ಎಲ್ಲೂ ಹೋಗೋಲ್ಲ, ಮತ್ತೆ ಬರುತ್ತೇವೆ: ನಟ ಅಭಿಷೇಕ್ ಅಂಬರೀಶ್

KannadaprabhaNewsNetwork | Updated : Apr 04 2024, 05:06 AM IST

ಸಾರಾಂಶ

ಐದು ವರ್ಷದ ಹಿಂದೆ ಮಂಡ್ಯದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದೆವು. ಅಂಬರೀಶ್ ಅವರ ಪ್ರೀತಿ, ಅಭಿಮಾನ ಎಲ್ಲವೂ ಅಂದು ನಮ್ಮ ಕೈ ಹಿಡಿದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಎಂತಹ ರಾಜಕೀಯ ಸನ್ನಿವೇಶದಲ್ಲಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಚುನಾವಣೆ ಬರುತ್ತೆ, ಹೋಗುತ್ತೆ ಜನರ ಪ್ರೀತಿ-ವಿಶ್ವಾಸ ಶಾಶ್ವತ.

 ಮಂಡ್ಯ :  ನಾವು ಮಂಡ್ಯ ಬಿಟ್ಟು ಎಲ್ಲೂ ಹೋಗೋಲ್ಲ. ಈ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತಿಲ್ಲ. ಮತ್ತೆ ಮಂಡ್ಯಕ್ಕೆ ಬಂದೇ ಬರುತ್ತೇವೆ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದರು.

ನಗರದ ಶ್ರೀಕಾಳಿಕಾಂಬ ಸಮುದಾಯ ಭವನದಲ್ಲಿ ಸಂಸದೆ ಸುಮಲತಾ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಐದು ವರ್ಷದ ಹಿಂದೆ ಮಂಡ್ಯದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದೆವು. ಅಂಬರೀಶ್ ಅವರ ಪ್ರೀತಿ, ಅಭಿಮಾನ ಎಲ್ಲವೂ ಅಂದು ನಮ್ಮ ಕೈ ಹಿಡಿದಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಎಂತಹ ರಾಜಕೀಯ ಸನ್ನಿವೇಶದಲ್ಲಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಚುನಾವಣೆ ಬರುತ್ತೆ, ಹೋಗುತ್ತೆ ಜನರ ಪ್ರೀತಿ-ವಿಶ್ವಾಸ ಶಾಶ್ವತ ಎಂದರು.

ನಮ್ಮ ಹಾದಿ ಹೇಗೆ ಇರಲಿ, ಪರಿಸ್ಥಿತಿ ಏನೇ ಬದಲಾಗಲಿ. ನಾವು ಮಾತ್ರ ಮಂಡ್ಯ ಬಿಟ್ಟು ಹೋಗುವುದಿಲ್ಲ. ಇಲ್ಲಿನ ಜನರ ಋಣ ತೀರಿಸಲು ಕೊನೆಯ ಉಸಿರಿರುವವರೆಗೆ ಉಳಿಯುತ್ತೇವೆ. ಮತ್ತೆ ನಾವು ಬರುತ್ತೇವೆ ಎಂದು ಮುಂದಿನ ಚುನಾವಣೆಗೆ ಆಗಮಿಸುವ ಮುನ್ಸೂಚನೆ ನೀಡಿದರು.

ಅಮ್ಮ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: ದರ್ಶನ್

ಅಮ್ಮ (ಸುಮಲತಾ) ರಾಜಕೀಯವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧನಿದ್ದೇನೆ ಎಂದು ನಟ ದರ್ಶನ್ ತಿಳಿಸಿದರು.

ಪಕ್ಷೇತರ ಸಂಸದೆಯಾಗಿ ಇಷ್ಟೆಲ್ಲಾ ಕೆಲಸ ಮಾಡಿರೋದು ದೊಡ್ಡದು. ರಾಜಕೀಯವಾಗಿ ನನಗೆ ಅಷ್ಟೊಂದು ಜ್ಞಾನವಿಲ್ಲ. ಅಮ್ಮ ಏನು ನಿರ್ಧಾರ ಕೈಗೊಳ್ಳುವರೋ ಅದರಂತೆ ನಾವೂ ನಡೆಯುತ್ತೇವೆ. ತಾಯಿ ಯಾವತ್ತಿದ್ದರೂ ತಾಯಿನೇ. ನಾವು ಆ ಮನೆಯ ಮಕ್ಕಳು. ಅಮ್ಮ ಹೇಳುವ ಮಾತನ್ನು ಕೇಳುವುದಷ್ಟೇ ನಮ್ಮ ಕೆಲಸ. ಅವರು ಏನೇ ನಿರ್ಧಾರ ಮಾಡಿದರೂ ನಾವು ಅವರ ಜೊತೆಗಿರುತ್ತೇವೆ ಎಂದರು.ಆ ಯಮನೇ ಬಂದು ನನ್ನನ್ನು ಕರೆದರೂ ಇರಪ್ಪ.. ನನ್ನ ಅಮ್ಮನದು ಒಂದೇ ಒಂದು ಕೆಲಸ ಇದೆ. ಅದನ್ನು ಮುಗಿಸಿ ಬರುತ್ತೇನೆ. ಏಕೆಂದರೆ, ಆ ಮನೆಗೂ ನಮಗೂ ಅಷ್ಟೊಂದು ಬಾಂಧವ್ಯವಿದೆ. ಕಳೆದ ಬಾರಿ ಬಲಗೈ ಮುರಿದಿತ್ತು. ಈಗ ಎಡಗೈಗೆ ಫ್ರಾಕ್ಚರ್ ಆಗಿದೆ. ನಿನ್ನೆ ಆಪರೇಷನ್ ಇತ್ತು. ಇಲ್ಲಪ್ಪ... ಅಮ್ಮನಿಗೆ ಡೇಟ್ ಕೊಟ್ಟಿದ್ದೇನೆ. ಇವತ್ತು ಅಮ್ಮನ ಕೆಲಸವಿದೆ. ಇವತ್ತು ಮುಗಿಸಿಕೊಂಡು ರಾತ್ರಿ ಅಡ್ಮಿಟ್ ಆಗಿ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ ಎಂದು ಡಾಕ್ಟರ್‌ಗೆ ತಿಳಿಸಿ ಬಂದಿರುವೆ.

Share this article