ಹೈಕಮಾಂಡ್‌ ಒತ್ತಡಕ್ಕೆ ಮಣಿದರಾ ರಾಜಣ್ಣ?

KannadaprabhaNewsNetwork |  
Published : Mar 26, 2025, 01:33 AM IST
ರಾಜಣ್ಣ | Kannada Prabha

ಸಾರಾಂಶ

ತಮ್ಮ ವಿರುದ್ಧದ ಹನಿಟ್ರ್ಯಾಪ್‌ ಪ್ರಯತ್ನದ ಬಗ್ಗೆ ಪೊಲೀಸ್‌ ದೂರು ನೀಡಿ ಉನ್ನತ ಮಟ್ಟದ ತನಿಖೆ ಬಯಸಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನಿಲುವು ಬದಲಿಸಿ ದೂರಿನ ಬದಲು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದು ಏಕೆ? ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿರುವ ಈ ಪ್ರಶ್ನೆಗೆ ಮೂರು ಪ್ರಮುಖ ಕಾರಣ ನೀಡಲಾಗುತ್ತಿದೆ.

ರಾಜಣ್ಣ ಯೂ ಟರ್ನ್ ಬಗ್ಗೆ ಭಾರೀ ಚರ್ಚೆ: ಕುತೂಹಲ ಹುಟ್ಟಿಸಿದ ಸಚಿವರ ನಡೆ

==

ಉಲ್ಟಾ ಹೊಡೆಯಲು 3 ಕಾರಣ?

ಸ್ವಪಕ್ಷದ ನಾಯಕನ ವಿರುದ್ಧವೇ ಈ ರೀತಿಯ ಆರೋಪ ಮಾಡುವುದು ಬೇಡ ಎಂಬ ಹೈಕಮಾಂಡ್‌ ಸೂಚನೆ

ಹನಿಟ್ರ್ಯಾಪ್‌ ಬ್ರಹ್ಮಾಸ್ತ್ರ ಯಾರಿಗೆ ನಾಟಬೇಕಿತ್ತೋ ಅವರಿಗೆ ನಾಟಿದೆ, ಇನ್ನೂ ಬೆಳೆಸಿದರೆ ಸಮಸ್ಯೆ ಎಂಬ ಶಂಕೆ

ಸದನದಲ್ಲಿ ಪ್ರಸ್ತಾಪವಾದ ಈ ವಿಚಾರ ಬಿಜೆಪಿಗೆ, ಪಕ್ಷದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಸ್ತ್ರವಾಗುವ ಆತಂಕ ಹಿನ್ನೆಲೆ

==

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ವಿರುದ್ಧದ ಹನಿಟ್ರ್ಯಾಪ್‌ ಪ್ರಯತ್ನದ ಬಗ್ಗೆ ಪೊಲೀಸ್‌ ದೂರು ನೀಡಿ ಉನ್ನತ ಮಟ್ಟದ ತನಿಖೆ ಬಯಸಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನಿಲುವು ಬದಲಿಸಿ ದೂರಿನ ಬದಲು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದು ಏಕೆ? ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿರುವ ಈ ಪ್ರಶ್ನೆಗೆ ಮೂರು ಪ್ರಮುಖ ಕಾರಣ ನೀಡಲಾಗುತ್ತಿದೆ.

1- ಸಚಿವ ಸ್ಥಾನದಲ್ಲಿದ್ದು ಸದನದಲ್ಲಿ ಇಂಥ ಗಂಭೀರ ಆರೋಪ ಮಾಡಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಅಸ್ತ್ರ ನೀಡಿದ ರಾಜಣ್ಣ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಕೆಂಡಾಮಂಡಲಗೊಂಡು ಈ ಪ್ರಕರಣದ ಸಾರಗುಂದಿಸುವಂತೆ ಸ್ಪಷ್ಟ ತಾಕೀತು ನೀಡಿರುವುದು.

2- ಇಡೀ ಹನಿಟ್ರ್ಯಾಪ್‌ ಆರೋಪವೆಂಬ ಬ್ರಹ್ಮಾಸ್ತ್ರ ಯಾರ ವಿರುದ್ಧ ಪ್ರಯೋಗಿಸಲಾಗಿತ್ತೋ ಅವರಿಗೆ ನಾಟಿದೆ ಎಂಬುದು ಮನದಟ್ಟು ಆಗಿರುವುದು.

3. ಇನ್ನೂ ಪ್ರಕರಣ ಮುಂದುವರೆಸಿದರೆ ತಮಗೆ ಬೂಮ್ ರಾಂಗ್‌ ಆಗಬಹುದು ಎಂಬ ಶಂಕೆ ಹುಟ್ಟಿರುವುದು.

ತಮ್ಮ ವಿರೋಧಿಗಳನ್ನು ಹದ್ದುಬಸ್ತಿನಲ್ಲಿಡಲು ಹನಿ ಟ್ರ್ಯಾಪ್ ಎಂಬ ಕೀಳು ತಂತ್ರಗಾರಿಕೆ ರಾಜ್ಯ ಕಾಂಗ್ರೆಸ್‌ನ ಬಣ ಗುದ್ದಾಟದ ಪರಿಣಾಮವಾಗಿ ನಡೆದಿದೆ ಎಂಬ ವಿಚಾರ ಗುಪ್ತಗಾಮಿನಿಯಾಗಿತ್ತು. ಆದರೆ, ಯಾವಾಗ ರಾಜಣ್ಣ ಅವರು ಶಾಸನ ಸಭೆಯಲ್ಲಿ ಈ ಆರೋಪ ಮಾಡಿದರೋ ಅದು ದೊಡ್ಡಮಟ್ಟದಲ್ಲಿ ಬಹಿರಂಗಗೊಂಡಿದ್ದು ಮಾತ್ರವಲ್ಲದೆ ರಾಷ್ಟ್ರಮಟ್ಟದ ಚರ್ಚೆಗೂ ಕಾರಣವಾಗಿದೆ.

ಸಹಜವಾಗಿಯೇ ಪ್ರತಿಪಕ್ಷ ಬಿಜೆಪಿ ಇದನ್ನು ರಾಷ್ಟ್ರಮಟ್ಟದ ವಿಚಾರವಾಗಿ ತೆಗೆದುಕೊಂಡಿದೆ. ಇನ್ನು ನ್ಯಾಯಾಧೀಶರು ಸಹ ಟ್ರ್ಯಾಪ್‌ ಆಗಿದ್ದಾರೆ ಎಂಬ ಹೇಳಿಕೆ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲೂ ಈ ಬಗ್ಗೆ ಪಿಐಎಲ್‌ ಸಲ್ಲಿಕೆಯಾಗಿ ವಿಚಾರಣೆಗೆ ಅಂಗೀಕಾರವೂ ಪಡೆದಿದೆ.

ಸುಪ್ರೀಂಕೋರ್ಟ್ ಏನಾದರೂ ಈ ವಿಚಾರ ಗಂಭೀರವಾಗಿ ತೆಗೆದುಕೊಂಡರೆ ಏನಾಗಬಹುದು ಎಂಬ ಭೀತಿ ನಿರ್ಮಾಣ‍ವಾಗಿದೆ. (ಸದನದಲ್ಲಿ ನೀಡಿರುವ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲದ ಕಾರಣ ಸುಪ್ರೀಂ ಕೋರ್ಟ್ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ)

ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ಗುದ್ದಾಟಕ್ಕೆ ಸೀಮಿತವಾಗಬೇಕಿದ್ದ ಈ ವಿಚಾರ ಬೇರೆಯೇ ಆಯಾಮ ತೆಗೆದುಕೊಳ್ಳತೊಡಗಿದಂತೆ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ನಾಯಕರಿಗೆ ಯಾವ ಸಂದೇಶ ನೀಡಬೇಕೋ ಆ ಸಂದೇಶ ನೀಡಿದೆ.

ಈ ಸಂದೇಶ ನೀಡುವ ಉದ್ದೇಶದಿಂದಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರನ್ನು ಭೇಟಿ ಮಾಡಿ ಹನಿಟ್ರ್ಯಾಪ್‌ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು. ರಾಜಣ್ಣ ಗಂಭೀರ ಆರೋಪ ಮಾಡಿಯಾಗಿದೆ. ಅದನ್ನು ಹಾಗೆಯೇ ಸುಮ್ಮನೆ ಬಿಡಲೂ ಆಗುವುದಿಲ್ಲ. ಹಾಗಂತ ದೂರು ನೀಡಿದರೆ ಅದು ತೆಗೆದುಕೊಳ್ಳುವ ರೂಪಾಂತರಗಳನ್ನು ನಿಭಾಯಿಸಲೂ ಆಗುವುದಿಲ್ಲ. ಉಳಿದ ದಾರಿ ವಿಷಯದ ಗಾಂಭೀರ್ಯತೆಯ ಸಾರಗುಂದಿಸುವುದು.

