ಮೊಸರಲ್ಲಿ ಕಲ್ಲು ಹುಡುಕುವ ಯತ್ನ : ಬಿ.ವೈ.ವಿಜಯೇಂದ್ರ

Published : Apr 16, 2026, 12:31 PM IST
BY Vijayendra

ಸಾರಾಂಶ

ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕನ ಧ್ವನಿಗೆ ಸಮಾನ ಮೌಲ್ಯವಿರಬೇಕು ಎನ್ನುವುದು ಸಂವಿಧಾನದ ಮೂಲ ಆಶಯ. ಈ ಆಶಯವನ್ನು ವಾಸ್ತವಕ್ಕೆ ತರುವ ಪ್ರಮುಖ ಪ್ರಕ್ರಿಯೆಯೇ ಕ್ಷೇತ್ರ ಮರುವಿಂಗಡಣೆ‌ ಹಾಗೂ ಮಹಿಳಾ ಮೀಸಲು.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು 

ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕನ ಧ್ವನಿಗೆ ಸಮಾನ ಮೌಲ್ಯವಿರಬೇಕು ಎನ್ನುವುದು ಸಂವಿಧಾನದ ಮೂಲ ಆಶಯ. ಈ ಆಶಯವನ್ನು ವಾಸ್ತವಕ್ಕೆ ತರುವ ಪ್ರಮುಖ ಪ್ರಕ್ರಿಯೆಯೇ ಕ್ಷೇತ್ರ ಮರುವಿಂಗಡಣೆ‌ ಹಾಗೂ ಮಹಿಳಾ ಮೀಸಲು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆಯ ಪ್ರತೀಕವಾಗಿ ಅದರ ಜಾರಿಯ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ.

ಇದು ಸಾಕಾರಗೊಂಡರೆ, ನಮ್ಮ ದೇಶದ ರಾಜಕೀಯ ಅಧ್ಯಾಯವು ನಿಸ್ಸಂಶಯವಾಗಿ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ನಾರಿ ಶಕ್ತಿ ವಂದನಾ ಅಧಿನಿಯಮ’ವು ಕೇವಲ ಒಂದು ಮಸೂದೆಯಲ್ಲ; ಅದು ದೇಶದ ಅರ್ಧದಷ್ಟು ಜನಸಂಖ್ಯೆಗೆ ನೀಡಿದ ಐತಿಹಾಸಿಕ ಪ್ರಾತಿನಿಧ್ಯದ ನ್ಯಾಯ.

ಇದು 12ನೇ ಶತಮಾನದ ಅಣ್ಣ ಬಸವಣ್ಣನವರ ಕಾಲದಲ್ಲಿ ಪ್ರತಿಪಾದಿಸಿದ ಲಿಂಗ ಸಮಾನತೆಯನ್ನು ಸಾಕಾರಗೊಳಿಸುತ್ತಿರುವ ಪರಿ. ಆದರೆ, ಈ ಮೀಸಲಾತಿಯು ಕಾಗದದ ಮೇಲಷ್ಟೇ ಉಳಿಯದೆ ಶೀಘ್ರವಾಗಿ ಜಾರಿಯಾಗಲು ಕ್ಷೇತ್ರ ಮರುವಿಂಗಡಣೆ ಎಂಬುದು ಅನಿವಾರ್ಯ. ಈ ನಿಟ್ಟಿನಲ್ಲಿ ಕೇಂದ್ರ ಕಾಳಜಿಯ ಹೆಜ್ಜೆ ಇಡುತ್ತಿದೆ.

ತಿದ್ದುಪಡಿ ಮಸೂದೆ ತರುತ್ತಿರುವುದೇಕೆ?

ಪ್ರಸ್ತುತ ನಿಯಮಗಳ ಪ್ರಕಾರ, 2026ರ ನಂತರ ನಡೆಯುವ ಮೊದಲ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಯಬೇಕಿತ್ತು. ಈಗಿನ ಅಂದಾಜಿನ ಪ್ರಕಾರ, ಈ ಪ್ರಕ್ರಿಯೆ ಪೂರ್ಣಗೊಳ್ಳಲು 2030ರವರೆಗೆ ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಕಾಯುತ್ತಾ ಕುಳಿತರೆ 2029ರ ಲೋಕಸಭಾ ಚುನಾವಣೆಯೂ ಮಹಿಳಾ ಪ್ರಾತಿನಿಧ್ಯವಿಲ್ಲದೆ ಮುಗಿದು ಹೋಗುತ್ತದೆ. ಇದು ಮಹಿಳೆಯರ ಹಕ್ಕಿನ ದಮನವಾದಂತಾಗುತ್ತದೆ ಎಂಬುದು ಮೋದಿಯವರ ದುಗುಡ.

ಈ ವಿಳಂಬವನ್ನು ತಪ್ಪಿಸಲು ಕೇಂದ್ರ ಸರ್ಕಾರವು ಹೊಸ ತಿದ್ದುಪಡಿ ವಿಧೇಯಕದ ಮೂಲಕ ಶೀಘ್ರವೇ ಕ್ಷೇತ್ರ ಮರುವಿಂಗಡಣೆ ನಡೆಸಲು ಮುಂದಾಗಿದೆ. ಮುಂಬರುವ ಜನಗಣತಿಯ ಅಂಕಿ-ಸಂಖ್ಯೆಗಾಗಿ ವರ್ಷಗಳ ಕಾಲ ಕಾಯುವ ಬದಲು, ಲಭ್ಯವಿರುವ ಅಂಕಿ-ಅಂಶಗಳ ಆಧಾರದ ಮೇಲೆ ಈ ಪ್ರಕ್ರಿಯೆ ನಡೆಸುವುದು ಪ್ರಧಾನಿ ಮೋದಿ ಅವರ ದೂರದೃಷ್ಟಿ. ಇದು ಮಹಿಳಾ ಮೀಸಲಾತಿ ಜಾರಿಯನ್ನು ತ್ವರಿತಗೊಳಿಸುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಹೀಗಿದ್ದರೂ ಕಾಂಗ್ರೆಸ್ ಸೇರಿದಂತೆ ಕೆಲ ಪ್ರತಿಪಕ್ಷಗಳು ಮತ್ತೆ ಈ ಬಗ್ಗೆ ಆಕ್ಷೇಪ ಎತ್ತಿರುವುದು ‘ಮೊಸರಲ್ಲಿ ಕಲ್ಲು ಹುಡುಕುವ’ ಕೆಲಸವಲ್ಲದೇ ಬೇರೇನೂ ಅಲ್ಲ, ಸ್ತ್ರೀ ಕುಲಕ್ಕೆ ಸಿಗಲಿರುವ ಮೀಸಲು ಅವಕಾಶ ಮುಂದೂಡಿಸುವ ಹುನ್ನಾರ ಎಂದೇ ಹೇಳಬೇಕಾಗಿದೆ.

 ಕ್ಷೇತ್ರ ಮರುವಿಂಗಡಣೆ ಪ್ರಯೋಜನ ಅನೇಕ 

ಕ್ಷೇತ್ರ ಮರುವಿಂಗಡಣೆಯು ಕೇವಲ ಗಡಿಗಳನ್ನು ಬದಲಿಸುವ ತಾಂತ್ರಿಕ ಪ್ರಕ್ರಿಯೆಯಲ್ಲ; ಇದೊಂದು ಆಡಳಿತಾತ್ಮಕ ಮತ್ತು ಪ್ರಜಾಪ್ರಭುತ್ವದ ಅಂಕಿ-ಅಂಶ ಸುಧಾರಣೆ. ಇದರ ಪ್ರಯೋಜನಗಳು ಬಹಳಷ್ಟು. ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವದಡಿ ಪ್ರತಿಯೊಬ್ಬ ಶಾಸಕ ಅಥವಾ ಸಂಸದರು ಸಮಾನ ಸಂಖ್ಯೆಯ ಮತದಾರರನ್ನು ಪ್ರತಿನಿಧಿಸುವುದನ್ನು ಇದು ಖಚಿತಪಡಿಸುತ್ತದೆ. ಅತಿಯಾದ ಜನಸಂಖ್ಯೆಯಿರುವ ಬೃಹತ್ ಕ್ಷೇತ್ರಗಳನ್ನು ವಿಭಜಿಸುವುದರಿಂದ ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಲು ಸಾಧ್ಯವಾಗುತ್ತದೆ. ಇದೊಂದು ರೀತಿ ಸರಳ ಹಾಗೂ ಸುಲಭ ಆಡಳಿತಾತ್ಮಕ ನೀತಿಗೆ ದೊಡ್ಡ ಅಸ್ತ್ರ. ಸಂವಿಧಾನದ ವಿಧಿ 82 ಮತ್ತು 170ರ ಅನ್ವಯ ರಚನೆಯಾಗುವ ಸ್ವತಂತ್ರ ‘ಕ್ಷೇತ್ರ ಮರುವಿಂಗಡಣಾ ಆಯೋಗ’ವು ರಾಜಕೀಯ ಹಸ್ತಕ್ಷೇಪವಿಲ್ಲದೆ ನ್ಯಾಯಾಂಗದ ಮಾರ್ಗದರ್ಶನದಲ್ಲಿ ಈ ಕೆಲಸ ಮಾಡುತ್ತದೆ. ಇದರ ನಿರ್ಧಾರಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವುದು ಇದರ ಪಾರದರ್ಶಕತೆಗೆ ಸಾಕ್ಷಿ. ಇದೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯವೆ. ಆದರೂ ಆಕ್ಷೇಪವೇಕೆ?

