ರಾಜ್ಯದ ಬಿಹಾರಿ ಮತದಾರರಿಗೆ ಡಿಕೆಶಿ ಗಾಳ

KannadaprabhaNewsNetwork |  
Published : Nov 03, 2025, 01:45 AM IST
DK Shivakumar

ಸಾರಾಂಶ

ಬಿಹಾರ ಚುನಾವಣೆ ಮತದಾನಕ್ಕೆ ರಾಜ್ಯದಿಂದ ತೆರಳುವ ಅಲ್ಲಿನ ಮತದಾರರಿಗೆ ಮೂರು ದಿನ ರಜೆ ನೀಡುವಂತೆ ಸಂಸ್ಥೆ, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು :  ಬಿಹಾರ ಚುನಾವಣೆ ಮತದಾನಕ್ಕೆ ರಾಜ್ಯದಿಂದ ತೆರಳುವ ಅಲ್ಲಿನ ಮತದಾರರಿಗೆ ಮೂರು ದಿನ ರಜೆ ನೀಡುವಂತೆ ಸಂಸ್ಥೆ, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಭಾನುವಾರ ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಬಿಹಾರದ ಅಭಿವೃದ್ಧಿಗಾಗಿ ಮಹಾಗಟಬಂಧನ್‌ಗೆ ಮತ ನೀಡಿ ಹಾಗೂ ಸಂಬಂಧಿಕರಿಗೂ ಮತ ನೀಡುವಂತೆ ತಿಳಿಸಿ ಎಂದರು.

ನನಗೆ ದೊಡ್ಡ ಸ್ಥಾನ ಸಿಗಬೇಕು ಎಂದು ನೀವೆಲ್ಲರೂ ಹೇಳಿದ್ದೀರಿ. ಅದು ಮುಖ್ಯವಲ್ಲ. ಬಿಹಾರದಲ್ಲಿ ಮಹಾಗಟ ಬಂಧನ್ ಅಧಿಕಾರಕ್ಕೆ ತಂದರೆ ನನಗೆ ಎಲ್ಲಾ ಸ್ಥಾನವನ್ನು ನೀವು ಕೊಟ್ಟಂತೆ. ನಿತೀಶ್ ಕುಮಾರ್ ರಾಜಕೀಯದ ಕೊನೆಗಾಲದಲ್ಲಿದ್ದು, ಅವರ ಕೈಯಲ್ಲಿ ಬಿಹಾರವಿಲ್ಲ. ಬಿಹಾರದ‌ ಅಭಿವೃದ್ಧಿಗೆ ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ರಾಹುಲ್ ಗಾಂಧಿ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಈ ಕಾರಣಕ್ಕೆ ಅವರಿಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.

ನಿವೇಶನ ಕೊಡ್ತೇನೆ:

ಬಿಹಾರದವರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅತ್ಯುತ್ತಮ ‌ಕಟ್ಟಡಗಳನ್ನು ನಿರ್ಮಾಣ ಮಾಡಲು ಸಾಧ್ಯವಿರುತ್ತಿರಲಿಲ್ಲ. ಕರ್ನಾಟಕ ಬಿಹಾರ ಸಂಘದ ಸಮುದಾಯ ಭವನಕ್ಕೆ ನಿವೇಶನ ನೀಡಲಾಗುವುದು. ಇನ್ನೊಂದು ತಿಂಗಳಲ್ಲಿ ಬೇರೆ ರಾಜ್ಯದ ಸಂಘಟನೆಗಳಿಗೆ ನಿವೇಶನ ಮೀಸಲಿಡುವ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕು. ಸಂಘದ ಪದಾಧಿಕಾರಿಗಳು ಮುಂದಿನ ವಾರದಲ್ಲಿ ಬಂದು ಭೇಟಿ ಮಾಡಿ ಎಂದು ಸೂಚಿಸಿದರು.

ಕರ್ನಾಟಕದ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ. ನಮ್ಮ ಮಾದರಿಯನ್ನು ನೋಡಿ ಟೀಕೆ ಮಾಡಿದವರೇ ಈಗ ಕರ್ನಾಟಕ ಮಾದರಿ ಅನುಸರಿಸುತ್ತಿದ್ದಾರೆ. ಬಿಹಾರದಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ‌ಘೋಷಣೆ ಮಾಡಲಾಗಿದೆ. ಕೊರೋನಾ ವೇಳೆ ಎರಡರಷ್ಟು ಬಸ್ ದರ ಏರಿಕೆ ಮಾಡಿ ಊರಿಗೆ ಮರಳುವವರಿಗೆ ತೊಂದರೆ ನೀಡಲಾಗಿತ್ತು. ಆಗ ಹೋರಾಟ ಮಾಡಿ ಕಾರ್ಮಿಕರನ್ನು ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಲಾಯಿತು ಎಂದು ಸ್ಮರಿಸಿದರು.

ನಾವು ಬಿಹಾರಿಗಳಲ್ಲ, ಕನ್ನಡದ ಬಿಹಾರಿಗಳು

ಡಿ.ಕೆ.ಶಿವಕುಮಾರ್ ಅವರು ಕನ್ನಡದ ಭಾಷಣವನ್ನು ‌ಬಿಹಾರಿ ಭಾಷೆಗೆ ತರ್ಜುಮೆ ಮಾಡಲು ಹೋದಾಗ, ನಾವು ಬಿಹಾರಿಗಳಲ್ಲ, ಕನ್ನಡದ ಬಿಹಾರಿಗಳು. ನ.1 ರಂದು ರಾಜ್ಯೋತ್ಸವ ‌ಆಚರಿಸಿದ್ದೇವೆ ಎಂದು ಸಭಿಕರು ಹೇಳಿದರು. ಆಗ ಡಿ.ಕೆ.ಶಿವಕುಮಾರ್, ಕನ್ನಡ ಕಲಿತಿರುವುದು ನೋಡಿದರೆ ಸಂತಸವಾಗುತ್ತಿದೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’