ್ಯರು ಸಹ ಚುನಾವಣೆ ಕಣದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಶೀಘ್ರದಲ್ಲೇ ಜವಾಬ್ದಾರಿ ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಎಚ್ಚರ:

ಉಪಚುನಾವಣೆ ಮುಗಿಯುವವರೆಗೂ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಮಾಣ ಇನ್ನೂ ಹೆಚ್ಚಲಿದೆ. ಹೀಗಾಗಿ ಸಿಬಿಐ, ಐಟಿ, ಇಡಿ ದಾಳಿಗಳ ಬಗ್ಗೆ ಎಚ್ಚರ ವಹಿಸಬೇಕು. ಇನ್ನು ಗ್ಯಾರಂಟಿಗಳ ಬಗ್ಗೆ, ಸರ್ಕಾರದ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಜೆಪಿಯವರ ಎಲ್ಲಾ ಕುತಂತ್ರ ಮೆಟ್ಟಿ ನಿಂತು ಮೂರೂ ಕ್ಷೇತ್ರ ಗೆಲ್ಲಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಜಾತಿಗಣತಿ, ಮೀಸಲು ಬಗ್ಗೆ ಅನಗತ್ಯ ಚರ್ಚೆ ಬೇಡ: ಸಿದ್ದು

ಉಪಚುನಾವಣೆ ಮುಗಿಯುವವರೆಗೆ ಜಾತಿ ಜನಗಣತಿ, ಮೀಸಲಾತಿ ಕುರಿತು ಯಾವುದೇ ಸಚಿವರೂ ಅನಗತ್ಯ ಹೇಳಿಕೆ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಜಾತಿ ಸಮೀಕ್ಷೆ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆ ಬಗ್ಗೆ ಸಂಬಂಧಪಟ್ಟ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂವಿಧಾನದ ಅಡಿಯಲ್ಲಿ ಕ್ರಮದ ಭರವಸೆ ನೀಡಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದ್ದು, ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಮ್ಮ ಬೆಂಬಲ ಇರುವುದನ್ನು ಮನದಟ್ಟು ಮಾಡಿಸಿದ್ದೇವೆ. ಆದರೂ ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಅಪಪ್ರಚಾರ ಮಾಡುತ್ತದೆ. ಸುಳ್ಳುಗಳ ಹೊರತಾಗಿ ಬಿಜೆಪಿಗೆ ಬೇರೆ ಬಂಡವಾಳ ಇಲ್ಲ. ಇದಕ್ಕೆ ನೀವು ಬಲಿಯಾಗಬೇಡಿ ಎಂದಿರುವುದಾಗಿ ತಿಳಿದು ಬಂದಿದೆ.

ಸಿದ್ದು ಹೇಳಿದ್ದೇನು?

- ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಿದೆ

- ಸಚಿವರು ತಮಗೆ ವಹಿಸಿದ ಜವಾಬ್ದಾರಿ ನಿರ್ವಹಿಸಿ ಪಕ್ಷವನ್ನು ಗೆಲ್ಲಿಸಬೇಕು

- ಯಾರಿಗೇ ಟಿಕೆಟ್‌ ನೀಡಿದರೂ ಅವರು ಗೆಲ್ಲುವಂತೆ ನೋಡಿಕೊಳ್ಳಬೇಕು

- ಬಿಜೆಪಿಯವರ ಸುಳ್ಳು ಬಯಲು ಮಾಡಿ, ಪಕ್ಷವನ್ನು ಸಮರ್ಥಿಸಿಕೊಳ್ಳಬೇಕು

- ಸಚಿವರ ಜತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು