ನವದೆಹಲಿ: ಗುರುವಾರವಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಆತ್ಮೀಯ ಸಂವಾದ ನಡೆಸಿ, ಗಡ್ಕರಿ ಅವರ ಮನೆಯಿಂದ ತಂದಿದ್ದ ಆಹಾರವನ್ನು ಸವಿದಿದ್ದ ಪ್ರಿಯಾಂಕಾ ಗಾಂಧಿ ಅವರು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.
ಶುಕ್ರವಾರ ಸಂಸತ್ ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಪ್ರಧಾನಿ ಮೋದಿ, ಸ್ಪೀಕರ್ ಓಂ ಬಿರ್ಲಾ ಮತ್ತು ಸಚಿವರು ಕೆಲಕಾಲ ಒಂದೆಡೆ ಕುಳಿತು ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈ ವೇಳೆ ವಯನಾಡು ಸಂಸದೆಯಾದ ಪ್ರಿಯಾಂಕಾ ಅವರು ತಮ್ಮ ರಾಜಕೀಯ ವೈರುಧ್ಯವನ್ನು ಬದಿಗೊತ್ತಿ ಮೋದಿ ಹಾಗೂ ರಾಜನಾಥ ಸಿಂಗ್ ಅವರೊಂದಿಗೆ ಸಂತೋಷದಿಂದ ಮಾತನಾಡಿದರು.
ಮೋದಿ ಅವರಿಗೆ ಪ್ರಿಯಾಂಕಾ, ತಾವು ಮಲಯಾಳಿ ಕಲಿಯುತ್ತಿರುವುದಾಗಿ ಹೇಳಿದರು. ಇನ್ನು ಮೋದಿ ಅವರು ತಮ್ಮ 3 ದೇಶಗಳ ಪ್ರವಾಸದ ಅನುಭವ ಹೇಳಿದರು.
ಇದೇ ವೇಳೆ, ರಾಜನಾಥ್ ಅವರಿಗೆ ಪ್ರಿಯಾಂಕಾ ತಮ್ಮ ವಯನಾಡಿನ ಅನುಭವ ಹೇಳಿದ್ದಲ್ಲದೆ, ಅಲ್ಲಿನ ಗಿಡಮೂಲಿಕೆಗಳನ್ನು ಬಳಸಿದ್ದರಿಂದ ಅಲರ್ಜಿ ಕಮ್ಮಿ ಆಗಿದೆ ಎಂದು ವಿವರಿಸಿದರು.
ಇದೇ ವೇಳೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವರು, ಸಂಸದರಿದ್ದರು.