ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು - ಹುಷಾರು ಅಶೋಕ್, ನೀನೇ ಸತ್ತು ಹೋಗ್ತೀಯ : ಸಿಎಂ

Published : Mar 26, 2026, 12:26 PM IST
CM Siddaramaiah

ಸಾರಾಂಶ

‘ನಾನು ದೇವೇಗೌಡರ ಪಕ್ಷದಲ್ಲಿ ಇರಲಿಲ್ಲ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು. ಅವರು ಕೇಳಿಸಿಕೊಳ್ಳಲಿ ಎಂದೇ ಈ ಮಾತು ಹೇಳುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

 ವಿಧಾನಸಭೆ :  ‘ನಾನು ದೇವೇಗೌಡರ ಪಕ್ಷದಲ್ಲಿ ಇರಲಿಲ್ಲ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು. ಅವರು ಕೇಳಿಸಿಕೊಳ್ಳಲಿ ಎಂದೇ ಈ ಮಾತು ಹೇಳುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು ಸಿದ್ದರಾಮಯ್ಯ ಅವರ ಮನೆದೇವರ ವಿಚಾರ ಪ್ರಸ್ತಾಪಿಸಿದರು.

ಆಗ ಸಿದ್ದರಾಮಯ್ಯ ಅವರು, ನಮ್ಮ ಮನೆ ದೇವರು ಸಿದ್ದರಾಮೇಶ್ವರ. ನಾನು ಅದಕ್ಕಾಗಿಯೇ ಸಿದ್ದರಾಮ, ಸಿದ್ದರಾಮಯ್ಯ. ನಮ್ಮ ತಂದೆಯ ಹೆಸರು ಸಿದ್ದರಾಮೇಗೌಡ’ ಎಂದು ಹೇಳಿದರು.

ಅದಕ್ಕೆ ಆರ್‌.ಅಶೋಕ್, ‘ಆ ಗೌಡ ಎಂದು ಇರುವುದಕ್ಕಾಗಿಯೇ ನೀವು ದೇವೇಗೌಡರ ಪಕ್ಷದಲ್ಲಿದ್ದದ್ದು’ ಎಂದು ಕಾಲೆಳೆದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ದೇವೇಗೌಡರ ಪಕ್ಷದಲ್ಲಿ ಇರಲಿಲ್ಲ. ದೇವೇಗೌಡರು ನಮ್ಮ ಪಕ್ಷದಲ್ಲಿದ್ದರು’ ಎಂದರು.

ಆರ್.ಅಶೋಕ್‌ ಅವರು ಜೋರಾಗಿ ನಗುತ್ತಾ, ‘ಇದನ್ನೇನಾದರೂ ದೇವೇಗೌಡರು ಕೇಳಿಸಿಕೊಂಡರೆ ಅಷ್ಟೇ’ ಎಂದು ತಮಾಷೆ ಮಾಡಿದರು.

ಸಿದ್ದರಾಮಯ್ಯ ಅವರು, ‘ಅವರು ಕೇಳಿಸಿಕೊಳ್ಳಲಿ ಎಂದೇ ಹೇಳುತ್ತಿದ್ದೇನೆ. ಬೇಕಿದ್ದರೆ ಜಿ.ಟಿ.ದೇವೇಗೌಡ ಇಲ್ಲೇ ಇದ್ದಾನೆ ಕೇಳಿ. ಜೆಡಿಎಸ್‌ ಪಕ್ಷದಲ್ಲಿದ್ದಾಗ ನಾನು ಆರು ವರ್ಷ ರಾಜ್ಯಾಧ್ಯಕ್ಷ. ಪಕ್ಷ ಕಟ್ಟಿದವನು ನಾನೇ. ದೇವೇಗೌಡರು ಆಗ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರು. ಹಾಗಾದರೆ ದೇವೇಗೌಡರು ಯಾರ ಪಕ್ಷದಲ್ಲಿದ್ದಂತೆ?’ ಎಂದು ಪ್ರಶ್ನಿಸಿದರು.

ನೀವು ಜೆಡಿಎಸ್‌ನಿಂದ ಬಾಯಿಗೆ ಬಂದಂಗೆ ಬೈಸ್ಕೊಂಡು ಈಗ ಅವರೊಂದಿಗೆ ಸೇರಿಕೊಂಡಿದ್ದೀರಿ. ಅವರು ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಸಿ.ಎಂ.ಇಬ್ರಾಹಿಂ ಪಕ್ಷ ಬಿಡುವಾಗಲೂ ನೀರು ಕುಡಿಸಿಬಿಡುತ್ತಾರೆ ಹೋಗಬೇಡ ಎಂದು ಹೇಳಿದೆ. ಇಬ್ರಾಹಿಂ ಇದ್ದಿದ್ದರೆ ಈಗ ನಮ್ಮ ಸರ್ಕಾರದಲ್ಲಿ ಸಚಿವನಾಗಿರುತ್ತಿದ್ದ ಎಂದು ಹೇಳಿದರು.

ದೇವೇಗೌಡರ ಮಾತು ಯಾಕೆ ಕೇಳಲಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ‘ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದೇವೆ ನೀವು ಕೂಡ ಬನ್ನಿ ಎಂದು ಕರೆದಿದ್ದೆ. ಆದರೆ ಮಾಡಬಾರದು ಎಂದು ತಾಕೀತು ಮಾಡಿದರು. ಆದರೂ ನಾನು ಭಾಗವಹಿಸಿದ್ದೆ ಎಂಬ ಕಾರಣಕ್ಕೆ ನನ್ನನ್ನು ಉಚ್ಛಾಟನೆ ಮಾಡಿದರು. ಹೀಗಾಗಿ ಕಾಂಗ್ರೆಸ್‌ ಸೇರಿದೆ’ ಎಂದು ವಿವರಿಸಿದರು.

ಹುಷಾರು ಅಶೋಕ್, ನೀನೇ ಸತ್ತು ಹೋಗ್ತೀಯ: ನನ್ನ ಬಳಿ ಪಾಶುಪತಾಸ್ತ್ರ ಇದೆ: ಸಿದ್ದರಾಮಯ್ಯ

‘ಆರ್‌.ಅಶೋಕ್‌ ನಿನ್ನ ಬಳಿ ಬ್ರಹ್ಮಾಸ್ತ್ರ ಇಲ್ಲ. ಯಾವುದೋ ಅಸ್ತ್ರಕ್ಕೆ ಯಾವುದೋ ಅಸ್ತ್ರ ಬಿಟ್ಟರೆ ನೀನೇ ಸುತ್ತು ಹೋಗಿಬಿಡ್ತೀಯಾ ಹುಷಾರು!’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ ಘಟನೆ ಸದನದಲ್ಲಿ ನಡೆಯಿತು.

ರಾಜ್ಯದ ಜಿಡಿಪಿ ಸಾಧನೆ ಬಗ್ಗೆ ಶ್ಲಾಘಿಸಿರುವ ಪತ್ರಿಕಾ ವರದಿ ಉಲ್ಲೇಖಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯವನ್ನು ಸಾಲಗಾರರ ರಾಜ್ಯ ಎಂದು ಯಾವ ಬಾಯಿಯಲ್ಲಿ ಹೇಳುತ್ತೀರಿ ಎಂದು ಕಿಡಿಕಾರಿದರು.

ಆಗ ಆರ್‌.ಅಶೋಕ್‌ ಬೇರೊಂದು ಪತ್ರಿಕೆಯ ವರದಿ ಉಲ್ಲೇಖಿಸಿ, ನಾನು ಹೇಳಿದ್ದಲ್ಲ ಸರ್‌... ಪತ್ರಿಕೆಯಲ್ಲೇ ಬರೆದಿದ್ದಾರೆ ಎಂದು ತೋರಿಸಿದರು. ಆಗ ಸಿದ್ದರಾಮಯ್ಯ, ಅದನ್ನು ನೀನು ಮೊದಲು ಹೇಳಿಲ್ಲ. ಈಗ ನಾನು ಹೇಳಿದ ಮೇಲೆ ಹುಡುಕಾಡಿ ತಂದು ತೋರಿಸುತ್ತಿದ್ದಿಯಾ ಎಂದರು.

ಆರ್.ಅಶೋಕ್‌, ‘ಇರಲಿ ಸರ್‌ ಎಲ್ಲಾ ಅಸ್ತ್ರ ಒಂದೇ ಸಲ ಬಿಡಲು ಆಗಲ್ಲವಲ್ಲ. ಸಮಯ ಬಂದಾಗ ಬಿಡಬೇಕು’ ಎಂದು ತಿರುಗೇಟು ನೀಡಿದರು.

ಇದಕ್ಕೆ ಸಿದ್ದರಾಮಯ್ಯ, ‘ಅಷ್ಟೊತ್ತಿಗೆ ನೀನೇ ಸತ್ತು ಬಿಡ್ತೀಯ. ನಾನು ಪಾಶುಪತಾಸ್ತ್ರ ಬಿಟ್ಟಿದ್ದೇನೆ. ಯಾವುದೋ ಅಸ್ತ್ರಕ್ಕೆ ಯಾವುದೋ ಅಸ್ತ್ರ ಬಿಟ್ಟರೆ ಹೇಗೆ?’ ಎಂದು ಪ್ರಶ್ನಿಸಿದರು.

ಆರ್‌. ಅಶೋಕ್‌, ನನ್ನ ಬಳಿ ಬ್ರಹ್ಮಾಸ್ತ್ರ ಇದೆ ಎಂದರು.

ಸಿದ್ದರಾಮಯ್ಯ, ‘ಸಿದ್ದರಾಮಯ್ಯ ಬ್ರಹ್ಮಾಸ್ತ್ರ ನಿನ್ನ ಹತ್ತಿರ ಇರಬೇಕಲ್ಲ, ಇಲ್ಲ. ನನ್ನ ಬಳಿ ಪಾಶುಪತಾಸ್ತ್ರ ಇದೆ. ಪಾಶುಪತಾಸ್ತ್ರ ಈಶ್ವರ ಅರ್ಜುನನಿಗೆ ಕೊಟ್ಟದ್ದು. ಈಶ್ವರನ ಮುಂದೆ ಬ್ರಹ್ಮಂದು ಏನೂ ನಡೆಯಲ್ಲ’ ಎಂದು ಹೇಳಿದರು

ಆಗ ಆರ್‌.ಅಶೋಕ್‌, ‘ನೀವು ದೇವರನ್ನೇ ನಂಬುವುದಿಲ್ಲ. ದೇವರೆಲ್ಲರೂ ನಮ್ಮ ಕಡೆ ಇದ್ದಾರೆ. ರಾಮ, ಈಶ್ವರ ಎಲ್ಲರೂ ನಮ್ಮ ಕಡೆ ಇದ್ದಾರೆ’ ಎಂದರು.

ಸಿದ್ದರಾಮಯ್ಯ, ‘ರಾಮ-ಸೀತೆ ಒಂದು ಪುರಾಣ. ಆದರೆ, ದೇವರು ಇದ್ದಾನೆ ಎಂಬುದನ್ನು ನಾನು ನಂಬುತ್ತೇನೆ. ನಮ್ಮನೆ ದೇವರು ಸಿದ್ದರಾಮೇಶ್ವರ. ಅದಕ್ಕಾಗೇ ನನ್ನ ಸಿದ್ದರಾಮಯ್ಯ ಅಂತಾ ಕರೆಯೋದು. ನಮ್ಮಪ್ಪನ ಹೆಸರು ಸಿದ್ದರಾಮೇಗೌಡ’ ಎಂದು ಸ್ಪಷ್ಟಪಡಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮತ್ತೆ ಸಚಿವ ಸಂಪುಟ ಪುನಾರಚನೆ ಗುಸುಗುಸು
ಆರ್ಥಿಕ ಪ್ರಗತೀಲಿ ರಾಜ್ಯ ಸರ್ಕಾರ ಕೇಂದ್ರಕ್ಕಿಂತ ಬೆಸ್ಟ್‌