ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ನೆಲದಲ್ಲಿಯೇ ಗೃಹ ಸಚಿವ ಪರಮೇಶ್ವರ ಅವರು ‘ದಲಿತ ಸಿಎಂ’ ಕೂಗಿಗೆ ಹೋರಾಟದ ಕರೆ ಕೊಟ್ಟಿದ್ದಾರೆ. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪರಮೇಶ್ವರ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಕಲಾಮಂದಿರದಲ್ಲಿ ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗದಿಂದ ಸೋಮವಾರ ಅಭಿನಂದನಾ ಸಮಾರಂಭ ‘ಪರಮೋತ್ಸವ’ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ, ಬಳಿಕ ಮಾತನಾಡಿದ ಪರಮೇಶ್ವರ್, ಅಭಿಮಾನಿಗಳಿಂದ ವ್ಯಕ್ತವಾದ ಮುಖ್ಯಮಂತ್ರಿ ಕೂಗು, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರ ದಲಿತ ಮುಖ್ಯಮಂತ್ರಿ ಆಗ್ರಹಕ್ಕೆ ಸೂಚ್ಯವಾಗಿ ಪ್ರತಿಕ್ರಿಯಿಸಿದರು.
ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದವರು ಹೋರಾಟಕ್ಕೆ ಸಜ್ಜಾಗಬೇಕು. ಹೋರಾಟ ಮಾಡದೆ ಇದ್ದರೆ ನನಗೆ ಅಲ್ಲ, ಅಂಬೇಡ್ಕರ್ಗೆ ಅವಮಾನ ಮಾಡಿದಂತಾಗುತ್ತದೆ ಎಂದರು. ಆ ಮೂಲಕ ಸಿದ್ದರಾಮಯ್ಯ ತವರಲ್ಲಿ ದಲಿತ ಸಿಎಂ ಕೂಗಿಗೆ ಹೋರಾಟಕ್ಕೆ ಕರೆ ನೀಡಿ, ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದರು.
ಒಂದು ಸಮುದಾಯ ನಿಮ್ಮ ಜೊತೆ ನಿಂತಿದೆ. ಅವರಿಗೆ ಮೋಸ ಮಾಡಿದರೆ ಬುದ್ದಿ ಕಲಿಸುತ್ತಾರೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಈ ಮಾತು ನಿಜ. ದಲಿತ ಸಮುದಾಯಕ್ಕೆ ಅವಕಾಶ ಕೊಡಿ ಎಂದು ಕೇಳುವ ಸ್ಥಿತಿ ಯಾಕೆ ಬಂತು?. ಹೃದಯ ಶ್ರೀಮಂತಿಕೆ ನಿಮಗೆ ಬೇಡ್ವಾ?. ಸಮುದಾಯಕ್ಕೆ ಅನ್ಯಾಯವಾದಾಗ ಪಾಠ ಕಲಿಸಲು ಜನರಿಗೆ ಮತದಾನ ಎಂಬ ಅಸ್ತ್ರ ಇದೆ. ನೆನಪಿಟ್ಟು ಕೊಳ್ಳಿ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಪರಮೋತ್ಸವ ನಡೆಸಲು ಆಯೋಜಕರಿಗೆ ಅನೇಕ ವಿಘ್ನಗಳು ಬಂದವು. ಆದರೂ, ಪರಮೋತ್ಸವ ಆಯೋಜಿಸಿದ್ದಾರೆ. ಹೊರದೇಶದಲ್ಲಿ ಈ ದೇಶದಲ್ಲಿನ ಅಸ್ಪೃಶ್ಯತೆ ಬಗ್ಗೆ ಮಾತಾಡುತ್ತಾರೆ. ಪ್ರಪಂಚದ ಯಾವ ದೇಶದಲ್ಲೂ ಅಸ್ಪೃಶ್ಯತೆ ಇಲ್ಲ. ಆದರೆ, ನಮ್ಮ ದೇಶದಲ್ಲಿದೆ ಎಂದರು.
ದಲಿತರಿಗೆ ಸಮಾಧಾನದ, ತೃಪ್ತಿಕರವಾದ ಬದುಕು ಭಾರತದಲ್ಲಿ ಸಿಕ್ಕಿಲ್ಲ. ಸಮಾನತೆ ಇಲ್ಲದ ಕಾರಣ ನಮಗೆ ಇಲ್ಲಿ ಮೀಸಲಾತಿ ಬೇಕೆ ಬೇಕು. ಸಮಾನತೆ, ಸ್ವಾಭಿಮಾನದ ಬದುಕಿಗೆ ದಲಿತರು ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಅವರು ಪ್ರಶ್ನಿಸಿದರು.
ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ
ಮೈಸೂರು : ರಾಜ್ಯದ ಶೋಷಿತ ವರ್ಗಕ್ಕೆ, ದಲಿತರಿಗೆ ಅಧಿಕಾರ ಕೊಡಬೇಕೆಂಬುದು ನಾಡಿನ ಜನರ ಒತ್ತಾಯ. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗುತ್ತದೆ. ರಾಜ್ಯದಲ್ಲಿ ದಲಿತ ಸಮುದಾಯದವರು ಸಿಎಂ ಆಗಲಿ ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ‘ಪರಮೋತ್ಸವ’ ಸಮಾರಂಭದಲ್ಲಿ ಮಾತನಾಡಿ, ಒಂದು ಸಮುದಾಯದವರು 9 ಬಾರಿ, ಮತ್ತೊಂದು ಸಮುದಾಯದವರು 7 ಬಾರಿ, ಇನ್ನೊಂದು ಸಮುದಾಯದವರು 2 ಬಾರಿ ಸಿಎಂ ಆಗಿದ್ದಾರೆ. ಸಣ್ಣಪುಟ್ಟ ಸಮುದಾಯದ ಜನರಿಗೂ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ.
ಜನಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿರುವ ಶೋಷಿತರು, ದಲಿತರು ಮಾತ್ರ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ. ಇದು ಸಂವಿಧಾನ ಅಪಮೌಲ್ಯ ಮಾಡುವ ಕ್ರಮ ಎಂದು ಅವರು ಹೇಳಿದರು.ಪರಮೇಶ್ವರ ಅವರು ಸಂವೇದನಶೀಲ ರಾಜಕಾರಣಿ. ಯಾರೊಂದಿಗೂ ಸಂಘರ್ಷ ಇಲ್ಲ. ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಪರಮೇಶ್ವರ ಅವರನ್ನು ಎಡಪಂಥೀಯ, ಬಲಪಂಥೀಯ ಎಂದೆಲ್ಲಾ ಟೀಕಿಸುತ್ತಾರೆ. ಆದರೆ, ಅವರು ನೇರಪಂಥೀಯ ಎಂದು ಹೇಳಿದರು.
ಪರಮೇಶ್ವರಗೆ ಎತ್ತರದ ಸ್ಥಾನ ಸಿಗಬೇಕು: ತನ್ವೀರ್ ಸೇಠ್ಕನ್ನಡಪ್ರಭ ವಾರ್ತೆ ಮೈಸೂರುಡಾ.ಜಿ.ಪರಮೇಶ್ವರ ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರಿಗೆ ಎತ್ತರದ ಸ್ಥಾನ ಸಿಗಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಆಶಿಸಿದರು.
ನಗರದ ಕಲಾಮಂದಿರದಲ್ಲಿ ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗವು ಸೋಮವಾರ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ‘ಪರಮ ಪಯಣ’ ಅಭಿನಂದನಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಪರಮೇಶ್ವರ್ ಎದ್ದು ನಿಂತು ಯಾವ ಸ್ಥಾನ ಮುಟ್ಟಬೇಕು ಎಂದು ಹೊರಟರೆ ನಿಮ್ಮ ಜೊತೆ ಬಹಳಷ್ಟು ಜನ ಇದ್ದಾರೆ. ಎತ್ತರದ ಸ್ಥಾನದಲ್ಲಿ ಅವರ ನೋಡುವ ಆಸೆ ಹಾಗೆಯೇ ಉಳಿದಿದೆ. ರಾಜಕೀಯದಲ್ಲಿ ಮೇಲೆ ಬರಲು ಬಹಳಷ್ಟು ಜನ ಹಲವರನ್ನು ತುಳಿದಿದ್ದಾರೆ. ಆದರೆ ಪರಮೇಶ್ವರ್ ಎಂದಿಗೂ ಆ ಕೆಲಸ ಮಾಡಲಿಲ್ಲ. ಪರಮೇಶ್ವರ ಅವರಿಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ. ಎಂದಿಗೂ ಅವರು ಸೋಲಬೇಕಿಲ್ಲ. ಅವರೊಂದಿಗೆ ಹೆಜ್ಜೆಗೆ, ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.