ಕೈಗೆ ಹೆಚ್ಚುವರಿ, ದೋಸ್ತಿಗೆ ಹೆಚ್ಚು ವರಿ ! ಜೆಡಿಎಸ್- ಬಿಜೆಪಿಯ 11 ಶಾಸಕರಿಂದ ಅಡ್ಡಮತದಾನ

Published : Jun 19, 2026, 06:59 AM IST
DK Shivakumar

ಸಾರಾಂಶ

ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, ಅಡ್ಡ ಮತದಾನದ ಪರಿಣಾಮ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ ತೀವ್ರ ಮುಖಭಂಗ ಅನುಭವಿಸಿವೆ.

 ಬೆಂಗಳೂರು :  ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, ಅಡ್ಡ ಮತದಾನದ ಪರಿಣಾಮ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ ತೀವ್ರ ಮುಖಭಂಗ ಅನುಭವಿಸಿವೆ.

ಈ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 5, ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ನ ಏಕೈಕ ಅಭ್ಯರ್ಥಿ ಹೀನಾಯವಾಗಿ ಸೋತಿದ್ದಾರೆ. ಚಲಾವಣೆಯಾದ 222 ಮತಗಳ ಪೈಕಿ 1 ಮತ ಅಸಿಂಧುವಾಗಿದೆ. ಉಳಿದ 221 ಮತಗಳು ಸಿಂಧುವಾಗಿವೆ. ಗಮನಾರ್ಹ ಸಂಗತಿ ಎಂದರೆ, ವಿರೋಧ ಪಕ್ಷಗಳ 11 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಈ ಅಡ್ಡ ಮತಗಳ ಲಾಭ ಪಡೆದು ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್‌ 4, ಬಿಜೆಪಿ 2 ಸ್ಥಾನಗಳಲ್ಲಿ ಗೆಲ್ಲುವುದು ಖಚಿತವಾಗಿತ್ತು. ಈ ನಡುವೆ ಕಾಂಗ್ರೆಸ್‌ ಕಣಕ್ಕಿಳಿಸಿದ 5ನೇ ಅಭ್ಯರ್ಥಿಗೆ ಪೈಪೋಟಿ ನೀಡಲು ಜೆಡಿಎಸ್‌ ಅಭ್ಯರ್ಥಿ ಹಾಕಿದ ಪರಿಣಾಮ ಚುನಾವಣಾ ಕಣ ರೋಚಕತೆ ಪಡೆದುಕೊಂಡಿತ್ತು. ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಹೋರಾಟದಲ್ಲಿ ಗೆಲ್ಲುವ ಏಳನೇ ಅಭ್ಯರ್ಥಿ ಯಾರು ಎಂಬುದು ಕತೂಹಲಕ್ಕೆ ಕಾರಣವಾಗಿತ್ತು. ಅಚ್ಚರಿಯೆಂದರೆ, ಒಟ್ಟು 8 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯೇ ಅತಿ ಹೆಚ್ಚು ಮತ ಪಡೆದು ಗೆದ್ದು ಬೀಗಿದ್ದಾರೆ.

ಪ್ರತಿ ಅಭ್ಯರ್ಥಿ ಗೆಲುವಿಗೆ 28 ಮತಗಳ ಅಗತ್ಯವಿತ್ತು. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್‌.ಶಿವಣ್ಣ ತಲಾ 30 ಮತ, ಪಿ.ವಿ.ಮೋಹನ್‌ 29 ಮತ್ತು ವಿನಯ್‌ ಕಾರ್ತಿಕ್‌ ಪ್ರಕಾಶ್‌ 32 ಮತ, ಬಿಜೆಪಿ ಅಭ್ಯರ್ಥಿಗಳಾದ ಆರ್‌.ರಘು 29 ಹಾಗೂ ಲಿಂಗರಾಜ ಪಾಟೀಲ್‌ 27 ಮತ ಪಡೆದು ಗೆಲುವಿನ ನಗೆ ಬೀರಿದರು. ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು 14 ಮತ ಪಡೆದು ಹೀನಾಯವಾಗಿ ಸೋತರು.

