;Resize=(412,232))
ವಿಧಾನ ಪರಿಷತ್ : ಪ್ರತಿಪಕ್ಷಗಳ ಬಿಗಿಪಟ್ಟು ಹಾಗೂ ಸಭಾಪತಿಗಳ ಆದೇಶಕ್ಕೆ ಮಣಿದ ಕಾಂಗ್ರೆಸ್ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೋಮವಾರ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. ಆದರೆ ನಸೀರ್ ಅವರನ್ನು ಉದ್ದೇಶಿಸಿ ‘ಪಾಕಿಸ್ತಾನದ ನಾಲಗೆ’ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದ್ದು ವಿವಾದಕ್ಕೀಡಾಯಿತು. ಈ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಬೇಕೆಂದು ಕಾಂಗ್ರೆಸ್ ಸದಸ್ಯರ ನಿರಂತರ ಆಗ್ರಹ ಹಾಗೂ ಸಭಾಪತಿಗಳ ಮನವಿಗೆ ಸಿ.ಟಿ.ರವಿ ಅವರು ಒಪ್ಪದ ಕಾರಣ ಇಡೀ ದಿನದ ಕಲಾಪ ಬಲಿಯಾಯಿತು.
ಸೋಮವಾರದ ಕಲಾಪದ ವೇಳೆ ಪ್ರಧಾನಿ ಮೋದಿ ದೇಶಕ್ಕೆ ದ್ರೋಹ ಮಾಡಿದ್ದಾರೆಂದು ನಸೀರ್ ಅಹಮದ್ ಹೇಳಿಕೆ ಮಂಗಳವಾರ ಸಹ ಪ್ರತಿಧ್ವನಿಸಿತು. ಮಂಗಳವಾರ ಮಧ್ಯಾಹ್ನ ವರೆಗೆ ನಸೀರ್ ಅಹಮದ್ ಅವರ ಕ್ಷಮೆಗೆ ಪ್ರತಿಪಕ್ಷಗಳು ಆಗ್ರಹಿಸಿದರೆ, ಮಧ್ಯಾಹ್ನದ ನಂತರ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಬೇಕೆಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ನಸೀರ್ ಅಹಮದ್ ವಿಷಾದ ವ್ಯಕ್ತಪಡಿಸಿದ ಮೇಲೆ ಸಿ.ಟಿ.ರವಿ ಅವರಿಗೆ ವಿಷಾದ ವ್ಯಕ್ತಪಡಿಸುವಂತೆ ಸಿ.ಟಿ.ರವಿ ಅವರಿಗೆ ಸಭಾಪತಿ ಹಾಗೂ ಉಪಸಭಾಪತಿಗಳು ಮನವಿ ಮಾಡಿದರು.
ಆದರೆ ವಿಷಾದಿಸಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಸಿ.ಟಿ.ರವಿ ಹೇಳಿದರು. ಹೀಗಾಗಿ ದಿನದ ಕೊನೆಯಲ್ಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಉಭಯ ಕಡೆಯಿಂದಲೂ ಸದನ ನಡೆಸಲು ಸಹಕಾರ ಸಿಕ್ಕಿಲ್ಲ ಎಂದು ಹೇಳಿ ಸದನವನ್ನು ಬುಧವಾರಕ್ಕೆ ಮುಂದೂಡಿದರು.
ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪೀಠದ ಮುಂದೆ ಬಂದು ನಸೀರ್ ಅಹಮದ್ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿದರು. ಈ ವೇಳೆ ಬಿಜೆಪಿಯ ಸಿ.ಟಿ.ರವಿ ಅವರು ದೇಶದ ಪ್ರಧಾನಿಗಳ ಬಗ್ಗೆ ಭಾರತದ ನಾಲಗೆ ಈ ರೀತಿ ಮಾತನಾಡುವುದಿಲ್ಲ. ಆ ರೀತಿ ಮಾತನಾಡಿದ್ದರೆ ಅದು ಪಾಕಿಸ್ತಾನದ ನಾಲಗೆ ಇರಬೇಕು. ಅಂಥ ನಾಲಗೆಯನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ ಎಂದು ಹೇಳಿದರು. ಈ ಹಂತದಲ್ಲಿ ಬಿಜೆಪಿ ಸದಸ್ಯರು ಪ್ರಧಾನಿ ಬಗ್ಗೆ ಅವಾಚ್ಯ ಶಬ್ದ ಬಳಸಿದ ನಸೀರ್ ಅಹಮದ್ ಅವರನ್ನು ಸದನದಿಂದ ಹೊರಗೆ ಹಾಕಿ ಎಂದು ಘೋಷಣೆ ಕೂಗತೊಡಗಿದರು.
ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು. ನಸೀರ್ ಅಹಮದ್ ಅವರು ಕೋಪದಲ್ಲಿ ಮಾತನಾಡಿರಬಹುದು. ಮಾತಿಗೆ ಮಾತು ಬೇಡ, ಸದನ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ.ರವಿ. ಪ್ರಧಾನಿ ಬಗ್ಗೆ ಏನು ಬೇಕಾದರೂ ಮಾತನಾಡಬಹುದೇ? ಅವರದ್ದು ಬಚ್ಚಲು ಬಾಯಿಗಿಂತ ಹೆಚ್ಚು ಎಂದು ಹೇಳಿದರು.
ಆಗ ಸಭಾಪತಿ ಹೊರಟ್ಟಿ ಅವರು ನಸೀರ್ ಅಹಮದ್ ಅವರು ಈ ಹಿಂದೆ ಬೇರೆ ಬೇರೆ ಸಂದರ್ಭದಲ್ಲಿ ಪ್ರಧಾನಿಗಳನ್ನು ಅಪಮಾನಿಸುವ ರೀತಿಯಲ್ಲಿ ಆಡಿರುವ ಮಾತುಗಳ ದಾಖಲೆಯನ್ನು ಉಲ್ಲೇಖಿಸಿ, ದೇಶದ ಪ್ರಧಾನಿ ಯಾರೇ ಆಗಿರಲಿ ಅವರಿಗೆ ಎಲ್ಲರೂ ಗೌರವ ಕೊಡಬೇಕು, ನಿನ್ನೆ ನೀವು ಮಾತನಾಡಿರುವುದು ಸರಿಯಾದ ಕ್ರಮ ಅಲ್ಲ. ನಿಯಮಗಳ ಉಲ್ಲಂಘನೆಯಾಗಿದೆ. ಹಾಗಾಗಿ ಹೇಳಿ ಕ್ಷಮೆ ಕೇಳಬೇಕು. ಇದರಿಂದ ಸದನಕ್ಕೂ ಗೌರವ ಬರುತ್ತದೆ, ಇಲ್ಲದಿದ್ದರೆ ತಾವು ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆದೇಶಿಸಿದರು.
ಆಗ ನಸೀರ್ ಅಹಮದ್ ಅವರು ಮಾತನಾಡಲು ಮುಂದಾದಾಗ ಬಿಜೆಪಿ ಸದಸ್ಯರು ವಿಶ್ಲೇಷಣೆ ಬೇಡ. ಕ್ಷಮೆ ಕೇಳುತ್ತಿರೋ ಇಲ್ಲವೋ ಎಂದಷ್ಟೇ ಹೇಳಿ ಎಂದು ಆಗ್ರಹಿಸಿದರು. ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಸಹ ಪೀಠ ಕ್ಷಮೆ ಕೇಳಬೇಕೆಂದು ಆದೇಶಿಸಿದ ಮೇಲೆ ಅದರಂತೆ ನಸೀರ್ ಅಹಮದ್ ಅವರು ಕ್ಷಮೆ ಕೇಳಬೇಕು ಎಂದರು.
ಇದಕ್ಕೆ ನಸೀರ್ ಅಹಮದ್ ಅವರು ಸಿ.ಟಿ. ರವಿ ಅವರು ‘ಪಾಕಿಸ್ತಾನದ ನಾಲಗೆ’ ಎಂದು ಹೇಳಿರುವುದಕ್ಕೆ ಕ್ಷಮೆ ಕೇಳಬೇಕು ಎಂದಾಗ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇದು ಉದ್ಧಟತನದ ಮಾತು. ಮುಖ್ಯಮಂತ್ರಿಗಳ ಮುಂದೆಯೇ ನಿನ್ನೆ ದಿನ ಪ್ರಧಾನಿ ಅವರ ಬಗ್ಗೆ ಮಾತನಾಡಿದ್ದಾರೆ. ರಾಜಕೀಯ ಕಾರ್ಯದರ್ಶಿ ಆಗುವ ಯೋಗ್ಯತೆ ಇದೆಯೇ, ತಕ್ಷಣ ಮುಖ್ಯಮಂತ್ರಿಗಳು ಹುದ್ದೆಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.
ಆಗ ಸಭಾಪತಿಗಳು ಸಭಾನಾಯಕರು. ಪ್ರತಿಪಕ್ಷದ ನಾಯಕರು ಮುಂತಾದವರ ಜೊತೆ ಐದು ನಿಮಿಷ ಮಾತನಾಡುತ್ತೇನೆ ಎಂದು ಸದನವನ್ನು ಮುಂದೂಡಿದರು.
ಪುನಃ ಸದನ ಆರಂಭವಾಗುತ್ತಿದ್ದಂತೆ ಸಲೀಂ ಅಹಮದ್ ಅವರು ಸಿ.ಟಿ.ರವಿ ಅವರು ನಸೀರ್ ಅಹಮದ್ ಅವರಿಗೆ ‘ಪಾಕಿಸ್ತಾನದ ನಾಲಗೆ’ ಎಂದು ಕರೆದಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸಿ.ಟಿ.ರವಿ ಅವರು ತಾವು ಯಾವ ವ್ಯಕ್ತಿಯ ಹೆಸರು ಉಲ್ಲೇಖಿಸಿ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರು.
