ಚಿಕ್ಕಬಳ್ಳಾಪುರ : ಕೋಲಾರ ಲೋಕಸಭೆ ಟಿಕೆಟ್‌ಗಾಗಿ ಕಾಂಗ್ರೆಸ್‌ನ ಸಚಿವ, ಶಾಸಕರು, ವಿಧಾನ ಪರಿಷತ್ ಸದಸ್ಯರ ರಾಜೀನಾಮೆ ಕೂಗಿನ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರದಲ್ಲಿಯೂ ರಾಜೀನಾಮೆ ಹೇಳಿಕೆ ದೊಡ್ಡಮಟ್ಟದ ಸದ್ದು ಮಾಡುತ್ತಿದೆ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್‌ಗೆ ಪಟ್ಟುಹಿಡಿದಿದ್ದಾರೆ. ಚಿಕ್ಕಬಳ್ಳಾಪುರ ಟಿಕೆಟ್ ತಮಗೇ ನೀಡಬೇಕು ಎಂದು ಹೈಕಮಾಂಡ್ ಬಳಿ ಪಟ್ಟುಹಿಡಿದುಕೊಂಡಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸದಸ್ಯತ್ವಕ್ಕೇ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಟಿಕೆಟ್‌ಗೆ ಮೂವರ ಪೈಪೋಟಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲೇ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗದಂತಾಗಿದೆ.
ಈಗಾಗಲೇ ಅಭ್ಯರ್ಥಿಗಳ ರೇಸ್‌ನಲ್ಲಿ ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾರಾಮಯ್ಯ ಹೆಸರು ಮುಂಚೂಣಿಯಲ್ಲಿವೆ. ಅದರಲ್ಲಿ ಬಹುತೇಕ ಕೈಟಿಕೆಟ್ ರಕ್ಷಾರಾಮಯ್ಯನಿಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಲೋಕಸಭಾ ಟಿಕೆಟ್ ಗಾಗಿ ಪಟ್ಟು ಹಿಡಿದು ಕುಳಿತು ಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸದಲ್ಲಿ ತಮ್ಮದೇ ಆದ ಇತಿಹಾಸವನ್ನು ಪಡೆದುಕೊಂಡಿರುವ ಮಾಜಿ ಶಾಸಕ ಶಿವಶಂಕರರೆಡ್ಡಿ ಸೋಲಿಲ್ಲದ ಸರದಾರ ಎಂದು ಬಿಂಬಿಸಿಕೊಂಡಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿಯನ್ನು ಕಂಡ ಮಾಜಿ ಶಾಸಕ ಲೋಕಸಭೆ ಚುನಾವಣೆಯಲ್ಲಿ ತನ್ನ ಸಾಮರ್ಥ್ಯವನ್ನು ತೋರಲು ಮುಂದಾಗಿದ್ದಾರೆ.
ನಾನು ಸ್ಥಳೀಯ ವ್ಯಕ್ತಿ: ರೆಡ್ಡಿಈ ಕುರಿತು ಮಾತನಾಡಿರುವ ಎನ್.ಎಚ್. ಶಿವಶಂಕರರೆಡ್ಡಿ, ಮಾಜಿ ಸಂಸದ ವೀರಪ್ಪ ಮೊಯ್ಲಿ ಹಾಗೂ ರಕ್ಷಾ ರಾಮಯ್ಯ ಇಬ್ಬರೂ ಸಹ ಕ್ಷೇತ್ರಕ್ಕೆ ಹೊರಗಿನವರು.
ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಸ್ಥಳೀಯ ವ್ಯಕ್ತಿ. ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಾಗಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ.
ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ಮತ ವಿಕೇಂದ್ರೀಕರಣ ಮಾಡಿ ಸಾಂಪ್ರದಾಯಕವಾಗಿರುವಂತಹ ಅಹಿಂದ ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಸುಲಭವಾಗಿದೆ ಹಾಗಾಗಿ ನನಗೆ ಟಿಕೆಟ್ ಕೊಡಬೇಕೆಂದು ಹೇಳಿದರು.
ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವಿಚಾರವನ್ನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರ ಗಮನಕ್ಕೆ ತಂದಿರುವುದಾಗಿ ಮಾಹಿತಿ ನೀಡಿದರು.
ಶಿವಶಂಕರರೆಡ್ಡಿಗೆ ಸ್ಥಳೀಯರ ಬೆಂಬಲ: ಮತ್ತೊಂದು ಕಡೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸಹ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಅವರಿಗೆ ಲೋಕಸಭಾ ಟಿಕೆಟ್ ನೀಡುವಂತೆ ಕಾಂಗ್ರೆಸ್ ವರಿಷ್ಠರಿಗೆ ಒತ್ತಾಯ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ರಕ್ಷಾರಾಮಯ್ಯ ಹೊರಗಿನವರು. ಹೀಗಿರುವಾಗ ಸ್ಥಳೀಯ ನಾಯಕ ಹಾಗೂ ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಅವರಿಗೆ ಟಿಕೆಟ್ ಕೊಡಬೇಕೆಂದು ಗೌರಿಬಿದನೂರಿನ ಕಾಂಗ್ರೆಸ್ ಮುಖಂಡರಾದ ನಗರಸಭೆ ಸದಸ್ಯ ವಿ. ರಮೇಶ್, ಆರ್.ಕೆ.ಗೋಪಿನಾಥ್, ರಫೀಕ್, ಲಕ್ಷ್ಮಿಕಾಂತ್ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು ಒತ್ತಾಯ ಮಾಡಿದ್ದು ಇದೇ ವಿಚಾರವಾಗಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.