ಕೊನೇ ಕ್ಷಣದಲ್ಲಿ 30 ಮತ:

ವಿಧಾನಸಭೆಯಲ್ಲಿ 62 ಶಾಸಕರ ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ತನ್ನ ಇಬ್ಬರು ಅಭ್ಯರ್ಥಿಗಳು ಗೆಲ್ಲಲು 56 ಮತಗಳು ಸಾಕಿತ್ತು. ಆದರೆ, ಅಡ್ಡಮತದಾನದ ಭೀತಿಯಲ್ಲಿ ಕೊನೆಯ ಕ್ಷಣದಲ್ಲಿ ತನ್ನ ತಂತ್ರಗಾರಿಕೆ ಬದಲಿಸಿಕೊಂಡು ತಲಾ 30 ಮತ ಹಾಕಿಸಲು ನಿರ್ಧರಿಸಿತ್ತು. ಅದರಂತೆ ತಲಾ 30 ಶಾಸಕರ ಎರಡು ಗುಂಪು ಮಾಡಿ ಮತ ಚಲಾವಣೆಗೆ ಸೂಚಿಸಿತ್ತು. ಆದರೆ, ಇದರಲ್ಲಿ ಲಿಂಗರಾಜ ಪಾಟೀಲ್‌ಗೆ 27 ಶಾಸಕರು ಮಾತ್ರ ಮತ ಚಲಾವಣೆಯಾಗಿದ್ದು, ಮೂವರು ಅಡ್ಡಮತದಾನ ಮಾಡಿದ್ದಾರೆ. ರಘು ಕೌಟಿಲ್ಯಗೆ ಹಾಕಲಾಗಿರುವ 30 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ.

ಬಿಜೆಪಿಯಿಂದ ಜೆಡಿಎಸ್‌ಗೆ 4 ಮತಗಳ ಬೆಂಬಲ:

ಬಿಜೆಪಿ ನಾಯಕರು ಮೈತ್ರಿ ಪಕ್ಷದ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜುಗೆ ನಾಲ್ಕು ಮತ ಹಾಕಲು ಸೂಚಿಸಿದ್ದರು. ಇದರಲ್ಲಿ ಬಿಜೆಪಿ ಶಾಸಕರಾದ ಚಂದ್ರು ಲಮಾಣಿ, ದುರ್ಯೋಧನ ಐಹೊಳೆ, ಕೃಷ್ಣ ನಾಯಕ್‌ ಮತ್ತು ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಅವರಿಗೆ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಲು ಸೂಚಿಸಿದ್ದರು. ಗೌಪ್ಯ ಮತದಾನವಾಗಿರುವುದರಿಂದ ಈ ನಾಲ್ವರ ಮತಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದವರು ಯಾರು ಎಂಬ ಪ್ರಶ್ನೆ ಮೂಡಿದೆ.

ಜೆಡಿಎಸ್‌ ಅಭ್ಯರ್ಥಿಗೆ 18 ಮತ ಪೈಕಿ ಸಿಕ್ಕಿದ್ದು 14!:

ಈ ಚುನಾವಣೆಯಲ್ಲಿ ಗೆಲ್ಲುವಷ್ಟು ಮತಗಳು ಇಲ್ಲದಿದ್ದರೂ ಅಭ್ಯರ್ಥಿ ಕಣಕ್ಕಿಳಿಸಿದ್ದ ಜೆಡಿಎಸ್‌ ತೀವ್ರ ಮುಖಭಂಗ ಅನುಭವಿಸಿದೆ. ವಿಧಾನಸಭೆಯಲ್ಲಿ ಜೆಡಿಎಸ್‌ 18 ಶಾಸಕರ ಸಂಖ್ಯಾಬಲವಿದೆ. ಆದರೆ, ಜೆಡಿಎಸ್‌ ಅಭ್ಯರ್ಥಿಗೆ 18 ಮತ ಬದಲು ಕೇವಲ 14 ಮತಗಳು ಮಾತ್ರ ಬಿದ್ದಿವೆ. ಉಳಿದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅಂದರೆ, ಕಾಂಗ್ರೆಸ್‌ ಅಭ್ಯರ್ಥಿಗೆ ಈ ನಾಲ್ಕು ಮತಗಳು ಹೋಗಿವೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಒಟ್ಟು 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಹೀಗಾಗಿ ಪಕ್ಷ ದ್ರೋಹ ಬಗೆದವರು ಯಾರು ಎಂಬುದನ್ನು ಇದೀಗ ಎರಡೂ ಪಕ್ಷಗಳ ನಾಯಕರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ.

ಎಲಿಮಿನೇಷನ್‌ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು!

