ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಡಿ.ಕೆ. ಶಿವಕುಮಾರ್ : ರಾಜ್ಯಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿ

KannadaprabhaNewsNetwork |  
Published : Aug 01, 2024, 12:20 AM ISTUpdated : Aug 01, 2024, 05:30 AM IST
narendra modi dk shivakumar

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅದರಲ್ಲೂ ನೀರಾವರಿಗೆ ಸ್ವಲ್ಪವೂ ಅನುದಾನ ಬಂದಿಲ್ಲವೆಂದು ಪ್ರಧಾನಿ ಗಮನಕ್ಕೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

  ನವದೆಹಲಿ : ರಾಜಧಾನಿ ಬೆಂಗಳೂರನ್ನು ಗಿಫ್ಟ್‌ಸಿಟಿ ಎಂದು ಪರಿಗಣಿಸಿಲ್ಲ. ಹಾಗಾಗಿ ನಗರದಲ್ಲಿ ಸುರಂಗ ರಸ್ತೆ, ಸಿಗ್ನಲ್ ಮುಕ್ತ ರಸ್ತೆ, ಪ್ರಮುಖ ರಸ್ತೆ ಹಾಗೂ ಮಳೆ ನೀರುಗಾಲುವೆಗಳ ಅಭಿವೃದ್ಧಿಗೆ ಮತ್ತು ರಾಜ್ಯದ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಬುಧವಾರ ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅದರಲ್ಲೂ ನೀರಾವರಿಗೆ ಸ್ವಲ್ಪವೂ ಅನುದಾನ ಬಂದಿಲ್ಲವೆಂದು ಪ್ರಧಾನಿ ಗಮನಕ್ಕೆ ತರುವ ಉದ್ದೇಶದಿಂದ ಭೇಟಿ ಮಾಡಲಾಗಿದೆ. ಅತ್ಯಧಿಕ ತೆರಿಗೆ ಕಟ್ಟುವ ಬೆಂಗಳೂರು ನಗರಕ್ಕೆ ಬಜೆಟ್‌ನಲ್ಲಿ ಏನೂ ದೊರೆತಿಲ್ಲ. ಮಹಾರಾಷ್ಟ್ರದಂತೆ ನಮ್ಮನ್ನು ಪರಿಗಣಿಸಬೇಕು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆಎನ್ ನರ್ಮ್ ಯೋಜನೆ ಅಡಿ ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ, ನೆಲಮಂಗಲ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಎಂದು ವಿವರಿಸಲಾಗಿದೆ. ದೇಶಕ್ಕೆ ಒಂದೇ ಗಿಫ್ಟ್‌ಸಿಟಿ ಮಾಡಲು ಸಾಧ್ಯವಿದ್ದು, ಎರಡು ಪ್ರದೇಶಗಳನ್ನು ಮಾಡಲಾಗದು ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ಇದೇ ವೇಳೆ ಹೇಳಿದರು.

ಬೆಂಗಳೂರಿಗೆ ಹೊರಗಿನಿಂದ ಹೆಚ್ಚಿನ ಜನ ಬರುತ್ತಿದ್ದು, ನಗರದ ಮೂಲಸೌರ್ಕಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕಿದೆ. ಬೆಂಗಳೂರಲ್ಲಿ ನೂತನವಾಗಿ ಒಂದಿಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಕೇಂದ್ರ ಸರ್ಕಾರ ನೇರವಾಗಬೇಕು ಎಂದು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕೇಂದ್ರ ಸಂಪುಟ ಸಭೆಯಲ್ಲಿ ಭದ್ರಾ ಮೇಲ್ದಂಡೆ ಪ್ರಸ್ತಾಪ: ಕಳೆದ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಭದ್ರಾ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ನರೇಂದ್ರ ಮೋದಿ ಭರವಸೆ ನೀಡಿರುವುದಾಗಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮೇಕೆದಾಟು ಯೋಜನೆ ನೀವೇ ಬಗೆಹರಿಸಿಕೊಳ್ಳಿ: ಈ ಬಾರಿ ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, 84 ಟಿಎಂಸಿಗಿಂತ ಹೆಚ್ಚು ನೀರು ಬಿಟ್ಟಿದ್ದೇವೆಂದು ಪ್ರಧಾನಿ ಗಮನಕ್ಕೆ ತರಲಾಗಿದೆ. ಮಹದಾಯಿ ಸಮಸ್ಯೆ ಬಗೆಹರಿಸಲು ಒಂದು ಸಭೆ ನಡೆಸುವಂತೆ ಕೇಳಿಕೊಂಡಿದ್ದೇವೆ. ಮೇಕೆದಾಟು ಸಮಸ್ಯೆಯನ್ನು ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ಉತ್ತಮ ಎಂದು ಮೋದಿ ಸಲಹೆ ನೀಡಿದ್ದಾರೆಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಇತಿಹಾಸದಲ್ಲೇ ಹೆಚ್ಚಿನ ನೀರು: 2.25 ಲಕ್ಷ ಕ್ಯುಸೆಕ್ಸ್‌ ನೀರನ್ನು ತಮಿಳುನಾಡಿಗೆ ಮಂಗಳವಾರದ ತನಕ ಹರಿಸಲಾಗಿದೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರು ಹರಿಸಲಾಗಿದೆ. ಮಳೆ ಸ್ವಲ್ಪ ತಗ್ಗಿದ ಕಾರಣಕ್ಕೆ ಒಂದು ಮುಕ್ಕಾಲು ಲಕ್ಷ ಕ್ಯುಸೆಕ್ಸ್‌ ನೀರನ್ನು ಹರಿಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದಲ್ಲಿ ನೀರನ್ನು ಸಂಗ್ರಹ ಮಾಡದೆ ಹೊರ ಬಿಡಲಾಗುತ್ತಿದೆ. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು. ನದಿ ಬಳಿ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

ನಾವು ತಯಾರಿದ್ದೇವೆ: ಮುಡಾ ಅಕ್ರಮ ವಿಚಾರವಾಗಿ ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ''''ಆ ವಿಚಾರ ನನಗೆ ತಿಳಿದಿಲ್ಲ. ಅವರ ಪಾದಯಾತ್ರೆಗೆ ನಾವು ಏನು ಸಿದ್ಧತೆ ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ಮಾತನಾಡುತ್ತೇನೆ'''' ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು