ದೇಶಪಾಂಡೆ ‘ಸಿಎಂ’ ಹೇಳಿಕೆ ಸಂಚಲನ ! ಮಾಧ್ಯಮದ ಎದುರು ಆಸೆ ಹೇಳಬಾರದಿತ್ತು- ಡಿಕೆಶಿ

Published : Sep 03, 2024, 10:16 AM IST
RV Deshpande

ಸಾರಾಂಶ

ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು :  ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.   , ನಾನು ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿಯೇ ಆಗಬೇಕು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇದೆ, ನನಗಷ್ಟೇ ಅಲ್ಲ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಎಂದಿದ್ದು, ಈ ಹೇಳಿಕೆ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ. 

ಮಾಧ್ಯಮದ ಎದುರು ಆಸೆ ಹೇಳಬಾರದಿತ್ತು

ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ದೇಶಪಾಂಡೆ ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮದ ಮುಂದೆ ಅದನ್ನು ಹೇಳಬಾರದಿತ್ತು. ಅವರು ಹಿರಿಯರಿದ್ದಾರೆ. ಅವರಿಗೆ ನೀಡಬೇಕಾದ ಗೌರವ ನೀಡಲಾಗುವುದು ಎಂದು   ಡಿ.ಕೆ.ಶಿವಕುಮಾರ್‌ ಹೇಳಿದರು. 

ಸಿಎಂ ಆಗಲು ಹಗಲು ಕನಸು ಕಾಣಬೇಡಿರಿ

ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣಲು ಯಾರೂ ಹೋಗುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಶಕ್ತಿಶಾಲಿ ಆಗಿದ್ದಾರೆ, ಇನ್ನಷ್ಟು ಶಕ್ತಿಶಾಲಿಯಾಗುತ್ತಾರೆ. ದೇಶಪಾಂಡೆ ಮಾತಾಡಿರುವುದು ಒಂದು ವಿಷಯವೇ ಅಲ್ಲ ಎಂದು ಬೃಹತ್‌ ಕೈಗಾರಿಕಾ ಸಚಿವ  ಎಂ.ಬಿ.ಪಾಟೀಲ್‌ ಹೇಳಿದರು. 

ದೇಶಪಾಂಡೆ ಸಿಎಂ ಆಗಲು ಅರ್ಹರು

ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಉತ್ತಮ ಸ್ನೇಹಿತರು. ಅವರಿಬ್ಬರು ಏನು ಮಾತಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ದೇಶಪಾಂಡೆ ಸಿಎಂ ಆಗಲು ಅರ್ಹ ವ್ಯಕ್ತಿ. ಅವರಿಗೆ ಹುದ್ದೆ ಸಿಕ್ಕರೆ ಮೊದಲು ಖುಷಿ ಪಡುವ ವ್ಯಕ್ತಿ ನಾನು ಎಂದು  ಮೀನುಗಾರಿಕೆ ಸಚಿವ  ಮಂಕಾಳ ವೈದ್ಯ ತಿಳಿಸಿದರು.

ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ

ಧಾರವಾಡ :  ಪಕ್ಷದ ಹಿರಿಯರಾದ ಆರ್‌.ವಿ. ದೇಶಪಾಂಡೆ ಹಾಗೂ ನಾನೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಆಸೆ ಇದ್ದೇ ಇರುತ್ತದೆ. ಆದರೆ, ನಮ್ಮಲ್ಲಿ ಮುಖ್ಯಮಂತ್ರಿಗಳ ಖುರ್ಚಿ ಖಾಲಿ ಇಲ್ಲ. ಅಷ್ಟಕ್ಕೂ ಈ ವಿಚಾರದ ಬಗ್ಗೆ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆಯೇ? ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ ಎಂದು ಸಚಿವ ಜಮೀರ ಅಹಮದ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಟ್ಟು ಪೂರ್ತಿ ಐದು ವರ್ಷಗಳ ಕಾಲ ಆಡಳಿತ ಮಾಡುತ್ತಾರೆ. ಪ್ರಾಸಿಕ್ಯೂಷನ್ ಪ್ರಕರಣದಿಂದ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಕುತ್ತೂ ಇಲ್ಲ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನಿದೆ? ರಾಜ್ಯಪಾಲರ ವಕೀಲರು ಸಿದ್ದರಾಮಯ್ಯ ಅವರ ಬೇನಾಮಿ ಆಸ್ತಿ ಎನ್ನುವಂತೆ ವಾದ ಮಾಡಿದ್ದಾರೆ. ಆದರೆ, ಇದರಲ್ಲಿ ಸಿದ್ದರಾಮಯ್ಯ ಪಾತ್ರವೇ ಇಲ್ಲ ಎಂದ ಅವರು, ಕುಮಾರಸ್ವಾಮಿ ಅವರ ಮೇಲೆ ಲೋಕಾಯುಕ್ತ ಪ್ರಕರಣವಿದೆ. ಅದಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿಲ್ಲ ಏತಕ್ಕೆ ಎಂದು ಪ್ರಶ್ನಿಸಿದರು.

ಕೋವಿಡ್ ಕಾಲದ ಅವ್ಯವಹಾರದ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಮೀರ್‌ ಅಹಮದ್‌, ಅವೆಲ್ಲ ಬಹಳ ಹಗರಣಗಳಿವೆ. ನಾವು ಇಷ್ಟು ದಿನ ಸುಮ್ಮನೆ ಕುಳಿತಿದ್ದೇ ತಪ್ಪು. ದ್ವೇಷ ರಾಜಕಾರಣ ಮಾಡಿದ್ದು ಯಾರು? ಏನೂ ಇಲ್ಲದೇ ಸಿದ್ದರಾಮಯ್ಯ ವಿರುದ್ಧ ಆರೋಪ‌ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಭಯ ಬೀಳುವುದಿಲ್ಲ. ಅವರು ಟಗರು ಇದ್ದಂತೆ. ಟಗರು ಡುರ್ರ್.... ಎಂದು ಓಡುತ್ತದೆ ಎಂದು ಸಮರ್ಥಿಸಿಕೊಂಡರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ: ಸಿಎಂ ಖಡಕ್‌ ನುಡಿ
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