ನಾಗಮಂಗಲ : ಮುಂಬರುವ ನವೆಂಬರ್ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಈ ರಾಜ್ಯದ ಮುಖ್ಯಮಂತ್ರಿ ಆಗುವುದು ಗ್ಯಾರಂಟಿ ಎಂದು ಮಾಜಿ ಸಂಸದ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಎಲ್.ಆರ್.ಶಿವರಾಮೇಗೌಡ ಭವಿಷ್ಯ ನುಡಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮಾರ್ ಶ್ರಮಿಸಿದ್ದಾರೆ. ಡಿಕಶಿ ಮಖ್ಯಮಂತ್ರಿಯಾಗಬೇಕು ಎಂಬುದು ರಾಜ್ಯದ ಜನತೆಯ ಆಶಯವಾಗಿದೆ. ಹೈಕಮಾಂಡ್ ಸಮ್ಮುಖದಲ್ಲಿ ಆಗಿರುವ ಅಧಿಕಾರ ಹಂಚಿಕೆ ಸೂತ್ರದಂತೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏನೇ ಆದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಪರ-ವಿರೋಧ ಸಾಮಾನ್ಯ:
ಕಾವೇರಿ ಆರತಿಯಂತಹ ಒಳ್ಳೆ ಕೆಲಸ ಮಾಡಲು ಸರ್ಕಾರ ಹೊರಟಾಗ ಪರ-ವಿರೋಧ ಇದ್ದೇ ಇರುತ್ತದೆ. ಕಾವೇರಿ ಪೂಜೆಯಿಂದ ರೈತರಿಗೆ ತೊಂದರೆ ಇಲ್ಲ. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡುವ ಮೂಲಕ ದೇಶ-ವಿದೇಶಿಗರ ಗಮನ ಸೆಳೆದು ಉತ್ತಮ ಪ್ರವಾಸಿತಾಣವನ್ನಾಗಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದರು.
ಜಾತಿ ಗಣತಿ ವಿಚಾರದಲ್ಲಿ ಬಿಜೆಪಿಯವರು ಬರೀ ಬೊಬ್ಬೆ ಹೊಡೆಯುತ್ತಾರೆ. ಜಾತಿಗಣತಿಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಒಕ್ಕಲಿಗರು ಗಣತಿಯಲ್ಲಿ ಯಾವ ರೀತಿ ಬರೆಸಬೇಕು ಎಂಬುದನ್ನು ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ಮಾಡಿ ಸಮಾಜದ ಬಂಧುಗಳಿಗೆ ತಿಳಿಸಲಾಗಿದೆ. ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡದೆ ಸರ್ಕಾರ ಕೈಗೊಂಡಿರುವ ಗಣತಿಗೆ ಪ್ರೋತ್ಸಾಹಿಸಲಿ ಎಂದರು.
ಧರ್ಮಸ್ಥಳದ ಕಳಂಕ ನಿವಾರಣೆ:
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಎಸ್ಐಟಿ ರಚಿಸುವ ಸರ್ಕಾರದ ಕ್ರಮವನ್ನು ಮೊದಲು ಸ್ವಾಗತ ಮಾಡಿದ್ದೇ ಬಿಜೆಪಿ. ಈಗ ವಿರೋಧ ಮಾಡುತ್ತಿದ್ದಾರೆ. ಎಸ್ಐಟಿ ರಚನೆ ಮಾಡಿದ್ದರಿಂದಲೇ ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕ ನಿವಾರಣೆಯಾಗಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಎಸ್ಐಟಿ ರಚನೆಯಿಂದ ಸತ್ಯ ಹೊರಬಂದಿದೆ. ಕ್ಷೇತ್ರಕ್ಕೆ ಅಂಟಿದ್ದ ಕಳಂಕ ಹೋಗಿದೆ ಎಂದು ಹೇಳಿದ್ದಾರೆ. ಆದರೆ, ಈ ಬಿಜೆಪಿಯವರು ಮಾತ್ರ ರಾಜಕೀಯ ದೊಂಬರಾಟ ಆಡುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೂ ಧರ್ಮವನ್ನು ಬಿಜೆಪಿಯವರಿಗಿಂತ ಕಾಂಗ್ರೆಸ್‌ನವರೇ ಹೆಚ್ಚು ರಕ್ಷಿಸುತ್ತಿದ್ದಾರೆ. ಸಮಾಜದ ಎಲ್ಲಾ ಜಾತಿ ಜನಾಂಗವನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಮುಂದೆ ಕೋಮುವಾದಿ ಬಿಜೆಪಿ ಮುಖವಾಡ ಬಯಲಾಗಿದೆ. ಬುರುಡೆ ಗ್ಯಾಂಗ್ ಧರ್ಮಸ್ಥಳ ವಿಚಾರದಲ್ಲಿ ಇಲ್ಲ ಸಲ್ಲದ ಆರೋಪ ಮಾಡಿರುವುದಲ್ಲದೇ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನೂ ಮುಚ್ಚಿಟ್ಟಿದ್ದಾರೆ. ಸರ್ಕಾರವನ್ನೇ ಯಾಮಾರಿಸಿರುವ ಬುರುಡೆ ಗ್ಯಾಂಗನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.
ಮಳೆಗಾಲದಲ್ಲಿ ರಸ್ತೆಗಳು ಗುಂಡಿ ಬೀಳುವುದು ಸಹಜ. ರಾಜದಾನಿಯಲ್ಲಿ ಗುಂಡಿ ಮುಚ್ಚಲು ಡಿ.ಕೆ.ಶಿವಕುಮಾರ್ ಅವರು ೭೫೦ ಕೋಟಿ ರು.ಹಣ ಬಿಡುಗಡೆ ಮಾಡಿ ಶೀಘ್ರವಾಗಿ ಗುಂಡಿ ಮುಚ್ಚಲು ಆದೇಶಿಸಿದ್ದಾರೆ. ಇವ್ಯಾವುದರ ಅರಿವೇ ಇಲ್ಲದ ಬಿಜೆಪಿಗೆ ರಾಜಕೀಯ ದೊಂಬರಾಟ ಮಾಡಲೊರಟಿದ್ದಾರೆ ಎಂದು ಟೀಕಿಸಿದರು.