ಮುಖ್ಯಮಂತ್ರಿಯವರೊಂದಿಗಿನ ಚರ್ಚೆಯಲ್ಲಿ ಈ ಹಾದಿಯಲ್ಲೇ ಸಾಗಿ ಎಂದು ಹೈಕಮಾಂಡ್‌ನಿಂದ ಸ್ಪಷ್ಟವಾಗಿ ರವಾನೆಯಾಗಿದೆ ಎನ್ನಲಾಗುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ತಮಗೆ ಹನಿಟ್ರ್ಯಾಪ್‌ ಬಗ್ಗೆ ನೀಡಿದ್ದ ಮಾಹಿತಿಯನ್ನು ಖರ್ಗೆ ಅವರಿಗೆ ನಿಖರವಾಗಿ ರವಾನಿಸಿದ್ದಾರೆ.

ಅಂದರೆ, ಹನಿಟ್ರ್ಯಾಪ್‌ ಎಂಬ ಪ್ರಯತ್ನ ಏಕೆ ಮತ್ತು ಯಾರಿಂದ ನಡೆಯುತ್ತಿದೆ? ವಿರುದ್ಧವಾಗಿ ಹೋದವರನ್ನು ಹದ್ದುಬಸ್ತಿನಲ್ಲಿಡುವ ಈ ಪ್ರಯತ್ನ ಹೀಗೆ ಮುಂದುವರೆದರೇ ಹಾಗೂ ಹೈಕಮಾಂಡ್‌ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪಕ್ಷದೊಳಗೆ ಏನೆಲ್ಲ ಆಗಬಹುದು ಎಂಬ ಸಂದೇಶವನ್ನು ಹೈಕಮಾಂಡ್‌ ಆಗಿರುವ ಖರ್ಗೆ ಅವರಿಗೆ ದಾಟಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಇದರ ನಡುವೆಯೇ ಮತ್ತೊಬ್ಬ ಸಚಿವ ಸತೀಶ್‌ ಜಾರಕಿಹೊಳಿ ಅವರು ಖುದ್ದಾಗಿ ದೆಹಲಿಗೆ ಭೇಟಿ ನೀಡಿ ವರಿಷ್ಟರಾದ ಕೆ.ಸಿ. ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಇಡೀ ಪ್ರಕರಣದ ಹಿನ್ನೆಲೆಯ ಬಗ್ಗೆ ಸಕಾರಣ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಹೀಗೆ ಯಾರು ಹನಿಟ್ರ್ಯಾಪ್‌ ಮಾಡಿಸಿದ್ದಾರೆ ಹಾಗೂ ಅವರ ಉದ್ದೇಶ ಏನೆಂಬುದನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿಕೊಟ್ಟಿರುವ ನಂಬಿಕೆ ಬಂದಿರುವುದು ಹಾಗೂ ಹೈಕಮಾಂಡ್‌ ವಿಚಾರ ತೆಳುಗೊಳಿಸುವಂತೆ ಸೂಚಿಸಿದ ನಂತರ ವಿಷಯ ಮುಂದುವರೆಸಬಾರದು ಎಂಬ ಕಾರಣಕ್ಕೆ ರಾಜಣ್ಣ ಅವರ ದೂರು ನೀಡುವ ನಿರ್ಧಾರ ಮನವಿ ಮಟ್ಟಕ್ಕೆ ಕುಸಿದಿದೆ ಎನ್ನಲಾಗುತ್ತಿದೆ.

ಇದರ ಜತೆಗೆ, ಒಂದು ವೇಳೆ ದೂರು ನೀಡಿ ಅದು ಎಫ್‌ಐಆರ್‌ ಆಗಿ ಗಂಭೀರ ತನಿಖೆ ನಡೆದರೆ ಯಾರ ವಿರುದ್ಧ ಅಸ್ತ್ರ ಪ್ರಯೋಗಿಸಲಾಗಿದೆಯೋ ಅವರು ಪ್ರತ್ಯುತ್ತರ ನೀಡಿದರೆ ವಿಚಾರ ಎಲ್ಲಿಗೆ ಮುಟ್ಟಬಹುದು ಎಂಬ ಶಂಕೆಯೂ ಇರುವುದರಿಂದ ದೂರಿಗೆ ಈ ವಿಚಾರವನ್ನು ಸೀಮಿತಗೊಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

PREV

Recommended Stories

ಕೈ ಒಳ‍ಜಗಳ ಮರೆಸಲು ಆರೆಸ್ಸೆಸ್‌ ವಿರುದ್ಧ ಕುತಂತ್ರ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗಣತಿದಾರರಿಗೆ ಸಿಎಂ ಮಾಹಿತಿ