ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ

KannadaprabhaNewsNetwork | Published : Nov 14, 2023 1:18 AM

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪೂಜೆ ಹಾಗೂ ಹಾಲಾರುವೆ ಉತ್ಸವ, ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಹಾಲಾರವೆ ಉತ್ಸವದಲ್ಲಿ ಪಾಲ್ಗೊಂಡ ಅಪಾರ ಭಕ್ತಸ್ತೋಮ । ಸಾಲೂರು ಶ್ರೀಗಳ ಸಮ್ಮುಖದಲ್ಲಿ ಸ್ವಾಮಿಗೆ ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ ಸೇವೆ

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪೂಜೆ ಹಾಗೂ ಹಾಲಾರುವೆ ಉತ್ಸವ, ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಮಾದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಮಹಾಮಂಗಳಾರತಿಯೊಂದಿಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಸಂಭ್ರಮದಿಂದ ನಡೆದವು.

ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ದೇವಾಲಯವನ್ನು ವಿಶೇಷ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಈ ಅಮಾವಾಸ್ಯೆಯಲ್ಲಿ ಹಾಲಾರುವೆ ಉತ್ಸವಕ್ಕೆ ಬರುವ ಭಕ್ತರು ಮಲೆ ಮಾದೇಶ್ವರನ ದರ್ಶನ ಪಡೆದು ಕಣ್ತುಂಬಿಕೊಂಡರು.

ದೀಪಾವಳಿ ಜಾತ್ರೆಯ ವೇಳೆ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹಾಲಾರವೆ ಉತ್ಸವ ನಡೆಯುತ್ತಲಿದ್ದು, ತಲತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಸ್ಥಳೀಯ ಬೇಡಗಂಪಣ ಜನಾಂಗದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಉಪವಾಸವಿರುತ್ತಾರೆ. ಬೆಳ್ಳಂಬೆಳಗ್ಗೆ 7 ಕಿ.ಮೀ ದಟ್ಟ ಅರಣ್ಯ ಪ್ರದೇಶದ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳದಲ್ಲಿ ವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಬಂದು ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿ ಆಲದಿಂದ ತಂದಿರುವ ಜಲವನ್ನು ಮಾದಪ್ಪನಿಗೆ ಅಭಿಷೇಕ ಮಾಡುತ್ತಾರೆ. ಈ ಮೂಲಕ ಹಾಲಾರವೆ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಕ್ಷೇತ್ರದ ಪ್ರಾದಿಕಾರ ಕಾರ್ಯದರ್ಶಿ ಸರಸ್ವತಿ ಸೇರಿದಂತೆ ಬೇಡಗಂಪಣ ಅರ್ಚಕರು, ಸಿಬ್ಬಂದಿ ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ದೀಪಾವಳಿ ಅಮಾವಾಸ್ಯೆ ಹಾಲಾರವೆ ಉತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹರಿದು ಬಂದ ಭಕ್ತ ಸಾಗರ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ಹುಲಿ ವಾಹನ ಉತ್ಸವಗಳಲ್ಲಿ ಪಾಲ್ಗೊಂಡು ಮಲೆ ಮಾದೇಶ್ವರನ ದರ್ಶನ ಪಡೆದು ಭಕ್ತಿಯಿಂದ ಉಘೇ ಮಾದಪ್ಪ ಉಘೆ ಮಾದಪ್ಪ ಎಂದು ಜೈಕಾರ ಹಾಕುವುದು ಮುಗಿಲು ಮುಟ್ಟುವಂತಿತ್ತು.

ದೀಪಾವಳಿ ಮಹಾ ರಥೋತ್ಸವ:

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ದೀಪಾವಳಿ ಅಂಗವಾಗಿ ಹಲವಾರು ಉತ್ಸವಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆದಿದ್ದು, ಮಂಗಳವಾರ ಬೆಳಗ್ಗೆ 8.50 ರಿಂದ 9.10ರವರೆಗೆ ದೀಪಾವಳಿ ಮಹಾರಥೋತ್ಸವ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿಯವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ರಥೋತ್ಸವವನ್ನು ಕಣ್ಣು ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಿಯಲ್ಲಿ ಜಮಾವಣೆಗೊಂಡಿದ್ದಾರೆ. ನಾಳೆ ನಡೆಯುವ ಮಹಾ ರಥೋತ್ಸವ ಸಂದರ್ಭದಲ್ಲಿ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಇಲಾಖೆ ಕಟ್ಟುನಿಟ್ಟಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

----------------

13ಸಿಎಚ್‌ಎನ್‌58

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹಾಲಾರವೆ ಉತ್ಸವದಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಕಾರ್ಯದರ್ಶಿ ಸರಸ್ವತಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

------------------------------------

13ಸಿಎಚ್‌ಎನ್‌55

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ದೇವಾಲಯ.

-----------------

13ಸಿಎಚ್‌ಎನ್‌52

ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ವಿಶೇಷ ಸಂದರ್ಭ ದಲ್ಲಿ ಭಕ್ತರಿಂದ ಹುಲಿವಾಹನ ಉತ್ಸವ ನಡೆಯಿತು.

--------------

13ಸಿಎಚ್‌ಎನ್‌54

ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಹಾಲಾರವೆ ಉತ್ಸವ ಸಂದರ್ಭದಲ್ಲಿ ಮಾದಪ್ಪನ ಭಕ್ತರು ಮಲಗಿರುವುದನ್ನು ದಾಟಿಕೊಂಡು ಹೋಗುತ್ತಿರುವುದು.

-----------

13ಸಿಎಚ್‌ಎನ್‌53

ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಬಸವನ ಉತ್ಸವ ನಡೆಯಿತು .

-------------

13ಸಿಎಚ್‌ಎನ್‌56

ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹಾಲಾರವೆ ಉತ್ಸವ.

Share this article