ಕಾಂಗ್ರೆಸ್ ಲೂಟಿ ಲೈಸೆನ್ಸ್‌ ರದ್ದು ಮಾಡಿದ್ದೇನೆ : ಪಿಎಂ ಮೋದಿ

KannadaprabhaNewsNetwork | Updated : Apr 09 2024, 03:44 AM IST

ಸಾರಾಂಶ

‘ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅನುದಾನದ 1 ರುಪಾಯಿಯಲ್ಲಿ 15 ಪೈಸೆ ಮಾತ್ರ ಜನರಿಗೆ ಹೋಗುತ್ತಿತ್ತು. ಲೂಟಿಯ ಲೈಸೆನ್ಸ್‌ ತನ್ನ ಬಳಿ ಇದೆ ಎಂದು ಆ ಪಕ್ಷ ಭಾವಿಸಿತ್ತು.

ರಾಯ್‌ಪುರ: ‘ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅನುದಾನದ 1 ರುಪಾಯಿಯಲ್ಲಿ 15 ಪೈಸೆ ಮಾತ್ರ ಜನರಿಗೆ ಹೋಗುತ್ತಿತ್ತು. ಲೂಟಿಯ ಲೈಸೆನ್ಸ್‌ ತನ್ನ ಬಳಿ ಇದೆ ಎಂದು ಆ ಪಕ್ಷ ಭಾವಿಸಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಕಾಂಗ್ರೆಸ್ ಲೂಟಿ ಲೈಸೆನ್ಸ್‌ ರದ್ದು ಮಾಡಿದ್ದೇನೆ. ಸರ್ಕಾರದ ಎಲ್ಲ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಹೋಗುತ್ತಿದ್ದು, ಭ್ರಷ್ಟಾಚಾರಕ್ಕೆ ಬ್ರೇಕ್‌ ಹಾಕಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ತಿಸಗಢದಲ್ಲಿ ಬಿಜೆಪಿಯ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಅವರು, ‘ಸುದೀರ್ಘವಾಗಿ ದೇಶವನ್ನಾಳಿದ ಕಾಂಗ್ರೆಸ್‌ , ಬಡವರನ್ನು ನಿರ್ಲಕ್ಷಿಸಿತ್ತು.2014ಕ್ಕೂ ಮುನ್ನ ದೇಶದಲ್ಲಿ ಹಲವು ಲಕ್ಷ ಕೋಟಿಗಳ ಅಕ್ರಮ ನಡೆದಿತ್ತು. ಕಾಂಗ್ರೆಸ್‌ ಬಡವರನ್ನು ಕಡೆಗಣಿಸಿತ್ತು’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಚಾರವೇ ದೇಶದ ಅಸ್ಮಿತೆಯಾಗಿತ್ತು . ದೇಶ ಕೊಳ್ಳೆ ಹೊಡೆಯುವುದಕ್ಕೆ ಲೈಸೆನ್ಸ್ ಇದೆ ಎಂದು ಆ ಪಕ್ಷ ಬಯಸಿತ್ತು. ಬಡವರ ಅಗತ್ಯಗಳನ್ನು ಕಡೆಗಣಿಸಿರುವ ಕಾಂಗ್ರೆಸ್, ಜನರ ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆದ್ರೆ ನಾನು ಆ ಪಕ್ಷದ ಲೂಟಿಯ ಲೈಸೆನ್ಸ್ ಕೊನೆಗೊಳಿಸಿದ್ದೇನೆ’ ಎಂದು ಹರಿಹಾಯ್ದಿದ್ದಾರೆ.‘ಕಾಂಗ್ರೆಸ್ ನಾಯಕ , ದಿ. ರಾಜೀವ್‌ ಗಾಂಧಿಯೇ ಭ್ರಷ್ಟಚಾರದ ಬಗ್ಗೆ ಮಾತನಾಡಿದ್ದರು. ಪ್ರತಿ 1 ರುಪಾಯಿ ಹಣದಲ್ಲಿ 15 ಪೈಸೆ ಮಾತ್ರ ಜನರ ಅಭಿವೃದ್ಧಿ ಕೆಲಸಗಳಿಗೆ ಹೋಗುತ್ತದೆ ಎಂದಿದ್ದರು. ಹಾಗಿದ್ದರೆ ಇನ್ನುಳಿದ 85 ಪೈಸೆ ಹಣ ಎಲ್ಲಿಗೆ ಹೋಗುತ್ತಿತ್ತು?’ ಎಂದು ಪ್ರಶ್ನಿಸಿದರು.

ತಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಭ್ರಷ್ಟಚಾರ ಮುಕ್ತವಾಗಿದೆ ಎಂದಿರುವ ಮೋದಿ, ‘ಕೋವಿಡ್ ಸಮಯದಲ್ಲಿಯೂ ಬಿಜೆಪಿ ಜನರ ಪರವಾಗಿ ನಿಂತಿತ್ತು. ಉಚಿತ ಔಷಧಿ, ಲಸಿಕೆ ನೀಡಿ ನೆರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 25 ಕೋಟಿ ಜನ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಕಳೆದ 10 ವರ್ಷಗಳಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ 34 ಲಕ್ಷ ಕೋಟಿ ವರ್ಗವಾಗಿದೆ. ಒಂದು ವೇಳೆ ದೇಶದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿದ್ದರೆ, ಆ 15 ಪೈಸೆಯ ಸಂಸ್ಕೃತಿಯೇ ಮುಂದುವರೆಯತ್ತಿತ್ತು. 34 ಲಕ್ಷ ಕೋಟಿಗಳಲ್ಲಿ 28 ಲಕ್ಷ ಕೋಟಿ ಹಣ ದುರುಪಯೋಗ ಆಗುತ್ತಿತ್ತು’ ಎಂದರು.

Share this article