1976ರಲ್ಲಿ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಉತ್ತೇಜಿಸಲು ಕ್ಷೇತ್ರಗಳ ಸಂಖ್ಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮರುವಿಂಗಡಣೆ ಎಂದಾಗ ನಮ್ಮ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ‘ಜನಸಂಖ್ಯೆ ನಿಯಂತ್ರಿಸಿದ ನಮಗೆ ಶಿಕ್ಷೆಯಾಗುತ್ತದೆಯೇ?’ ಎಂಬ ಆತಂಕ ಸೃಷ್ಟಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿರುವುದು ‘ತರ್ಕ ಬದ್ಧ’ಎನಿಸಿಕೊಳ್ಳುವುದಿಲ್ಲ.

ಇದು ಮಹಾಪ್ರಯತ್ನ, ಹೊಸಕಬೇಡಿ

ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಸುಧಾರಣೆಯ ಐತಿಹಾಸಿಕ ಹೆಜ್ಜೆ ಇಡುವಾಗ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಎಲ್ಲರ ಸಲಹೆ, ಸಹಕಾರವನ್ನು ಸ್ವೀಕರಿಸಲು ಮುಕ್ತ ಮನಸ್ಸಿನ ಬಾಗಿಲು ತೆರೆದಿದೆ. ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಪ್ರಧಾನಿಗಳೇ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಆದಾಯಕ್ಕೆ ದಕ್ಷಿಣದ ರಾಜ್ಯಗಳ ಕೊಡುಗೆ ಮತ್ತು ಅವುಗಳ ರಾಜಕೀಯ ಮಹತ್ವವನ್ನು ಪರಾಮರ್ಶಿಸಿಯೇ ಸರ್ಕಾರ ಮುಂದಿನ ಹೆಜ್ಜೆ ಇಡುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೊಂದಿಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಲು ಕೇಂದ್ರ ಮುಂದಾಗಿರುವುದು ಪ್ರಜಾಸತ್ತಾತ್ಮಕ ನಡೆಯಾಗಿದೆ. ಇದಕ್ಕೂ ಮೀರಿದ ಆತಂಕಗಳು ಇದ್ದರೆ ವಿಶೇಷ ಅಧಿವೇಶನಲ್ಲಿ ಚರ್ಚೆ ನಡೆಸಬೇಕು. ಎಲ್ಲದಕ್ಕೂ ಪರಿಹಾರ ಎಂಬುದು ಇದ್ದೇ ಇರುತ್ತೆ. ಅದನ್ನು ಬಿಟ್ಟು ಇಂಥದ್ದೊಂದು ಮಹಾ ಪ್ರಯತ್ನವನ್ನು ಆರಂಭದಲ್ಲಿಯೇ ಹೊಸಕಿಹಾಕಲು ಪ್ರತಿಪಕ್ಷಗಳು ಪ್ರಯತ್ನಿಸಬಾರದು. ಏಕೆಂದರೆ, ಯಾವುದೇ ರಾಜಕೀಯ ಪಕ್ಷಗಳಿಗೆ ರಾಜಕೀಯ ಲಾಭಕ್ಕಿಂತ ಸಾಂವಿಧಾನಿಕ ಜವಾಬ್ದಾರಿ ಮುಖ್ಯ.

ದುರದೃಷ್ಟವಶಾತ್, ವಿರೋಧ ಪಕ್ಷಗಳು ಈ ಮಹತ್ವದ ಸುಧಾರಣೆಯನ್ನು ‘ಮತಗಳಿಕೆಯ ಹುನ್ನಾರ’ ಎಂದು ಬಣ್ಣಿಸುತ್ತಿವೆ. ಭಾರತದಂತಹ ದೇಶದಲ್ಲಿ ವರ್ಷದ 365 ದಿನವೂ ನಿರಂತರವಾಗಿ ಅಲ್ಲಿ ಇಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ (ಇದು ಭಾರತದ ಪ್ರಜಾ ಪ್ರಭುತ್ವದ ಸೌಂದರ್ಯ ಸಂಕೇತಿಸುತ್ತದೆ). ಹಾಗೆಂದು ದೇಶದ ಹಿತದೃಷ್ಟಿಯಿಂದ ಮಾಡಬೇಕಾದ ಸುಧಾರಣೆಗಳನ್ನು ಮುಂದೂಡುವುದು ಸವಿಂಧಾನದ ಆಶಯಕ್ಕೆ ಪೂರಕ ಎನಿಸದು.

ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಎಂಬ ಎರಡು ಕಂಬಗಳ ಮೇಲೆ ಪ್ರಜಾಪ್ರಭುತ್ವದ ದೇಗುಲವನ್ನು ಸದೃಢಗೊಳಿಸುವ ಈ ಕಾರ್ಯಕ್ಕೆ ಎಲ್ಲ ಪಕ್ಷಗಳು ಪಕ್ಷಾತೀತವಾಗಿ ಬೆಂಬಲ ನೀಡಬೇಕಿದೆ.

ಅಸಮಾನತೆ ನಿವಾರಣೆಗೆ ಐತಿಹಾಸಿಕ ಕ್ರಾಂತಿ

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ‘ಶಕ್ತಿ’ಯ ರೂಪವೆಂದು ಪೂಜಿಸಲಾಗುತ್ತದೆ. ಆದರೆ, ದೇಶದ ಭವಿಷ್ಯವನ್ನು ನಿರ್ಧರಿಸುವ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ದಶಕಗಳ ಕಾಲ ಕನಿಷ್ಠ ಮಟ್ಟದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ನಾರಿ ಶಕ್ತಿ ವಂದನಾ ಅಧಿನಿಯಮ’ ಈ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಒಂದು ಐತಿಹಾಸಿಕ ಕ್ರಾಂತಿಯಾಗಿದೆ.

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಶೇ.50 ರಷ್ಟಿದ್ದರೂ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರ ಧ್ವನಿ ಸೀಮಿತವಾಗಿತ್ತು. ಈಗ ಈ ಕಾಯ್ದೆಯ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸಿರುವುದು ಮಹಿಳಾ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದೆ. ಇದು ಕೇವಲ ರಾಜಕೀಯ ಮೀಸಲಾತಿಯಲ್ಲ, ಬದಲಿಗೆ ದೇಶದ ನೀತಿ-ನಿಯಮಗಳ ರೂಪಿಸುವಿಕೆಯಲ್ಲಿ ಮಹಿಳೆಯರ ಸಂವೇದನೆ ಮತ್ತು ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ.

ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ (ಪಂಚಾಯತ್ ರಾಜ್) ಈಗಾಗಲೇ ತಮ್ಮ ಆಡಳಿತಾತ್ಮಕ ಚಾಕಚಕ್ಯತೆಯನ್ನು ಸಾಬೀತುಪಡಿಸಿದ್ದಾರೆ. ಈಗ ರಾಷ್ಟ್ರಮಟ್ಟದಲ್ಲಿ ಅವರಿಗೆ ಸಿಗಲಿರುವ ಈ ಅವಕಾಶವು, ರಾಜಕೀಯ ವ್ಯವಸ್ಥೆಯಲ್ಲಿ ದಶಕಗಳಿಂದ ಇದ್ದ ಪುರುಷ ಪ್ರಧಾನ ಧೋರಣೆಯನ್ನು ಬದಲಿಸುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳು ಹೆಚ್ಚು ಪ್ರಾಯೋಗಿಕವಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ. ಬಹಳ ಪ್ರಮುಖವಾಗಿ ಜೆನ್ ಜಿ ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ರಾಜಕೀಯವನ್ನು ಒಂದು ಗೌರವಾನ್ವಿತ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಈ ಕಾನೂನು ಸ್ಫೂರ್ತಿ ನೀಡುತ್ತದೆ.

ಹಾಗಾಗಿ ನಾರಿ ಶಕ್ತಿ ವಂದನಾ ಅಧಿನಿಯಮವು ಕೇವಲ ರಾಜಕೀಯ ಲಾಭದ ವಿಷಯವಲ್ಲ, ಅದು ಭಾರತದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢಗೊಳಿಸುವ ಸಾಂವಿಧಾನಿಕ ಜವಾಬ್ದಾರಿ. ಮಹಿಳೆಯರಿಗೆ ಅಧಿಕಾರ ನೀಡುವ ಮೂಲಕ ಭಾರತವು ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಲಿದೆ. ಮಾತೃಶಕ್ತಿಯ ಈ ಪರ್ವಕಾಲವನ್ನು ನಾವೆಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಎರಡನೇ ಬಾರಿ ಗರ್ಭವತಿಯಾದ ದೀಪಿಕಾ ಪಡುಕೋಣೆ
ಮಹಿಳಾ ಮೀಸಲಾ? ಈಗಲೇ ತನ್ನಿ ಕಾಂಗ್ರೆಸ್‌ ಬೆಂಬಲಿಸುತ್ತೆ