ಲೆಕ್ಕಾಚಾರಗಳ ಪ್ರಕಾರ ಓರ್ವ ಅಭ್ಯರ್ಥಿ ಗೆಲುವಿಗೆ 27.63 ಮತಗಳು ಬೇಕಿದ್ದವು. ಆದರೆ, ಬಿಜೆಪಿ ಅಭ್ಯರ್ಥಿ ಲಿಂಗರಾಜ ಪಾಟೀಲ್‌ ಅವರು 27 ಮತಗಳನ್ನಷ್ಟೇ ಪಡೆದು ಗೆದ್ದಿದ್ದಾರೆ. ಹೇಗೆಂದರೆ, ಅವರಿಗೆ ಮತ ಹಾಕಲು ಬಿಜೆಪಿ ನಾಯಕರು ಸೂಚಿಸಿದ್ದ 30 ಶಾಸಕರ ಪೈಕಿ 27 ಮಂದಿ ಮಾತ್ರ ಮತ ಹಾಕಿದ್ದಾರೆ. ಉಳಿದ ಮೂವರು ಅಡ್ಡ ಮತದಾನ ಮಾಡಿದ್ದಾರೆ. 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಜೆಡಿಎಸ್‌ ಅಭ್ಯರ್ಥಿ ಕೇವಲ 14 ಮತ ಪಡೆದು ಸ್ಪರ್ಧೆಯಿಂದ ಹೊರಬಿದ್ದರು. ಹೀಗಾಗಿ ಎಲಿಮಿನೇಷನ್‌ ಸುತ್ತಿನಲ್ಲಿ 7ನೇ ಅಭ್ಯರ್ಥಿಯಾಗಿ ಲಿಂಗರಾಜ ಪಾಟೀಲ್‌ ಗೆಲುವು ಸಾಧಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳು:

ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್‌.ಶಿವಣ್ಣ, ವಿನಯ್‌ ಕಾರ್ತಿಕ್ ಪ್ರಕಾಶ್‌. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್‌ ಪಾಟೀಲ್‌.

ಯಾವ ಪಕ್ಷಕ್ಕೆ ಎಷ್ಟು ಮತ?

135 ಶಾಸಕರ ಸಂಖ್ಯಾಬಲದ ಕಾಂಗ್ರೆಸ್‌ಗೆ 151 ಮತ

62 ಶಾಸಕರ ಸಂಖ್ಯಾಬಲದ ಬಿಜೆಪಿಗೆ 56 ಮತ

18 ಶಾಸಕರ ಸಂಖ್ಯಾಬಲದ ಜೆಡಿಎಸ್‌ಗೆ 14 ಮತ

ಪಕ್ಷ ಸದಸ್ಯ ಬಲ

ಕಾಂಗ್ರೆಸ್‌ 135

ಬಿಜೆಪಿ 62

ಬಿಜೆಪಿಯಿಂದ ಉಚ್ಚಾಟಿತರು 3

ಜೆಡಿಎಸ್‌ 18

ಕೆಆರ್‌ಪಿಪಿ 1

ಎಸ್‌ಕೆಪಿ 1

ಸ್ವತಂತ್ರ 2

ಖಾಲಿ 2

ಒಟ್ಟು 224

ಯಾರಿಗೆ ಎಷ್ಟು ಮತ?

ವಿನಯ್‌ ಕಾರ್ತಿಕ್‌ ಪ್ರಕಾಶ್‌ 32

ಬಿ.ಕೆ.ಹರಿಪ್ರಸಾದ್ 30

ತಿಪ್ಪಣ್ಣಪ್ಪ ಕಮಕನೂರ 30

ಬಿ.ಎಸ್‌.ಶಿವಣ್ಣ 30

ಪಿ.ವಿ.ಮೋಹನ್‌ 29

ಕೌಟಿಲ್ಯ ರಘು 29

ಲಿಂಗರಾಜ ಪಾಟೀಲ್‌ 27

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯ ಬಿಜೆಪಿಗೆ ಯಾವುದೇ ಕ್ಷಣ ನೂತನ ಅಧ್ಯಕ್ಷ ನೇಮಕ : ರಾಧಾ ಮೋಹನ್‌ ದಾಸ್‌
ವಿಶ್ವದಲ್ಲೇ ಭಾರತ ವಿಶ್ವಾಸಾರ್ಹ ದೇಶ : ಮೋದಿ