ಸದ್ಯ ಇರುವ ಪರಿಸ್ಥಿತಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದರು.
ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೇವಲ ಮಾತನಾಡುವವರು ಬೇಕೆ? ಅಥವಾ ಕೆಲಸ ಮಾಡುವವರು ಬೇಕೆ? ಎಂಬುದನ್ನು ಮತದಾರರು ನಿರ್ಧರಿಸಬೇಕು. ಸದ್ಯ ಇರುವ ಪರಿಸ್ಥಿತಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ಮಾಡಿ ಚುನಾವಣೆ ಕುರಿತಂತೆ ಚರ್ಚಿಸಿದರು. ನಂತರ ಬೂತ್‌ಮಟ್ಟದ ಕಾರ್ಯಕರ್ತರ ಜತೆ ಸಂವಾದ ನಡೆಸಿ ಮಾತನಾಡಿದ ಸೌಮ್ಯಾ ರೆಡ್ಡಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರು ಹಾಲಿ ಸಂಸದರ ಬಗ್ಗೆ ಸಾಕಷ್ಟು ಬೇಸರಗೊಂಡಿದ್ದಾರೆ. ಕೆಲಸ ಮಾಡುವ ಬದಲು ಕಳೆದ 5 ವರ್ಷಗಳ ಕಾಲ ಕೇವಲ ಮಾತನಾಡುತ್ತಾ ಅವರು ಕಾಲಹರಣ ಮಾಡಿದ್ದಾರೆ. ಹೀಗಾಗಿ ಮತದಾರರು ಮಾತನಾಡುವವರು ಬೇಕೆ? ಅಥವಾ ಕೆಲಸ ಮಾಡುವವರು ಬೇಕೆ? ಎಂಬುದನ್ನು ನಿರ್ಧರಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಕ್ಷೇತ್ರದ ಮತದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಈ ಬಾರಿ ಕಾಂಗ್ರೆಸ್ ಬೆಂಬಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕಾರ್ಯಕರ್ತರು ಕೂಡ ಹುಮ್ಮಸ್ಸಿನಿಂದ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಬೂತ್‌ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು, ಅದರಿಂದ ಜನರಿಗಾಗುತ್ತಿರುವ ಅನುಕೂಲ ಹಾಗೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಎಲ್ಲದರಿಂದ ಜನರು ಕಾಂಗ್ರೆಸ್‌ನತ್ತ ಹೆಚ್ಚಾಗಿ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದರು.
ಹಾಲಿ ಸಂಸದರು ಕೊರೋನಾ ಅವಧಿಯಲ್ಲಿ ಇಲ್ಲದ ಹಗರಣಗಳ ಬಗ್ಗೆ ಮಾತನಾಡುತ್ತಾ, ಜನರಿಗೆ ತೊಂದರೆಯಾಗುವಂತೆ ಮಾಡಿದರು. ಆದರೆ, ನಾನು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೊರೋನಾ ಅವಧಿಯಲ್ಲಿ ಸೋಂಕನ್ನು ಲೆಕ್ಕಿಸದೆ ಜನರಿಗೆ ಆಹಾರ ವಿತರಣೆ ಸೇರಿದಂತೆ ಇನ್ನಿತರ ಜನೋಪಕಾರಿ ಕೆಲಸ ಮಾಡಿದ್ದೆವು. ಅದನ್ನು ಜನರು ಈಗಲೂ ಸ್ಮರಿಸುತ್ತಿದ್ದಾರೆ. ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನನಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಎಲ್. ಶ್ರೀನಿವಾಸ್, ರಘುನಾಥ ನಾಯ್ಡು, ಪವನ್‌ಕುಮಾರ್, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಲವರಿದ್ದರು.
ಬಿಸಿಲಲ್ಲೂ ಮನೆಮನೆಗೆ ಭೇಟಿ
ಬಿರು ಬಿಸಿಲಲ್ಲೂ ಅಬ್ಬರದ ಪ್ರಚಾರ ನಡೆಸಿದ ಸೌಮ್ಯಾ ರೆಡ್ಡಿ ಮುಖಂಡರ ಮನೆಗಳಿಗಷ್ಟೇ ಅಲ್ಲದೆ, ಪದ್ಮನಾಭನಗರದ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಮತದಾರರಲ್ಲಿ ಮತಯಾಚಿಸಿದರು. ಅಲ್ಲದೆ, ಕಾಂಗ್ರೆಸ್‌ನ ಕಾರ್ಯಕ್ರಮಗಳು, ಸಂಸದೆಯಾಗಿ ಆಯ್ಕೆಯಾದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬದಲಾವಣೆ, ಅಭಿವೃದ್ಧಿಗೆ ತಾವು ಹಾಕಿಕೊಂಡಿರುವ ಗುರಿಯನ್ನು ವಿವರಿಸಿದರು. ಜತೆಗೆ ಮತದಾರರ ಸಮಸ್ಯೆಗಳನ್ನೂ ಆಲಿಸಿದರು.