ಸಿ.ಟಿ.ರವಿ ಕ್ಷಮೆಗೆ ಕಾಂಗ್ರೆಸ್ ಪಟ್ಟು:
ಆದರೆ ಕಾಂಗ್ರೆಸ್ ಸದಸ್ಯರು ಮಾತ್ರ ಸಿ.ಟಿ.ರವಿ ಕ್ಷಮೆಗೆ ಬಿಗಿ ಪಟ್ಟುಹಿಡಿದರು. ಈ ಬಗ್ಗೆ ಸಾಕಷ್ಟು ವಾದ-ಪ್ರತಿವಾದಗಳು ನಡೆದರೂ ಇತ್ಯರ್ಥವಾಗಲಿಲ್ಲ. ಹೀಗಾಗಿ ಉಪಸಭಾಪತಿಗಳು ಸದನವನ್ನು ಬುಧವಾರಕ್ಕೆ ಮುಂದೂಡಿದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಸದಸ್ಯರು ಮೊದಲು ನಸೀರ್ ಅಹಮದ್ ಅವರು ಕ್ಷಮೆ ಕೇಳಲಿ, ನಂತರ ಸಿ.ಟಿ.ರವಿ ಹೇಳಿಕೆ ಬಗ್ಗೆ ಆಮೇಲೆ ನಿರ್ಧರಿಸುವಂತೆ ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಸಭಾಪತಿಗಳು ಒಪ್ಪಿದರು.
ನಂತರ ನಸೀರ್ ಅಹಮದ್ ಅವರು ತಮ್ಮ ಮಾತನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
ವಿಷಾದಿಸಲು ಒಪ್ಪದ ಸಿ.ಟಿ.ರವಿ:
ಸಭಾಪತಿ ಹೊರಟ್ಟಿ ವಿಷಾದ ವ್ಯಕ್ತಪಡಿಸುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ. ಹಾಗಾಗಿ ಸಿ.ಟಿ.ರವಿ ಅವರಿಗೆ ವಿಷಾದಿಸುವಂತೆ ಮನವಿ ಮಾಡಿದರು. ಆದರೆ ಸಿ.ಟಿ. ರವಿ ಅವರು ತಾವು ಯಾರನ್ನೂ ಉದ್ದೇಶಿಸಿ ಹೇಳಿಲ್ಲ. ಹಾಗಾಗಿ ವಿಷಾದಿಸಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದರು.
ಕ್ಷಮೆಗೆ ಪಟ್ಟು:
ಈ ನಡುವೆ ಜೆಡಿಎಸ್ ಸದಸ್ಯ ಬೋಜೇಗೌಡ ಅವರು, ನಸೀರ್ ಅಹಮದ್ ಅವರು ಕೋಪದ ಬರದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿರಬಹುದು ಎಂದು ವಿಷಾದಿಸಿದ್ದಾರೆಯೇ ಹೊರತು ಕ್ಷಮೆ ಯಾಚಿಸಿಲ್ಲ. ಹಾಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲಿಸಿದರು.
ಆದರೆ ಸಭಾಪತಿ ಹೊರಟ್ಟಿ ಅವರು ವಿಷಾದ ಹಾಗೂ ಕ್ಷಮೆ ಒಂದೇ ಅರ್ಥ ಕೊಡುತ್ತದೆ ಎಂದು ಹೇಳಿದರು. ಆದರೆ ಬಿಜೆಪಿಯ ಪಿ.ಎಚ್.ಪೂಜಾರ್ ಅವರು ವಿಷಾದ ಎಂದರೆ ದುಃಖ, ನೋವು, ಖೇದ ಎಂಬ ಅರ್ಥ ಇದೆ. ಹಾಗಾಗಿ ಕ್ಷಮೆ ಕೇಳಬೇಕೆಂದರು.
ಕೊನೆಗೆ ನಸೀರ್ ಅಹಮದ್ ಅವರ ವಿಷಾದಕ್ಕೆ ಸಮಾಧಾನಗೊಂಡ ಬಿಜೆಪಿ ಸದಸ್ಯರು ಬೇರೆ ಕಲಾಪ ಕೈಗೆತ್ತಿಕೊಳ್ಳುವಂತೆ ಹೇಳಿ ಆಸನಕ್ಕೆ ಬಂದು ಕುಳಿತುಕೊಂಡರು.
ಪಾಕ್ ನಾಲಗೆ ಒರಬೇಕು
ದೇಶದ ಪ್ರಧಾನಿಗಳ ಬಗ್ಗೆ ಭಾರತದ ನಾಲಗೆ ಈ ರೀತಿ ಮಾತನಾಡುವುದಿಲ್ಲ. ಆ ರೀತಿ ಮಾತನಾಡಿದ್ದರೆ ಅದು ಪಾಕಿಸ್ತಾನದ ನಾಲಗೆ ಇರಬೇಕು. ಅಂಥ ನಾಲಗೆಯನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ
- ಸಿ.ಟಿ. ರವಿ, ಬಿಜೆಪಿ ಶಾಸಕ
ರವಿ ವಿರುದ್ಧ ಕ್ರಮವಾಗಲಿ
ಸಿ.ಟಿ.ರವಿ ಅವರು ನಸೀರ್ ಅಹಮದ್ ಅವರಿಗೆ ‘ಪಾಕಿಸ್ತಾನದ ನಾಲಗೆ’ ಎಂದು ಕರೆದಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಸಲೀಂ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