ಕಾಂಗ್ರೆಸ್ ಬೆಂಬಲಿಸಲು ದಲಿತ ‘ಬಲಗೈ’ ನಿರ್ಣಯ

KannadaprabhaNewsNetwork | Updated : Apr 20 2024, 05:50 AM IST

ಸಾರಾಂಶ

ಎಸ್‌ಡಿಎ ಅಭ್ಯರ್ಥಿ ಮಲ್ಲೇಶಬಾಬುರನ್ನು ಗೆಲ್ಲಿಸಿ ಮೋದಿ ಕೈಬಲಪಡಿಸಿ ಎಂದು ಬಿಜೆಪಿ- ಜೆಡಿೆಸ್‌ ನಾಯಕರು ಹೇಳುತ್ತಿದ್ದಾರೆ, ಹತ್ತು ವರ್ಷಗಳಲ್ಲಿ ಮೋದಿ ದೇಶಕ್ಕಾಗಿ ಏನು ಮಾಡಿದ್ದಾರಂತ ಅವರ ಕೈಬಲಪಡಿಸಬೇಕು

 ಬಂಗಾರಪೇಟೆ :  ಏ.26ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ದಲಿತರ ಬಲಗೈ ಸಮುದಾಯದ ಮುಖಂಡರ ಸಭೆಯಲ್ಲಿ ಈ ಬಾರಿ ಕಾಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಲು ನಿರ್ಣಯ ಕೈಗೊಂಡರು.

ಪಟ್ಟಣದ ಎಸ್‌ಎನ್ ರೆಸಾರ್ಟ್‌ನಲ್ಲಿ ನಡೆದ ಬಲಗೈ ಸಮುದಾಯದ ಮುಖಂಡರ ಹಾಗೂ ಜನಪ್ರತಿನಿಧಿಗಳ ಸಮಾವೇಶದಲ್ಲಿ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೂ ಬಲಗೈ ಸಮುದಾಯದ ಅಭ್ಯರ್ಥಿ ಟಿಕೆಟ್ ನೀಡದೆ ವಂಚಿಸಲಾಗಿದೆ ಎಂಬ ಅಸಮಾಧಾನದ ಹೊಗೆ ತೇಲಿಬಂತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರಕ್ಕೆ ಬಲಗೈ ಅಭ್ಯರ್ಥಿಗೆ ಟಿಕೆಟ್ ಕೊಡುವ ಬಗ್ಗೆ ಎಐಸಿಸಿಯಿಂದ ಭರವಸೆ ದೊರಕಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಮತಚಲಾಯಿಸಲು ಒಮ್ಮತದಿಂದ ತೀರ್ಮಾನ ಕೈಗೊಂಡರು.ವರ್ತೂರು ಹೇಳಿಕೆಗೆ ಖಂಡನೆ

ಬಳಿಕ ಮಾತನಾಡಿದ ಜಿಲ್ಲೆಯ ಬಲಗೈ ಸಮುದಾಯದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಭಾಷಣದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಮೀಸಲಾತಿಯನ್ನು ತೆಗೆದು ಹಾಕಿ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಸಿ.ಎಂ.ಆರ್.ಶ್ರೀನಾಥ್‌ರನ್ನು ಎಂಪಿ ಮಾಡಲಾಗುವುದು ಎಂದು ಹೇಳಿರುವುದನ್ನು ತೀವ್ರವಾಗಿ ಖಂಡಿಸಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳದ ಪ್ರಧಾನಿ ಮೋದಿರನ್ನು ಮೂರನೇ ಬಾರಿ ಪ್ರಧಾನಿ ಮಾಡುವುದರಲ್ಲಿ ಅರ್ಥವಿಲ್ಲ,ಸ್ಥಳಿಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿ ಹೋದ ಕಡೆಯಲ್ಲಾ ಎಸ್‌ಡಿಎ ಅಭ್ಯರ್ಥಿ ಮಲ್ಲೇಶಬಾಬುರನ್ನು ಗೆಲ್ಲಿಸಿ ಮೋದಿ ಕೈಬಲಪಡಿಸಿ ಎಂದು ಹೇಳುತ್ತಿದ್ದಾರೆ, ಹತ್ತು ವರ್ಷಗಳಲ್ಲಿ ಮೋದಿ ದೇಶಕ್ಕಾಗಿ ಏನು ಮಾಡಿದ್ದಾರಂತ ಅವರ ಕೈಬಲಪಡಿಸಬೇಕು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಬಲಗೈ ಸಮುದಾಯದ ಮಖಂಡರಾದ ಪಿಚ್ಚಹಳ್ಳಿ ಗೋವಿಂದರಾಜು, ಜಯದೇವ್,ವೆಂಕಟರಾಮ್, ಹುಣಸನಹಳ್ಳಿ ವೆಂಕಟೇಶ್, ಚಿಕ್ಕನಾರಾಯಣ್,ಅ.ನಾ.ಹರೀಶ್, ವಕ್ಕಲೇರಿ ರಾಜಪ್ಪ, ವಿಜಿಕುಮಾರ್, ವೆಂಕಟಸ್ವಾಮಿ ಮತ್ತಿತರರು ಇದ್ದರು.

Share this article