ನಿಗಮಾಧ್ಯಕ್ಷರು ಚುನಾವಣೇಲಿ ಪಕ್ಷದ್ರೋಹ ಮಾಡಿದರೆ ವಜಾ : ರಣದೀಪ್‌ ಸಿಂಗ್‌ ಸುರ್ಜೇವಾಲ

ಸಾರಾಂಶ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಗುರುವಾರ ನಗರದಲ್ಲಿ ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಹಾಗೂ ನಿಷ್ಠೆಯಿಂದ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಗುರುವಾರ ನಗರದಲ್ಲಿ ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಭೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಹಾಗೂ ನಿಷ್ಠೆಯಿಂದ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಲ್ಲದೆ, ಕೆಲಸ ಮಾಡದೆ ಹೋದರೆ ಚುನಾವಣೆ ಬಳಿಕ ಅವರಿಗೆ ನೀಡಿರುವ ಅಧಿಕಾರ ಹಿಂಪಡೆಯುವ ಎಚ್ಚರಿಕೆ ನೀಡಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 135 ಸ್ಥಾನ ಪಡೆದು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಶಾಸಕರ ಜೊತೆಗೆ ಪಕ್ಷದ ಗೆಲುವಿಗೆ ಶ್ರಮಿಸಿದ 35ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನೂ ಗುರುತಿಸಿ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಲಾಗಿದೆ. ವಿಧಾನಸಭೆ ಚುನಾವಣೆ ರೀತಿ ಲೋಕಸಭಾ ಚುನಾವಣೆಯಲ್ಲೂ ಎಲ್ಲೆಡೆ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಸ್ಥಳೀಯ ಶಾಸಕರು, ಮುಖಂಡರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಒಟ್ಟಾಗಿ ಹಾಗೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಲೋಕಸಭಾ ಚುನಾವಣೆಯಲ್ಲೂ ನಾವು ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗುತ್ತದೆ. ಒಂದು ವೇಳೆ ಯಾರಾದರೂ ಪಕ್ಷದ್ರೋಹ ಮಾಡುವುದು, ಚುನಾವಣೆಯಲ್ಲಿ ಕೆಲಸ ಮಾಡದೆ ದೂರ ಉಳಿಯುವುದು, ಬೇರೆ ಪಕ್ಷದವರಿಗೆ ಬೆಂಬಲಿಸುವಂತಹ ಕೆಲಸಗಳಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಮುಲಾಜಿಲ್ಲದೆ ಅಂತಹವರನ್ನು ಚುನಾವಣೆ ಮುಗಿದ ಕೂಡಲೇ ಅಧಿಕಾರದಿಂದ ಕೆಳಗಿಳಿಸಲಾಗುವುದು ಎಂದು ಖಡಕ್‌ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಧಾಕೃಷ್ಣ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿ 

ರಾಜ್ಯದಲ್ಲಿ ಮೇ 7ಕ್ಕೆ ನಡೆಯುವ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಗುಲ್ಬರ್ಗಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಮೊದಲ ದಿನವೇ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಗುರುವಾರ ನಗರದಲ್ಲಿ ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಈ.ಸುಧೀಂದ್ರ ಇದ್ದರು.

Share this article